Advertisement

ಮಹಿಳೆಯರ ಸುರಕ್ಷತೆಗೆ ಓಬವ್ವ ಪಡೆ ರಚನೆ

12:45 PM Dec 10, 2019 | Suhan S |

ರಾಯಚೂರು: ಜಿಲ್ಲೆಯಲ್ಲಿ ಮಹಿಳೆ ಮತ್ತು ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾ ಪೊಲೀಸ್‌ ಇಲಾಖೆ ಓಬವ್ವ ಪಡೆಯನ್ನು ರಚಿಸಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ಚಾಲನೆ ನೀಡಿದರು.

Advertisement

ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಪಡೆಯನ್ನು ರಚಿಸಲಾಗಿದೆ. ಕರಾಟೆ ತರಬೇತಿ ಹೊಂದಿರುವ ಸಿಬ್ಬಂದಿ ಒಳಗೊಂಡ ಈ ಪಡೆ ಮಹಿಳೆಯರ ರಕ್ಷಣೆಗಾಗಿ ಸಂಚರಿಸಲಿದೆ. ಇದರಲ್ಲಿ ತರಬೇತಿ ಪಡೆದ ಮಹಿಳಾ ಪೊಲೀಸರಿರುತ್ತಾರೆ. ಓಬವ್ವ ಪಡೆಯನ್ನು ಎರಡು ತಂಡಗಳನ್ನಾಗಿ ವಿಂಗಡಿಸಿದ್ದು, ವಿಶೇಷ ವಾಹನದಲ್ಲಿ ನಗರಾದ್ಯಂತ ಪೆಟ್ರೋಲಿಂಗ್‌ ನಡೆಸಿ ಕರ್ತವ್ಯ ನಿರ್ವಹಿಸಲಿದೆ. ಸಿಬ್ಬಂದಿಗೆ ತರಬೇತುದಾರರಿಂದ ಕರಾಟೆ, ಯುಎಸಿ ಮಹತ್ವದ ತರಬೇತಿ ನೀಡಲಾಗಿದೆ. ಮಹಿಳೆಯರಿಗೆ ಮಾನಸಿಕ ಸ್ಥೈರ್ಯ, ಧೈರ್ಯ ತುಂಬಲು ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗಿದೆ. ಮಹಿಳಾ ಸಿಬ್ಬಂದಿ ಸನ್ನದ್ಧರಾಗಿದ್ದು, ಪೆಟ್ರೋಲಿಂಗ್‌ ಮಾಡಲು ಅಣಿಯಾಗಿದ್ದಾರೆ.

ತಂಡಕ್ಕೆ ಪ್ರತ್ಯೇಕ ಸಮವಸ್ತ್ರ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳಾ ಎಎಸ್‌ಐ ಉಸ್ತುವಾರಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುವರು. ಮಹಿಳೆಯರ ಮೇಲೆ ಯಾರಾದರೂ ದೌರ್ಜನ್ಯ, ತೊಂದರೆ ನೀಡಿದಲ್ಲಿ 94808 03800 ಈ ಸಂಖ್ಯೆಗೆ ಕರೆ ಮಾಡಿ ವಿವರ ನೀಡಿದಲ್ಲಿ, ಓಬವ್ವ ಪಡೆ ಸಂಬಂಧಿಸಿದ ಸ್ಥಳಕ್ಕೆ ಧಾವಿಸಿ ಸಮಸ್ಯೆ ನಿವಾರಣೆಗೆ ಒತ್ತು ನೀಡಲಿದೆ.

ಚಾಲನೆ ನೀಡಿದ ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ, ಮಹಿಳಾ ಸುರಕ್ಷಾ ವಾಹನವು ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಕಾರ್ಯ ನಿರ್ವಹಿಸಲಿದ್ದು, ನಗರದ ಎಲ್ಲ ಕಾಲೇಜ್‌, ವಿದ್ಯಾರ್ಥಿನಿಯರ ವಸತಿಗೃಹಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಮಾರ್ಕೆಟ್‌, ಇತರೆ ಪ್ರದೇಶಗಳಲ್ಲಿ ನಿರಂತರ ಗಸ್ತು ಮಾಡಲಾಗುತ್ತದೆ. ಸುಖಾಸುಮ್ಮನೆ ತೊಂದರೆ ಕೊಡುವುದು, ನಿಂದಿಸುವುದು, ಕಿರುಕುಳ ನೀಡುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ನಗರದ ಮಹಿಳೆಯರು, ವಿದ್ಯಾರ್ಥಿನಿಯರ ಸುಭದ್ರತೆ ದೃಷ್ಟಿಯಿಂದ ಜಿಲ್ಲಾ ಪೊಲೀಸ್‌ ಇಲಾಖೆ ರೂಪಿಸಿರುವ ಓಬವ್ವ ಪಡೆಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಎಎಸ್ಪಿ ಶ್ರೀಹರಿಬಾಬು, ಡಿವೈಎಸ್ಪಿ ಶೀಲವಂತ, ಪಿಎಸ್‌ಐಗಳಾದ ಉಮೇಶ ಕಾಂಬಳೆ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next