Advertisement

ಕುಡಿಯುವ ನೀರು ಪೂರೈಕೆಯಲ್ಲಿ ತಾರತಮ್ಯ-ಆಕ್ರೋಶ

05:01 PM Apr 29, 2019 | Team Udayavani |

ಔರಾದ: ಪಟ್ಟದ ರಾಮನಗರ ಬಡಾವಣೆಗೆ ಟ್ಯಾಂಕರ್‌ ನೀರು ಪೂರೈಸುವಲ್ಲಿ ಪಟ್ಟಣ ಪಂಚಾಯತ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿ ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪಟ್ಟಣ ಪಂಚಾಯತ ವ್ಯಾಪ್ತಿಯ ಪ್ರಮುಖ ಬಡಾವಣೆಗಳಿಗೆ ಎರಡು ದಿನಗಳಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ರಾಮನಗರ ಬಡಾವಣೆ ಸಾವಿರ ಜನಸಂಖ್ಯೆ ಹೊಂದಿರುವ ಕೂಲಿ ಕಾರ್ಮಿಕರು ಹಾಗೂ ಹಿಂದುಳಿದ ವರ್ಗದ ಜನರು ವಾಸಿಸುವ ಬಡಾವಣೆಯಾಗಿದೆ. ಆದರೂ ಅಧಿಕಾರಿಗಳು ಮಾತ್ರ ಇಲ್ಲಿ ನೀರು ಸರಬರಾಜು ಮಾಡುತ್ತಿಲ್ಲ.

ಬಡಾವಣೆಯಲ್ಲಿರುವ ಕುಡಿಯುವ ನೀರಿನ ಮೂಲಗಳು ಸಂಪೂರ್ಣ ಖಾಲಿಯಾಗಿದ್ದು, ನಿವಾಸಿಗಳು ಹನಿ ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಬಡಾವಣೆಗೆ ನೀರು ಬಾರದಿರುವುದರಿಂದ ಇಲ್ಲಿನ ನಿವಾಸಿಗಳು ಸ್ನಾನ ಮಾಡಲು ಕೂಡ ಯೋಚಿಸಬೇಕಾದ ಸ್ಥಿತಿ ಬಂದಿದೆ. ಅಲ್ಲದೇ ಬಡಾವಣೆಯಲ್ಲಿ ನೀರು ದೊರೆಯದಿರುವುದರಿಂದ ಕೆಲವರು ತಮ್ಮ ಸಂಬಂಧಿಕರ ಮನೆಗೆ ವಲಸೆ ಹೋಗುವ ವಿಚಾರದಲ್ಲಿದ್ದಾರೆ.

ಈ ಹಿನ್ನೆಲೆಯಲ್ಲಿ ನೀರು ಸರಬರಾಜು ಮಾಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಪಟ್ಟಣದ ನಿವಾಸಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಸಹ ಬರೆದಿದ್ದಾರೆ.

ಪಟ್ಟಣದಲ್ಲಿ ಉಲ್ಬಣವಾಗಿರುವ ನೀರಿನ ಸಮಸ್ಯೆಗೆ ಮುಕ್ತಿ ನೀಡಲು ಪಪಂ ಸಿಬ್ಬಂದಿ ಹಾಗೂ ನಾವು ಶಕ್ತಿ ಮೀರಿ ಶ್ರಮಿಸುತ್ತಿದೇವೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಜಾಗ್ರತೆಯಿಂದ ಕರ್ತವ್ಯ ನಿರ್ವಹಿಸಲು ಮುಂದಾಗುತ್ತೇವೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

ರಾಮನಗರ ಬಡಾವಣೆಯಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು ಇರುವುದರಿಂದ ನೀರಿಗಾಗಿ ಖಾಸಗಿ ವ್ಯಕ್ತಿಗಳ ತೆರೆದ ಬಾವಿಗೆ ಹೋಗುವ ಅನಿವಾರ್ಯತೆ ಬಂದಿದೆ. ಟ್ಯಾಂಕರ್‌ ನೀರು ಖರೀದಿಸಿ ಬಳಸುವ ಸಾಮರ್ಥ ಇಲ್ಲಿನ ನಿವಾಸಿಗಳಿಗೆ ಇಲ್ಲ. ಆದ್ದರಿಂದ ಪಟ್ಟಣ ಪಂಚಾಯತ ಅಧಿಕಾರಿಗಳು ಬಡವರ ಬಡಾವಣೆಗೂ ನೀರು ಪೂರೈಸಲು ಮುಂದಾಗಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಎರಡು ದಿನಗಳಲ್ಲಿ ನಮ್ಮ ಬಡಾವಣೆಗೂ ಟ್ಯಾಂಕರ್‌ ನೀರು ಸರಬರಾಜು ಮಾಡಬೇಕು. ಇಲ್ಲವಾದಲ್ಲಿ ಖಾಲಿ ಕೋಡಗಳೊಂದಿಗೆ ಪಂಚಾಯತ ಕಚೇರಿ ಎದುರು ಹೋರಾಟ ಮಾಡುತ್ತೇವೆ ಎಂದು ಬಡಾವಣೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡಾವಣೆಯಲ್ಲಿ ನೀರು ಇಲ್ಲದೇ ನಾವು ಸತ್ತು-ಬದುಕುತ್ತಿದ್ದೇವೆ. ಶ್ರೀಮಂತರು ವಾಸಿಸುವ ಬಡಾವಣೆಗಳಲ್ಲಿ ಪಂಚಾಯತ ಅಧಿಕಾರಿಗಳು ಟ್ಯಾಂಕರ್‌ ನೀರು ಸರಬರಾಜು ಮಾಡುತ್ತಿದ್ದಾರೆ. ಬಡವರು ವಾಸವಿರುವ ರಾಮನಗರಕ್ಕೆ ನೀರು ಪೂರೈಸುತ್ತಿಲ್ಲ.
ನೀಲಕಠರಾವ್‌ ತೋರಣಾ ಬಡಾವಣೆ ಮುಖಂಡ

ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next