Advertisement

ನೀರಿಲ್ಲದೇ ಸ್ಥಗಿತಗೊಂಡಿದ್ದ ಹೆರಿಗೆ ಶಸ್ತ್ರ ಚಿಕಿತ್ಸೆ ಆರಂಭ

10:32 AM May 16, 2019 | Team Udayavani |

ಔರಾದ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿಲ್ಲದೇ ಸ್ಥಗಿತಗೊಂಡಿದ್ದ ಹೆರಿಗೆ ಶಸ್ತ್ರ ಚಿಕಿತ್ಸೆ ಕಾರ್ಯ ಬುಧವಾರ ಪುನಾರಂಭವಾಗಿದೆ. ತಾಲೂಕಿನ 12 ಜನ ಮಹಿಳೆಯರಿಗೆ ಹೆರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ| ಗಾಯಿತ್ರಿ ತಿಳಿಸಿದ್ದಾರೆ.

Advertisement

ತಾಲೂಕಿನ ವಿವಿಧ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಆಶಾ ಕಾರ್ಯಕರ್ತರ ಮೂಲಕ ಜನರಿಗೆ ಜಾಗೃತಿ ಮೂಡಿಸಿದ್ದರಿಂದ ಬುಧವಾರ 12 ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಕಲ್ಪನಾ ಮಾರುತಿ ಬೆಳಕೂಣಿ, ಭಾಗ್ಯಶ್ರೀ ಹಣಮಂತ ಮಮದಾಪುರ, ತಾವಬಾಯಿ ಸುನೀಲ ಡೋಣಗಾಂವ, ಶಿಲ್ಪಾ ನಾಗೇಂದ್ರ ಹಂಗರಗಾ, ಶಕುಂತಲಾ ಬಸಗೊಂಡ, ಪಾರ್ವತಿ ಗುರುನಾಥ ಧೂಪತಮಗಾಂವ, ಸಂತೋಷಿ ಅಶೋಕ ಮಾಳೆಗಾಂವ, ಶಿಲ್ಪಾ ಸಂತೋಷ ಜಮಾಲಪುರ, ಸುರೇಖಾ ಸಂಗ್ರಾಮ ಮುಧೋಳ,ಪೂಜಾ ಔರಾದ, ಸುರೇಖಾ ಚಿಂತಾಕಿ, ಮಂಗಲಾ ಎನ್ನುವರ ಹೆರಿಗೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನೀರಿಲ್ಲ. ಅಗತ್ಯ ಸೌಕರ್ಯಗಳಿಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳವ ಬದಲು ಸಮಸ್ಯೆ ಹೇಗೆ ನಿಭಾಯಿಸಬೇಕು ಎಂದು ಚಿಂತಿಸಿ ಜನರಿಗೆ ಒಳ್ಳೆಯ ಸೇವೆ ನೀಡಲು ಮುಂದಾಗಬೇಕು. ನಮ್ಮ ಆಡಳಿತಾವಧಿಯಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಿಗೆ ಸಮಸ್ಯೆಯಾಗದಂತೆ ಜಾಗೃತಿಯಿಂದ ಕೆಲಸ ಮಾಡಲಾಗುವುದು. ಆಸ್ಪತ್ರೆಗೆ ಬರುವ ರೋಗಿಗಳನ್ನು ದೇವರ ಸಮಾನರು ಎಂದು ಭಾವಿಸಿ ಕೆಲಸ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ ಎಂದು ಡಾ| ಗಾಯಿತ್ರಿ ತಿಳಿಸಿದರು.

ಪ್ರತಿ ಬರಗಾಲದಲ್ಲೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನೀರಿನ ಶಾಪ ಕಾಡುತ್ತಿದೆ. ಆಸ್ಪತ್ರೆಯಲ್ಲಿ ಕೊಳವೆ ಬಾವಿ ಕೊರೆಸುವಂತೆ ಈಗಾಗಲೆ ನಮ್ಮ ಇಲಾಖೆ ಅಧಿಕಾರಿಗಳಿಗೂ ತಿಳಿಸಿದ್ದೇನೆ. ಕೆಲ ದಿನಗಳಲ್ಲಿ ಆಸ್ಪತ್ರೆಯಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೀರಿಲ್ಲದೆ ನಿಂತು ಹೋದ ಶಸ್ತ್ರ ಚಿಕಿತ್ಸೆ ಎಂಬ ವಿಶೇಷ ವರದಿ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಎಂಬುದು ಇಲ್ಲಿ ಗಮನಾರ್ಹ.

Advertisement

ವರದಿಯಿಂದ ಎಚ್ಚುತ್ತುಕೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು ನೂತನ ಆಡಳಿತಾಧಿಕಾರಿಯನ್ನು ನೇಮಕ ಮಾಡಿದರು. ನೂತವಾಗಿ ನೇಮಕವಾದ ಆಡಳಿತಾಧಿಕಾರಿ ಡಾ| ಗಾಯಿತ್ರಿ ಅವರು ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಪತ್ರ ಬರೆದು ನಿತ್ಯ ಆಸ್ಪತ್ರೆಗೆ ನೀರು ಪೂರೈಸುವಂತೆ ಮನವಿ ಮಾಡಿದ್ದರು. ಅದಲ್ಲದೆ ತಮ್ಮ ಸ್ವಂತ ಹಣದಿಂದಲೂ ಆಸ್ಪತ್ರೆಗೆ ನೀರು ಹಾಕಿಸಿಕೊಂಡಿದ್ದರು. ಆದಾದ ಕೆಲವು ದಿನಗಳ ಬಳಿಕ ಶಸ್ತ್ರ ಚಿಕಿತ್ಸೆ ಮತ್ತೆ ಪ್ರಾರಂಭವಾಗಿದೆ.

ಔರಾದ ತಾಲೂಕು ಕೇಂದ್ರ ಸ್ಥಾನವಾಗಿದ್ದರೂ ಕೂಡ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಿದ ದಿನದಿಂದ ಇಂದಿನವರೆಗೂ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಬುಧವಾರ ಪೂಜಾ ಸಂತೋಷ ಹಂಗರಗಾ ಎಂಬುವರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಹೆಣ್ಣು ಮಗು ಜನಿಸಿದೆ. ಅಲ್ಲದೇ ಇದೇ ಸಂದರ್ಭದಲ್ಲಿ ಸಹಜ ಹೆರಿಗೆ ಕೂಡ ಆಗಿದ್ದು, ಗಂಡು ಮಗು ಜನಿಸಿದೆ. ತಾಯಿ ಮಕ್ಕಳು ಆರೋಗ್ಯದಿಂದ ಇದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇನ್ನೂ ಮುಂದೆ ಹೆರಿಗೆ ಶಸ್ತ್ರ ಚಿಕಿತ್ಸೆಗೆ ಮಾಡಿಸಿಕೊಳ್ಳಲು ಬಿದರಗೆ ಹೋಗುವ ದಿನಗಳು ದೂರಾಗಲಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next