Advertisement

ಬರದಲ್ಲೂ ಚಿಮ್ಮಿತು ಬೋರ್‌ವೆಲ್ ನೀರು

10:44 AM May 13, 2019 | Team Udayavani |

ಔರಾದ: ಸುಂಧಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟಗ್ಯಾಳ ಮತ್ತು ನಂದ್ಯಾಳ ಗ್ರಾಮಗಳಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಅಧಿಕಾರಿಗಳು ಮತ್ತು ಪಂಚಾಯತ ಆಡಳಿತ ಮಂಡಳಿಯ ಸದಸ್ಯರು ಸಕಾಲಕ್ಕೆ ಕೊಳವೆ ಬಾವಿ ಕೊರೆಸುವ ಮೂಲಕ ಜನರಿಗೆ ನೀರು ಒದಗಿಸಿ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದ್ದಾರೆ.

Advertisement

ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಗ್ರಾಮಸ್ಥರು ನೀರಿಗಾಗಿ ಮೈಲುಗಟ್ಟಲೆ ಅಲೆದು ಸಾಹಸ ಮಾಡುವಂತಹ ಪರಿಸ್ಥಿತಿಯನ್ನು ಪ್ರಸಕ್ತ ಸಾಲಿನಲ್ಲಿ ಅಳಿಸಿ ಹಾಕುವ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸುಂಧಾಳ ಗ್ರಾಪಂ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಜಲಮೂಲಗಳು ಇವೆ. ಔರಾದ ತಾಲೂಕು ಕೇಂದ್ರ ಸೇರಿದಂತೆ ಮೂರು ಗ್ರಾಪಂನ ಕೆಲ ಗ್ರಾಮಗಳಿಗೆ ನಿತ್ಯ ನೀರು ಪೂರೈಸುವ ಸಾಮರ್ಥ್ಯ ಈ ಪಂಚಾಯತನ ಗ್ರಾಮಗಳಿಗೆ ಇದೆ. ಇಟಗ್ಯಾಳ, ಜಕನಾಳ, ಖಾಂಶೆಪೂರ ಗ್ರಾಮಗಳಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ನೀರಿನ ಸಮಸ್ಯೆ ಉಲ್ಭಣವಾಗಿತ್ತು.

ಪಂಚಾಯತ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆರಂಭವಾಗುವ ಸಮಯದಲ್ಲಿಯೇ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಸದಸ್ಯರು ಪಂಚಾಯತ ಕಚೇರಿಯಲ್ಲಿ ಸಭೆ ನಡೆಸಿದರು. ಪಂಚಾಯತ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಿಗೂ ತೆರಳಿ ನೀರಿನ ಸಮಸ್ಯೆಗಳಿರುವ ಬಡಾವಣೆಗಳಿಗೆ ತಾತ್ಕಾಲಿಕವಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಸಿದರು. ಬಳಿಕ ಕೊಳವೆ ಬಾವಿ ಕೊರೆಸಿ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದಾರೆ.

ಪ್ರತಿವರ್ಷ ಬೇಸಿಯಲ್ಲಿ ಜಕನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಗ್ರಾಮಸ್ಥರು ನರಳುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ ಜನವರಿಯಿಂದಕೇ ನೀರಿನ ಸಮಸ್ಯೆ ಆರಂಭವಾದಾಗ ಗ್ರಾಮದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಲಾಗಿತ್ತು. ಬಳಿಕ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ.

ಸಮಸ್ಯೆ ಮುಕ್ತಿ ಸಿಕ್ಕಿದ್ದು ಹೇಗೆ?: ನೀರಿನ ಸಮಸ್ಯೆಯಿಂದ ಪ್ರತಿವರ್ಷ ಬಳಲುತ್ತಿದ್ದ ಜಕನಾಳ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿದ್ದರಿಂದ ಕೊಳವೆ ಬಾವಿಯಲ್ಲಿ ನೀರು ಬಂದು ಗ್ರಾಮಸ್ಥರ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಸುಂಧಾಳ ಗ್ರಾಪಂ ಕೇಂದ್ರ ಸ್ಥಾನ ಹಾಗೂ ತೇಗಂಪೂರ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಭಣವಾದಾಗ, ತೇಗಂಪೂರ ಕೆರೆ ಪಕ್ಕದಲ್ಲಿಯೇ ಎರಡು ಕೊಳವೆ ಬಾವಿ ಕೊರೆಸಿ ತೇಗಂಪೂರ ಮತ್ತು ಸುಂಧಾಳ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ತೆರೆದ ಬಾವಿಗೆ ನೀರು ತುಂಬಿಸಿ ನೀರಿನ ಸಮಸ್ಯೆಗೆ ಮುಕ್ತಿ ನೀಡಲಾಗಿದೆ. ಯನಗುಂದಾ ಗ್ರಾಮದಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿನ ಸಮಸ್ಯೆ ಶುರುವಾದಾಗ ಸರ್ಕಾರಿ ಶಾಲೆಯ ಆವರಣದಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ. ಅದರಂತೆ ಖಾಶೆಂಪೂರ ಗ್ರಾಮದಲ್ಲೂ ಕೊಳವೆ ಬಾವಿ ಕೊರೆಸಿ ಜನರ ದಾಹ ನಿಗಿಸಲು ಅಧಿಕಾರಿಗಳು ಕ್ರಮ ಕೈಗೊಮಡಿದ್ದಾರೆ.

Advertisement

ವರದಾನವಾದ ಕೊಳವೆ ಬಾವಿ ನೀರು: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕಡಿಮೆಯಾಗಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುತ್ತಿರುವುದು ಒಂದಡೆಯಾದರೆ, ಸುಂಧಾಳ ಗ್ರಾಪಂ ವ್ಯಾಪ್ತಿಯಲ್ಲಿ ಜನವರಿಯಿಂದ ಇಂದಿನವರೆಗೂ ಕೊರೆಸಲಾದ ಏಳು ಕೊಳವೆ ಬಾವಿಗಳ ಪೈಕಿ ಆರರಲ್ಲಿ ನಾಲ್ಕು ಇಂಚು ನೀರು ಬಂದಿದೆ. ಇದರಿಂದ ಅಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರ ಶ್ರಮಕ್ಕೆ ತಕ್ಕ ಫಲ ದೊರೆತಂತಾಗಿದೆ. ಅದಲ್ಲದೇ ಪಂಚಾಯತ ವ್ಯಾಪ್ತಿಯ ಒಂದು ಗ್ರಾಮದಲ್ಲಿಯೂ ನೀರಿನ ಸಮಸ್ಯೆ ಸಧ್ಯಕ್ಕೆ ಇಲ್ಲದಂತಾಗಿದೆ ಎನ್ನುವುದು ನೀರು ಸರಬರಾಜು ಮಾಡುವ ವ್ಯಕ್ತಿಗಳ ಮಾತು.

ಸ್ಥಳ ಪರೀಶೀಲಿಸದೇ ಕಾರ್ಯ: ಕೊಳವೆ ಬಾವಿ ಕೊರೆಸುವಾಗ ಯಾರಿಂದಲೂ ಸ್ಥಳ ಪರಿಶೀಲನೆ ಮಾಡಿಸಿಲ್ಲ. ಜನರಿಗೆ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಅಧಿಕಾರಿಗಳೊಂದಿಗೆ ಮಾತನಾಡಿ, ದೇವರ ಮೇಲೆ ಭಾರ ಹಾಕಿ ಅನುಕೂಲವಾದ ಸ್ಥಳದಲ್ಲಿ ಕೊಳವೆ ಬಾವಿ ಕೊರೆಸಿದ್ದೇವೆ. ಆದರೂ ಕೊರೆಸಿದ ಎಲ್ಲ ಕೊಳವೆ ಬಾವಿ ಪೈಕಿ ಒಂದು ಕೊಳವೆ ಬಾವಿ ಹೊರತುಪಡಿಸಿ ಎಲ್ಲದರಲ್ಲೂ ನೀರು ಬಂದಿದೆ. ಹೀಗೆ ಜನರ ನೀರಿನ ಸಮಸ್ಯೆ ಬಗೆ ಹರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎನ್ನುತ್ತಾರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ. ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುವ ಆರಂಭದಲ್ಲೇ ಸುಂಧಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರಂತೆ ಇನ್ನುಳಿದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಜಾಗೃತರಾಗಿ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕಿದೆ.

ಪ್ರತಿವಾರ ಒಂದು ಗ್ರಾಮದಲ್ಲಿ ಸಭೆ ನಡೆಸಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲಾಗಿದೆ. ಅಭಿವೃದ್ಧಿ ಅಧಿಕಾರಿಗಳ ಶ್ರಮ ಹಾಗೂ ಸದಸ್ಯರ ಸಹಕಾರದಿಂದ ಸಕಾಲಕ್ಕೆ ಜನರ ನೀರಿನ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಾಗಿದೆ.
ಶರಣಪ್ಪ ಪಾಟೀಲ,
ಗ್ರಾಪಂ ಅಧ್ಯಕ್ಷರು ಸುಂಧಾಳ

ನೀರಿನ ಸಮಸ್ಯೆಗೆ ಮುಕ್ತಿ ನೀಡುವುದೇ ನಮ್ಮ ಮೊದಲ ಗುರಿಯಾಗಿತ್ತು. ಅಧ್ಯಕ್ಷರು, ಸದಸ್ಯರು ಮತ್ತು ಪಂಚಾಯತ ವ್ಯಾಪ್ತಿಯ ಎಲ್ಲರ ಸಹಕಾರ ಪಡೆದು ನೀರಿನ ಸಮಸ್ಯೆಗೆ ಪರಿಹಾರ ನೀಡಲಾಗಿದೆ. ಸದ್ಯ ಪಂಚಾಯತ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಕುಡಿಯುವ ನೀರು ಲಭ್ಯವಿದೆ.
ಶಿವಕುಮಾರ ಘಾಟೆ,
ಗ್ರಾಪಂ ಅಭಿವೃದ್ಧಿ ಅಧಿಕಾರಿ

ನೀರಿನ ಸಮಸ್ಯೆಯಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದರೂ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿದರು. ತೇಗಂಪೂರದಲ್ಲಿ ಎರಡು ದಿನಗಳಲ್ಲೇ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಬಗೆ ಹರಿಸುವ ಮೂಲಕ ಪಿಡಿಒ ಅವರು ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ.
ಗಣಪತಿ ದೊಡ್ಡಿ, ಗ್ರಾಪಂ ಸದಸ್ಯ

ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next