ಔರಾದ: ಪಟ್ಟಣ ಪಂಚಾಯತಗೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ ಔರಾದ ಪಟ್ಟಣದಲ್ಲಿ ಟಿಕೆಟ್ ಆಕಾಂಕ್ಷಿಗಳು ತಮ್ಮ ಪಕ್ಷದ ಮುಖಂಡರ ಮನೆಗೆ ಹೋಗಿ ರಾಜಕೀಯ ಕಸರತ್ತು ನಡೆಸುತ್ತಿದ್ದಾರೆ.
ಈ ಮೊದಲು 14 ವಾರ್ಡ್‌ಗಳಿಂದ ಕೂಡಿದ್ದ ಪಟ್ಟಣ ಪಂಚಾಯತ ಈಗ 20 ವಾರ್ಡ್‌ಗಳಾಗಿ ಮಾರ್ಪಟ್ಟಿದೆ. ಈ ಹಿಂದೆ ಪಂಚಾಯತನಲ್ಲಿ ಕೆಜೆಪಿ ಹಾಗೂ ಬಿಜೆಪಿ ಸದಸ್ಯರು ಸಮಬಲ ಸಾಧಿಸಿದ್ದರು. ಕೆಜೆಪಿ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಮೊದಲನೇ ಅವಧಿಗೆ ಅಧಿಕಾರದ ಗದ್ದೆಗೆ ತಮ್ಮದಾಗಿಸಿಕೊಂಡಿದ್ದರು. ತದ ನಂತರ ಬಿಜೆಪಿ ಅಧಿಕಾರ ನಡೆಸಿತ್ತು. ಪಟ್ಟಣದಲ್ಲಿ ಪಕ್ಷ ನಿಷ್ಠ ಮತದಾರರಿಗಿಂತ ವ್ಯಕ್ತಿ ನಿಷ್ಟೆ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಆದರೂ ಈ ಬಾರಿ ಕೈ ಕಮಲ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವ ಲೆಕ್ಕಚಾರದಲ್ಲಿ ಆಕಾಂಕ್ಷಿಗಳು ತೆರೆಮರೆಯಲ್ಲಿ ಕಸರತ್ತು ಮಾಡುತ್ತಿದ್ದಾರೆ.
ಬಿಜೆಪಿ ಶಾಸಕ ಪ್ರಭು ಚವ್ಹಾಣ ಹಾಗೂ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ಪಕ್ಷದ ವಿಜಯಸಿಂಗ್ ಬೆಂಬಲಿತ ಜನರು ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎರಡು ಪಕ್ಷದಿಂದ ಟಿಕೆಟ್ ಪಡೆದುಕೊಳ್ಳಲು ಪ್ರತಿಯೊಂದು ವಾರ್ಡ್‌ನಿಂದ ನಾಲ್ಕು ಐದು ಜನರು ಮುಂದಾಗಿದ್ದಾರೆ. ಅಲ್ಲದೆ ಪಕ್ಷದ ವರಿಷ್ಠರ ಮನ ಓಲೈಸಿ ಟಿಕೆಟ್ ಪಡೆದುಕೊಳ್ಳಲು ಭಾರಿ ಪ್ರಯತ್ನ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಬೇಸಿಗೆಯಲ್ಲಿ ಬಿಸಿಲಿನ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದಂತೆ ಚುನಾವಣೆ ಕಾವು ಕೂಡ ಅಷ್ಟೇ ಪ್ರಖರತೆ ಪಡೆದುಕೊಳ್ಳುತ್ತಿದೆ.
ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ನರೋಟೆ ಕುಟುಂಬದ ಸದಸ್ಯರು ಪ್ರತಿ ಚುನಾವಣೆಯಲ್ಲಿ ಪ್ಯಾನಲ್ ಮಾಡಿಕೊಂಡು ಪಕ್ಷಕ್ಕಿಂತ ತಮ್ಮ ಶಕ್ತಿ ಮೇಲೆ ಜಯ ಸಾಧಿಸುವ ಛಲ ತಮ್ಮದಾಗಿಸಿಕೊಂಡಿದ್ದಾರೆ. ಅದರಂತೆ ಪಟ್ಟಣದಲ್ಲಿ ಹೇಳಿಕೊಳ್ಳುವಂತಹ ಬಿಜೆಪಿ ನಾಯಕರು ಇಲ್ಲ. ಆದರೂ ಶಾಸಕ ಪ್ರಭು ಚವ್ಹಾಣ ತಮ್ಮ ವೈಯಕ್ತಿಕ ಶಕ್ತಿ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರನ್ನು ಕಣಕ್ಕೆ ಇಳಿಸಿ ಗೆಲ್ಲಿಸಲು ಪ್ರಯತ್ನ ನಡೆಸಿದ್ದಾರೆ.
ಬೀದರ ಸಂಸದ ಭಗವಂತ ಖೂಬಾ ಪಟ್ಟಣದ ನಿವಾಸಿಗಳಾಗಿದ್ದಾರೆ. ಆದರೂ ಬೆಂಬಲಿಗರು ಮತ್ತು ಅವರ ಹೆಸರಿನ ಮೇಲೆ ಅಷ್ಟೊಂದು ಪ್ರಮಾಣದಲ್ಲಿ ಮತಗಳು ಬೀಳುವುದಿಲ್ಲ ಎನ್ನುವುದು ಇಲ್ಲಿನ ಜನರ ಮಾತಾಗಿದೆ.
ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ಪಟ್ಟಣ ಪಂಚಾಯತ ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ.
•
ರಾಜಕುಮಾರ ಹಲರ್ಬಗೆ,
ಕಾಂಗ್ರೆಸ್ ತಾಲೂಕು ಅಧ್ಯಕ್ಷ
ಕಳೆದ ಚುನಾವಣೆಯಲ್ಲಿ ನಾವು-ಕಾಂಗ್ರೆಸ್ ಪಕ್ಷದವರು ಸಮಬಲ ಸಾಧಿಸಿದ್ದೇವೆ. ಈ ಚುನಾವಣೆಯಲ್ಲಿ ಅಧಿಕಾರವನ್ನು ನಾವೇ ಮಾಡುತ್ತೇವೆ. ಅದರಲ್ಲಿ ಎರಡು ಮಾತಿಲ್ಲ.
•
ಸತೀಶ ಪಾಟೀಲ,
ಬಿಜೆಪಿ ತಾಲೂಕು ಅಧ್ಯಕ್ಷ