Advertisement

ಮೋದಿ ಪ್ರಮಾಣ: ಅಭಿಮಾನಿಗಳಿಗೆ ಹಬ್ಬದ ವಾತಾವರಣ

10:03 AM May 30, 2019 | keerthan |

ಮಂಗಳೂರು/ಉಡುಪಿ: ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಕಾಯುತ್ತಿದ್ದಾರೆ.

Advertisement

ಅದಕ್ಕಾಗಿ ಪ್ರಮಾಣವಚನ ಸ್ವೀಕಾರದ ದಿನವಾದ ಮೇ 30ರ ಕಾರ್ಯಕ್ರಮದ ವೀಕ್ಷಣೆಗೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಅಭಿಮಾನಿಗಳಿಂದ ಉಚಿತ ಬಸ್‌ ಸೇವೆ, ಉಚಿತ ತಂಪು ಪಾನೀಯ ವಿತರಣೆ ಸಹಿತ ವಿವಿಧ ಸೇವೆಗಳೂ ಸಾರ್ವಜನಿಕರಿಗೆ ಲಭ್ಯವಾಗುತ್ತಿವೆ.

ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಸಾರ್ವಜನಿಕರ ನೇರ ವೀಕ್ಷಣೆಗೆ ಅನುಕೂಲವಾಗುವಂತೆ ಶಾಸಕ ಡಿ. ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ಮೇ 30ರ ಸಂಜೆ 6 ಗಂಟೆಯಿಂದ ಪಿವಿಎಸ್‌ ಬಳಿಯಿರುವ ಬಿಜೆಪಿ ಕಚೇರಿಯ ಎದುರು ಬೃಹತ್‌ ಎಲ್‌ಸಿಡಿ ಪರದೆ ವ್ಯವಸ್ಥೆ ಮಾಡಲಾಗುತ್ತಿದೆ. ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಎದುರೂ ಮೋದಿ ಅಭಿಮಾನಿಗಳು ಎಲ್‌ಸಿಡಿ ಪರದೆ ವ್ಯವಸ್ಥೆ ಮಾಡಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಕಚೇರಿ ಎದುರು 7 ಗಂಟೆಗೆ ಬೃಹತ್‌ ಪರದೆಯಲ್ಲಿ ವೀಕ್ಷಣೆ ವ್ಯವಸ್ಥೆ ಇರುತ್ತದೆ.

ವಿಶೇಷ ಪೂಜೆ
ಬಂಟ್ವಾಳ: ಕ್ಷೇತ್ರ ಬಿಜೆಪಿ ವತಿಯಿಂದ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ನೇತೃತ್ವದಲ್ಲಿ ಬಿ.ಸಿ.ರೋಡ್‌ನ‌ ರಕ್ತೇಶ್ವರಿ ದೇವಸ್ಥಾನದಲ್ಲಿ ವಿಶೇಷ ಸರ್ವಸೇವೆ ಹಾಗೂ ಭಜನೆ ನಡೆಯಲಿದೆ. ಸಂಜೆ 5.30ರಿಂದ ಭಜನೆ, ರಾತ್ರಿ 7.30ಕ್ಕೆ ಸರ್ವಪೂಜೆ ಜರಗಲಿದೆ.

ಕಡಬದಲ್ಲಿ ಭಜನೆ
ಕಡಬ: ಮೇ 30ರ ಸಂಜೆ ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ದುರ್ಗಾಂಬಿಕಾ ಭಜನ ಮಂಡಳಿ ವತಿಯಿಂದ ಭಜನೆ ಜರಗಲಿದೆ. ಶ್ರೀರಾಮ್‌ ಟವರ್ನಲ್ಲಿ ಸಂಜೆ 5ರಿಂದ ಪ್ರಮಾಣ ವಚನ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

ಆರೋಗ್ಯ ತಪಾಸಣೆ
ಉಡುಪಿ: ಮೇ 30ರಂದು ಮಣಿಪಾಲದ ದಶರಥ ನಗರದ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರದಲ್ಲಿ ಬೆಳಗ್ಗೆ 9ರಿಂದ ಸಂಜೆ 7ರ ತನಕ ವಿಶೇಷ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಉಡುಪಿ ಸದ್ಗುರು ಸಹಕಾರಿಯ ಪ್ರಕಟನೆ ತಿಳಿಸಿದೆ.

ವರ್ಷದ ಬಳಿಕ ಕೌರ
ಬಂಟ್ವಾಳ: ಮೋದಿ ಅಭಿಮಾನಿ ಪ್ರಶಾಂತ್‌ ಭಂಡಾರ್ಕರ್‌ ಅವರು ಮೋದಿ ಮತ್ತೂಮ್ಮೆ ಗೆದ್ದು ಪ್ರಮಾಣ ವಚನ ಸ್ವೀಕರಿಸಿದ ಬಳಿಕವೇ ತನ್ನ ಗಡ್ಡ, ಮೀಸೆ, ಕೂದಲಿಗೆ ಕತ್ತರಿ ಹಾಕುತ್ತೇನೆ ಎಂದು ವರ್ಷದ ಹಿಂದೆ ಪ್ರಮಾಣ ಮಾಡಿದ್ದರು. ಅದರಂತೆ ಮೇ 30ರಂದು ಕೌರ ಮಾಡಿಸುವುದಾಗಿ ಅವರು ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಕಟ್ಟೆಚ್ಚರ
ಕಾಸರಗೋಡು: ಮೋದಿ ಪ್ರಮಾಣ ವಚನ ಸ್ವೀಕರಿಸುವ ಮೇ 30ರಂದು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಆದೇಶಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆದ ರಾಜಕೀಯ ಘರ್ಷಣೆಗಳ ಹಿನ್ನೆಲೆಯಲ್ಲಿ ಪೊಲೀಸರು ಜಾಗೃತಾ ನಿರ್ದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಸ್ತು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಬಂದೋಬಸ್ತ್ ಮಾಡ‌ಲಾಗಿದೆ.

ಮೋದಿ ಪ್ರಮಾಣಕ್ಕೆ ಪೇಜಾವರ ಶ್ರೀ
ಉಡುಪಿ: ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಗುರುವಾರ ತೆರಳುವರು. ಅವರೊಂದಿಗೆ ರಾಜ್ಯದ ಇತರ ಹಲವು ಮಠಾಧೀಶರೂ ಪಾಲ್ಗೊಳ್ಳುವರು ಎಂದು ತಿಳಿದುಬಂದಿದೆ. ಐದು ವರ್ಷಗಳ ಹಿಂದೆಯೂ ಪೇಜಾವರ ಶ್ರೀಗಳು ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ. ರಘುಪತಿ ಭಟ್‌, ವಿ. ಸುನಿಲ್‌ ಕುಮಾರ್‌ ಬುಧವಾರ ದಿಲ್ಲಿಗೆ ತೆರಳಿದ್ದು ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಉಚಿತ ಬಸ್‌ ಸೇವೆ
ಮೋದಿ ಅಭಿಮಾನಿ ಬಸ್‌ ಚಾಲಕರೋರ್ವರು ತಮ್ಮ ಗೆಳೆಯರೊಂದಿಗೆ ಸೇರಿಕೊಂಡು ತಾವು ಚಾಲಕರಾಗಿರುವ ಸರ್ವೀಸ್‌ ಬಸ್‌ನಲ್ಲಿ ಗುರುವಾರ ಇಡೀ ದಿನ ಪ್ರಯಾಣಿಕರಿಗೆ ಉಚಿತ ಸೇವೆ ಕಲ್ಪಿಸಲಿದ್ದಾರೆ. ಮೂಡಬಿದಿರೆ- ಕಿನ್ನಿಗೋಳಿ-ಸುರತ್ಕಲ್‌-ಮಂಗಳೂರು ಮಧ್ಯೆ ಸಂಚರಿಸುವ ಕೋಟ್ಯಾನ್‌ ಬಸ್‌ನಲ್ಲಿ ಪ್ರಯಾಣಿಕರಿಗೆ ಈ ಸೇವೆ ಲಭ್ಯವಾಗಲಿದೆ. ಚಾಲಕ ಶ್ರೀಕಾಂತ್‌ ಬಲವಿನಗುಡ್ಡೆ ಮತ್ತು ಗೆಳೆಯರೇ ಈ ಸೇವೆ ಕಲ್ಪಿಸಿದವರು.

ಉಚಿತ ಪಾಯಸ, ಸಿಹಿತಿಂಡಿ
ಉಡುಪಿ ಕಡಿಯಾಳಿಯ ಶ್ರೀನಿವಾಸ ಹೊಟೇಲ್‌ನಲ್ಲಿ ಮಾಲಕ ಶ್ರೀನಿವಾಸ ಕಿಣಿಯವರು ದಿನವಿಡೀ ಬಂದವರಿಗೆ ಹಾಲು ಪಾಯಸವನ್ನು ವಿತರಿಸಲಿದ್ದಾರೆ. ಜಿಲ್ಲಾ ಮತ್ತು ನಗರ ಬಿಜೆಪಿ ವತಿಯಿಂದ ಉಡುಪಿ ಸರ್ವಿಸ್‌ ಮತ್ತು ಸಿಟಿ ಬಸ್‌ ನಿಲ್ದಾಣದಲ್ಲಿ ಸಂಜೆ 6 ಗಂಟೆಗೆ, ಜಿಲ್ಲಾ ಬಿಜೆಪಿ ಕಚೇರಿ ಎದುರು 7ಕ್ಕೆ ಸಿಹಿ ತಿಂಡಿ ವಿತರಣೆ ನಡೆಯಲಿದೆ.

ಉಚಿತ ಕಬ್ಬಿನ ಹಾಲು
ಹಂಪನಕಟ್ಟೆಯ ಹಳೆ ಬಸ್‌ ನಿಲ್ದಾಣದ ಬಳಿ ಕಬ್ಬಿನ ಹಾಲು ವ್ಯಾಪಾರದಲ್ಲಿ ತೊಡಗಿರುವ ಶಂಕರ್‌ ಅವರು ಗುರುವಾರ ಸಂಜೆ 5ರಿಂದ 8ರ ತನಕ ತಮ್ಮ ಅಂಗಡಿಗೆ ಆಗಮಿಸುವ ಎಲ್ಲರಿಗೂ ಉಚಿತ ಕಬ್ಬಿನ ಹಾಲು ವಿತರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next