ಔರಾದ: ಪಟ್ಟಣ ಪಂಚಾಯತ ಚುನಾವಣೆಗೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಪ್ರಮುಖ ಬಡಾವಣೆಯಲ್ಲಿ ವಿವಿಧ ಪಕ್ಷದ ಟಿಕೆಟ್ ಆಕಾಂಕ್ಷಿಗಳ ನೀರಿನ ಟ್ಯಾಂಕರ್ ಪೊಲಿಟಿಕ್ಸ್ ಜೋರಾಗಿಯೇ ನಡೆಯುತ್ತಿದೆ.
ಕುಡಿಯುವ ನೀರಿನ ಸಮಸ್ಯೆಯಿಂದ ನರಳುತ್ತಿದ್ದ ಪಟ್ಟಣದ ನಿವಾಸಿಗಳಿಗೆ ಪಟ್ಟಣ ಪಂಚಾಯತ ಅಧಿಕಾರಿಗಳು ಟ್ಯಾಂಕರ್ ಮೂಲಕ ನಿತ್ಯ ಪೂರೈಸಲು ಮುಂದಾಗಿದ್ದಾರೆ. ಅದರಂತೆ ಪ್ರಮುಖ ಬಡಾವಣೆಯಲ್ಲಿ ಮುಂಬರುವ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಉಚಿತವಾಗಿ ಕುಡಿಯುವ ನೀರು ಪೂರೈಸುವ ಸೇವೆಯಲ್ಲಿ ನಿರತರಾಗಿದ್ದಾರೆ.
ಸೇವೆಯಲ್ಲಿದೆ ಸ್ವಾರ್ಥ?: ಪಟ್ಟಣದ ಕನಕ ಬಡಾವಣೆ, ಶಿಕ್ಷಕರ ಬಡಾವಣೆ, ದೇಶಮುಖಗಲ್ಲಿ, ಜನತಾ ಬಡಾವಣೆ ಸೇರಿದಂತೆ ಇನ್ನಿತರ ವಾರ್ಡ್‌ಗಳಲ್ಲಿರುವ ಸ್ಪರ್ಧಿಸಲು ಇಚ್ಛೆವುಳ್ಳ ವ್ಯಕ್ತಿಗಳು ಮತ್ತು ಪಕ್ಷದ ಮುಖಂಡರು ಕಳೆದ ಎರಡು ದಿನಗಳಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಅಲ್ಲದೆ ಸ್ಥಳದಲ್ಲಿಯೇ ಠಿಕಾಣಿ ಹಾಕಿ ಸರತಿ ಸಾಲಿನಲ್ಲಿ ಮಹಿಳೆಯರು ಹಾಗೂ ಯುವಕರು ನಿಂತು ನೀರು ತೆಗೆದುಕೊಂಡು ಹೋಗುವಂತೆ ಮನವಿ ಮಾಡುತ್ತಿರುವ ದೃಶ್ಯಗಳು ಪಟ್ಟಣದಲ್ಲಿ ಕಾಣಿಸುತ್ತಿವೆ.
ಪಟ್ಟಣ ಪಂಚಾಯತನಲ್ಲಿ ಅಧಿಕಾರದ ಅವಧಿಯಲ್ಲಿ ಇದ್ದಾಗ ಮತ್ತು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸದಿರುವ ಕೆಲ ಹಾಲಿ ಸದಸ್ಯರು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸಿರುವ ಯುವ ಉತ್ಸಾಹಿಗಳು ತಾಲೂಕಿನ ಮಮದಾಪುರ, ಬೋರಾಳ, ತೇಗಂಪುರ ಸೇರಿದಂತೆ ಇನ್ನಿತರ ಗ್ರಾಮದಲ್ಲಿನ ಖಾಸಗಿ ವ್ಯಕ್ತಿಗಳ ತೆರೆದ ಬಾವಿ ಮತ್ತು ಕೊಳವೆ ಬಾವಿಯಿಂದ 150 ರೂ. ನೀಡಿ ನೀರು ಖರೀದಿಸುತ್ತಿದ್ದಾರೆ. ಅದರಂತೆ ಖಾಸಗಿ ಟ್ಯಾಂಕರ್‌ಗೆ 250 ರೂ. ಬಾಡಿಗೆ ನೀಡುತ್ತಿದ್ದಾರೆ. ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಸಮಯದಲ್ಲಿ ಚುನಾವಣೆ ಬಂದಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಬೇಕಾಗುವಷ್ಟು ನೀರು ಪೂರೈಕೆ ಮಾಡುತ್ತಿರುವ ಕಾಯಕದಲ್ಲಿ ನಿರತರಾಗಿದ್ದಾರೆ. ಅದರಂತೆ ತಮ್ಮ ಮನೆಗೆ ಬೇಕಾಗುವಷ್ಟು ನೀರು ಸಿಗುತ್ತಿದೆ ಎನ್ನುವ ಸಂತೋಷದಲ್ಲಿ ಬಡಾವಣೆ ನಿವಾಸಿಗಳು ಲಾಭ ಪಡೆದುಕೊಳ್ಳುತ್ತಿದ್ದಾರೆ.
ಟ್ಯಾಂಕರ್ ನೀರು ನೀಡಿದರೇನೂ, ಅಮೃತವನ್ನೂ ಉಣಿಸಿದರು ನಮ್ಮ ವಾರ್ಡ್‌ನಲ್ಲಿ ಉತ್ತಮ ಕೆಲಸ ಮಾಡುವ ಹಾಗೂ ಬಡಾವಣೆ ಅಭಿವೃದ್ಧಿ ಬಗ್ಗೆ ಚಿಂತಿಸುವ ಅಭ್ಯರ್ಥಿಗೆ ಮತ ಹಾಕುತ್ತೇವೆ ಹೊರತು ನೀರಿಗಾಗಿ ನಮ್ಮ ಮತ ಮಾರಾಟ ಮಾಡಿಕೊಳ್ಳುವುದಿಲ್ಲ.
•
ರಾಜೇಶ್ವರಿ ಕನಕ, ಬಡಾವಣೆ ನಿವಾಸಿ
ಬೇಸಿಗೆಯಲ್ಲಿ ನೀರು ಒದಗಿಸುತ್ತಿರುವುದು ಒಳ್ಳೆಯ ಕೆಲಸ. ಅದರಲ್ಲಿಯೂ ಸ್ವಾರ್ಥದ ಬಗ್ಗೆ ವಿಚಾರ ಮಾಡುವುದು ಅಕ್ಷರಶಃ ತಪ್ಪಾಗುತ್ತದೆ. ನೀರಿನಲ್ಲಿ ರಾಜಕೀಯ ಮಾಡಬಾರದು.
•ಬಸವರಾಜ ಶೆಟಕಾರ
ಶೆಟಕಾರ ಬಡಾವಣೆ ನಿವಾಸಿ