ಬೆಂಗಳೂರು: ಅಮೆರಿಕಾ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ದೇಶದ ವಿವಿಧೆಡೆ ಬಾಂಬ್‌ಸ್ಫೋಟಿಸಲು ಸಂಚು ರೂಪಿಸಿದ್ದ ಆರೋಪ ಸಂಬಂಧ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಅಬ್ದುಲ್ ಸಬೂರ್ ಎಂಬಾತನಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ಅಬ್ದುಲ್ ಸಬೂರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಬಿ.ಎಸ್.ಪಾಟೀಲ್ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಸೋಮವಾರ ವಜಾಗೊಳಿಸಿತು. ಅರ್ಜಿದಾರರ ಮೇಲಿ ರುವುದು ದೇಶದ್ರೋಹ ಹಾಗೂ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ ಗಂಭೀರ ಆರೋಪ.
ಒಂದೊಮ್ಮೆ ಸಂಚಿನಂತೆ ಸ್ಫೋಟ ನಡೆಸಿದ್ದರೆ ದೇಶದಲ್ಲಿ ಸಾವಿರಾರು ಅಮಾಯಕರ ಪ್ರಾಣಕ್ಕೆ ಹಾನಿಯಾಗುತ್ತಿತ್ತು. ಹೀಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣದ ವಿಚಾರಣೆ ಅಧೀನ ನ್ಯಾಯಾಲಯದಲ್ಲಿ ಪೂರ್ಣಗೊಳ್ಳುವ ಮುನ್ನ ಜಾಮೀನು ನೀಡವುದು ಸೂಕ್ತವಲ್ಲ ಎಂದು ತಿಳಿಸಿದ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣವೇನು?: 2015ರ ಜನವರಿಯಲ್ಲಿ ಬೆಂಗ ಳೂರು ಹಾಗೂ ಭಟ್ಕಳದಲ್ಲಿ ನಡೆಸಿದ್ದ ಕಾರ್ಯಾಚರಣೆ ಯಲ್ಲಿ ಭಟ್ಕಳದ ಸೈಯದ್ ಇಸ್ಮಾಯಿಲ್ ಅಫಾಕ್, ಅಬ್ದುಲ್ ಸಬೂರ್, ಸದ್ದಾಂ ಹುಸೇನ್ ಹಾಗೂ ರಿಯಾಜ್ ಅಹಮದ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಆರೋಪಿಗಳ ಮನೆಯಲ್ಲಿ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳು ಸಿಕ್ಕಿದ್ದವು. ಅದರಂತೆ ಅವರ ವಿರುದ್ಧ ತನಿಖೆ ನಡೆಸಿದ್ದ ಎನ್‌ಐಎ, ವಿಶೇಷ ನ್ಯಾಯಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಎನ್‌ಐಎ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಅಬ್ದುಲ್ ಸಬೂರ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.