Advertisement

ಕೆರೆಯಲ್ಲಿನ ಬಾವಿಯಾಯ್ತು ಸಂಜೀವಿನಿ

10:26 AM May 12, 2019 | Naveen |

ಔರಾದ: ಗುಡಪಳ್ಳಿ ಗ್ರಾಪಂ ಆಡಳಿತ ಮಂಡಳಿ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಗ್ರಾಮದ ಮುಖಂಡರ ಸಲಹೆ ಮೇರೆಗೆ ಕೆರೆಯಲ್ಲಿ ತೆರೆದ ಬಾವಿ ಅಗೆದು, ಅದರಿಂದ ಗ್ರಾಮಕ್ಕೆ ನಿತ್ಯ ನೀರು ಪೂರೈಸುವ ಮೂಲಕ ಗ್ರಾಮಸ್ಥರ ನೀರಿನ ಸಮಸ್ಯೆಗೆ ಮುಕ್ತಿ ನೀಡಿದ್ದಾರೆ.

Advertisement

ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜಲಮೂಲಗಳು ಬತ್ತಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುತ್ತಿದೆ. ಅದರಂತೆ ಮೂರು ಸಾವಿರ ಜನಸಂಖ್ಯೆ ಇರುವ ಗುಡಪಳ್ಳಿ ಗ್ರಾಪಂ ಕೇಂದ್ರಸ್ಥಾನದಲ್ಲೇ ನೀರಿನ ಸಮಸ್ಯೆಯಿಂದ ಜನರು ನರಳುವ ಸ್ಥಿತಿ ಉದ್ಭವಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಪಂ ಆಡಳಿತ ಮಂಡಳಿ ಸದಸ್ಯರು, ಅಧ್ಯಕ್ಷರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿಯಲ್ಲಿ ಸಭೆ ನಡೆಸಿ ಗ್ರಾಮದ ಮುಖಂಡರ ಸಲಹೆ ಪಡೆದಿದ್ದಾರೆ. ಮುಖಂಡರ ಸಲಹೆಯಂತೆ ಗ್ರಾಮದ ಕೆರೆಯಲ್ಲಿ ತೆರೆದ ಬಾವಿ ಅಗೆಸಿದ್ದಾರೆ. ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಅವರ ಅನುದಾನದಡಿ 2.5 ಲಕ್ಷ ಮತ್ತು ಸಿಆರ್‌ಎಫ್‌ ಯೋಜನೆಯಲ್ಲಿ 1.5 ಲಕ್ಷ ರೂ. ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ತೆರೆದ ಬಾವಿ ತೋಡಿ ನೀರಿನ ಸಮಸ್ಯೆ ನಿವಾರಿಸಿದ್ದಾರೆ.

ಗ್ರಾಮದಲ್ಲಿನ ನಾಲ್ಕು ಕೊಳವೆ ಬಾವಿಗಳು ವರ್ಷಪೂರ್ತಿ ಸಾರ್ವಜನಿಕರಿಗೆ ನೀರು ಪೂರೈಸುತ್ತಿದ್ದವು. ಈಗ ಅವು ಬತ್ತಿರುವುದರಿಂದ ಕೆರೆಯಲ್ಲಿ ತೆರೆದ ಬಾವಿ ಅಗೆದು, ನಿತ್ಯ ಗ್ರಾಮಸ್ಥರಿಗೆ ನೀರು ಪೂರೈಕೆ ಮಾಡುತ್ತಿದ್ದ ಬೇರೆ ತೆರೆದ ಬಾವಿಗೆ ನೀರು ತುಂಬಿಸಿ, ಅಲ್ಲಿಂದ ಟ್ಯಾಂಕ್‌ ಮೂಲಕ ಗ್ರಾಮದಲ್ಲಿ ಸರಬರಾಜು ಮಾಡಲಾಗುತ್ತಿದೆ. ಗ್ರಾಮದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದ್ದರೆ ನಾಲ್ಕು ಲಕ್ಷಕ್ಕಿಂತ ಹೆಚ್ಚು ಹಣ ಖರ್ಚಾಗುತ್ತಿತ್ತು. ಇಷ್ಟೊಂದು ಪ್ರಮಾಣದಲ್ಲಿ ನೀರು ಸಿಗುತ್ತಿರಲ್ಲಿಲ್ಲ. ಸದ್ಯ ಗ್ರಾಪಂ ಸದಸ್ಯರು ಮತ್ತು ಅಧ್ಯಕ್ಷರ ಉತ್ತಮ ಆಲೋಚನೆಯಿಂದ ಕೆರೆಯಲ್ಲಿ ಅಗೆದ ತೆರೆದ ಬಾವಿಯಲ್ಲಿ ಏಳು ಗಂಟೆ ನಿರಂತರವಾಗಿ ನೀರು ಬರುತ್ತಿದೆ. ಬೇಸಿಗೆ ಮುಗಿಯುವ ತನಕ ಗುಡಪಳ್ಳಿ ಗ್ರಾಮಸ್ಥರಿಗೆ ಬೇಕಾಗುವಷ್ಟು ನೀರು ಸಿಗುತ್ತದೆ.

ಜನರ ಸಮಸ್ಯೆ ಬಗೆಹರಿಸಬೇಕು ಎನ್ನುವ ಉದ್ದೇಶದಿಂದ ಜನರು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ನೀರಿಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳದೆ ಎಲ್ಲರೂ ಸೇರಿ ಕೆರೆಯಲ್ಲಿ ಬಾವಿ ತೆಗೆಸಿದ್ದೇವೆ. ಖಾಸಗಿ ಟ್ಯಾಂಕರ್‌ನಿಂದ ನೀರು ಪೂರೈಸಿದ್ದರೂ ಇಷ್ಟೊಂದು ಜನರಿಗೆ ನೀರು ಸಿಗುತ್ತಿರಲಿಲ್ಲ. ನಮ್ಮ ಶ್ರಮಕ್ಕೆ ತಕ್ಕಂತೆ ನೀರು ಬಂದು ಜನರಿಗೆ ಖುಷಿಯಾಗಿದೆ.
ರವೀಂದ್ರ ರೆಡ್ಡಿ,
ಗ್ರಾಪಂ ಉಪಾಧ್ಯಕ್ಷರು

ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಶ್ರಮಿಸುವ ಮೂಲಕ ಬೇರು ಮಟ್ಟದಿಂದ ಅಳಿಸಿ ಹಾಕಲು ಶ್ರಮಿಸಿದ್ದೇವೆ. ಆಡಳಿತ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರ ಸಹಕಾರದಿಂದ ಗುಡಪಳ್ಳಿ ಗ್ರಾಪಂನಿಂದ ಮಹತ್ವದ ಕೆಲಸ ನಡೆದಿದೆ.
ಶಿವಾನಂದ ಔರಾದೆ,
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು

Advertisement

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಸರ್ಕಾರಿ ಕಚೇರಿಗೆ ಅಲೆಯದಂತೆ, ಪಂಚಾಯಿತಿ ಸಿಬ್ಬಂದಿ, ಅಧಿಕಾರಿಗಳು ಸಭೆ ನಡೆಸಿ ಮಹತ್ವ ನಿರ್ಧಾರ ತೆಗೆದುಕೊಂಡು, ತೆರೆದ ಬಾವಿ ಅಗೆದಿದ್ದೇವೆ. ಇದರಿಂದ ದೊರೆತ ನೀರಿನಿಂದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.
ಇಟಬಾಯಿ, ಗ್ರಾಪಂ ಅಧ್ಯಕ್ಷೆ

ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next