Advertisement

ನೀರಿಲ್ಲದೇ ಸಾರ್ವಜನಿಕ ಶೌಚಾಲಯಕ್ಕೆ ಬೀಗ

03:43 PM May 01, 2019 | Team Udayavani |

ಔರಾದ: ನೀರಿನ ಸಮಸ್ಯೆ ಪಟ್ಟಣದ ಜನರಿಗಷ್ಟೇ ಅಲ್ಲ ಸಾರ್ವಜನಿಕ ಶೌಚಾಲಯಕ್ಕೂ ತಟ್ಟಿದೆ. ನೀರಿಲ್ಲದ ಕಾರಣ ಪಟ್ಟಣದ ಎರಡು ಶೌಚಾಲಗಳಿಗೆ ಬೀಗ ಹಾಕಲಾಗಿದೆ.

Advertisement

ಪ್ರಸಕ್ತ ಸಾಲಿನಲ್ಲಿ ಮಳೆ ಕಡಿಮೆ ಪ್ರಮಾಣದಲ್ಲಿ ಆಗಿಸುವುದರಿಂದ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಪಟ್ಟಣದ ನಿವಾಸಿಗಳು ನಿತ್ಯ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೆ, ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಎರಡು ಶೌಚಾಲಯಗಳ‌ಲ್ಲಿ ಬಳಸಲು ನೀರು ಇಲ್ಲದೆ ಮುಚ್ಚಲಾಗಿದೆ. ಗಣೇಶ ಮಾರ್ಕೇಟ್ ಹಾಗೂ ಜನತಾ ಬಡಾವಣೆಯ ಶೌಚಾಲಯಗಳಿಗೂ ಬೀಗ ಹಾಕಲಾಗಿದೆ.

ಸರ್ಕಾರಿ ಕಚೇರಿ ಕೆಲಸಗಳಿಗಾಗಿ ಪಟ್ಟಣಕ್ಕೆ ಬರುವ ಜನರು ಹಾಗೂ ಪಟ್ಟಣದ ನಿವಾಸಿಗಳು ಬಸ್‌ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಹೋಗುವಂತಹ ಅನಿವಾರ್ಯತೆ ಬಂದಿದೆ. ಸಾರಿಗೆ ಸಂಸ್ಥೆ ಅಧೀನದಲ್ಲಿರುವ ಬಸ್‌ ನಿಲ್ದಾಣದ ಶೌಚಾಲಯ ನಿರ್ವಹಣೆಕಾರರು, ಖಾಸಗಿ ವ್ಯಕ್ತಿಗಳಿಂದ ಅಧಿಕ ಹಣ ನೀಡಿ ಟ್ಯಾಂಕರ್‌ ಮೂಲಕ ನೀರು ತರಿಸಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ. ಅಲ್ಲದೆ ಈ ಹಿಂದೆ ಶೌಚಾಲಯಕ್ಕೆ ಬರುವ ವ್ಯಕ್ತಿಗಳಿಂದ 6 ರೂ. ಪಡೆಯಲಾಗುತ್ತಿತ್ತು. ಈಗ ಶೌಚಾಲಯ ನಿರ್ವಹಣೆ ಮಾಡುವ ವ್ಯಕ್ತಿಗಳು ಪ್ರತಿಯೊಬ್ಬರಿಂದ 10 ರೂ. ಪಡೆದುಕೊಳ್ಳುತ್ತಿದ್ದಾರೆ.

ಪಟ್ಟಣದ ಪಂಚಾಯತ, ತಾಲೂಕು ಆಡಳಿತಾಧಿಕಾರಿಗಳು ಮತ್ತು ಜಿಲ್ಲಾಡಳಿತಗಳು ಕೂಡಲೆ ಪಟ್ಟಣದಲ್ಲಿ ಉಲ್ಭಣವಾದ ನೀರಿನ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಪಟ್ಟಣದ ನಿವಾಸಿಗಳು ನೀರಿಗಾಗಿ ಜೀವ ಬಿಡುವ ಸ್ಥಿತಿ ಕೂಡ ಕೆಲವೇ ದಿನಗಳಲ್ಲಿ ಬಹುವುದು.

ಟೆಂಡರ್‌ ಪ್ರಗತಿಯಲ್ಲಿದೆ: ಈಗಾಗಲೇ ಪಟ್ಟಣದಲ್ಲಿ ಉದ್ಭವಾದ ನೀರಿನ ಸಮಸ್ಯೆ ಬಗೆ ಹರಿಸಲು ಖಾಸಗಿ ವ್ಯಕ್ತಿಗಳಿಂದ ಟ್ಯಾಂಕರ್‌ ನೀರು ಪೂರೈಸಲು ಟೆಂಡರ್‌ ಕರೆಯಲಾಗಿದೆ. ಟೆಂಡರ್‌ನಲ್ಲಿ 20ರಿಂದ 30 ಜನ ಖಾಸಗಿ ಟ್ಯಾಂಕರ್‌ ಮಾಲೀಕರು ನೀರು ಸರಬರಾಜು ಮಾಡಲು ಒಪ್ಪಿಗೆ ನೀಡಿದ್ದಾರೆ. ಮಂಗಳವಾರ ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ಆದೇಶ ಪ್ರತಿ ನೀಡಿ ಪ್ರತಿಯೊಂದು ವಾರ್ಡ್‌ಗೂ ಅಲ್ಲಿನ ಜನಸಂಖ್ಯೆ ಅನುಗುಣವಾಗಿ ನೀರು ಸರಬರಾಜು ಮಾಡಲಾಗುತ್ತದೆ ಎಂದು ಪಪಂ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ. ಅದಲ್ಲದೆ ತಾಲೂಕಿನ ತೇಗಂಪೂರ ಹಾಗೂ ಬೋರಾಳ ಗ್ರಾಮದಲ್ಲಿ ಮೂರು ದಿನಗಳಲ್ಲಿ ಕೊಳವೆ ಬಾವಿ ಕೊರೆಸಿ ನೀರು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

Advertisement

ಪಟ್ಟಣದ ನಿವಾಸಿಗಳು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಜನರ ಕಷ್ಟ ಬಗೆ ಹರಿಸಲು ಪಟ್ಟಣ ಪಂಚಾಯತ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರವಾಗಿ ಜನರೊಂದಿಗೆ ಇದ್ದಾರೆ. ನಾಳೆಯಿಂದ ಪ್ರತಿವಾರ್ಡ್‌ಗೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಆಗಲಿದೆ. ಸಾರ್ವಜನಿಕ ಶೌಚಾಲಯಕ್ಕೂ ಟ್ಯಾಂಕರ್‌ ಮೂಲಕ ನೀರು ಪೂರೈಸಿ ಆರಂಭಿಸಲಾಗುವುದು.
ವಿಠಲ ಹಾದಿಮನಿ,
ಪಪಂ ಮುಖ್ಯಾಧಿಕಾರಿ

ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಸಾರ್ವಜನಿಕ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಅಧಿಕಾರಿಗಳು ಶೀಘ್ರದಲ್ಲಿ ಜನರಿಗೆ ಕುಡಿಯುವ ನೀರು ಸಿಗುವಂತೆ ಮಾಡಬೇಕು. ಇಲ್ಲವಾದಲ್ಲಿ ಜಲಕ್ಕಾಗಿ ತಾಲೂಕಿನಲ್ಲಿ ದೊಡ್ಡ ಹೋರಾಟವೇ ಶುರುವಾಗುತ್ತದೆ.
ಪವನ ಪಂಚಾಕ್ಷರೆ, ಸ್ಥಳೀಯ ನಿವಾಸಿ

ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next