Advertisement

ಅಧಿಕಾರ ಹಿಡಿಯಲು ಪ್ರತಿಜ್ಞಾವಿಧಿ ಕಾರ್ಯಕ್ರಮ ನಾಂದಿ

02:57 PM Jun 29, 2020 | Suhan S |

ಬೆಳಗಾವಿ: ಬರುವ ಜುಲೈ 2ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅಧಿಕಾರ ಸ್ವೀಕರಿಸಲಿದ್ದು ಈ ಪ್ರತಿಜ್ಞಾವಿಧಿ ಕಾರ್ಯಕ್ರಮ ದೇಶದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲಿದೆ. ಕಾಂಗ್ರೆಸ್‌ ಪಕ್ಷ ಮತ್ತೂಮ್ಮೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ನಾಂದಿ ಹಾಡಲಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಮಾಜಿ ರಾಜ್ಯಾಧ್ಯಕ್ಷೆ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ನಡೆಸಬೇಕಿರುವುದರಿಂದ ರಾಜ್ಯದ 7800 ಕಡೆಗಳಲ್ಲಿ ದೊಡ್ಡ ಸ್ಕ್ರೀನ್‌ ಅಳವಡಿಸಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದರಲ್ಲಿ ಸುಮಾರು 10 ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ ಎಂದರು. ವಿಶೇಷವಾಗಿ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ನುಡಿಯುವಾಗ ಹತ್ತು ಲಕ್ಷ ಜನ ಎದ್ದು ನಿಂತು ರಾಷ್ಟ್ರಗೀತೆ ಗೆ ಗೌರವ ನೀಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ ಎಂದು ಹೆಬ್ಟಾಳಕರ ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲೂ ಸುಮಾರು 550 ಕಡೆಗಳಲ್ಲಿ ಕಾರ್ಯಕ್ರಮ ವೀಕ್ಷಣೆಯ ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೆ ಜನರು 7676366666 ನಂಬರಿಗೆ ಮಿಸ್ಡ್ ಕಾಲ್‌ ಕೊಡುವ ಮೂಲಕ ಕಾರ್ಯಕ್ರಮವನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು. ಡಿ.ಕೆ.ಶಿವಕುಮಾರ ಅವರ ಜೊತೆಗೆ ಜಿಲ್ಲೆಯ ಹೆಮ್ಮೆಯ ಸುಪುತ್ರ ಸತೀಶ್‌ ಜಾರಕಿಹೊಳಿ ಹಾಗೂ ಈಶ್ವರ ಖಂಡ್ರೆ ಮತ್ತು ಸಲೀಂ ಅಹ್ಮದ್‌ ಅವರು ಸಹ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಪದಗ್ರಹಣದ ಬಳಿಕ ರಾಜ್ಯ ಕಾಂಗ್ರೆಸ್‌ ಸ್ವರೂಪ ಬದಲಾಗಲಿದೆ. ರಾಜ್ಯದಲ್ಲಿ ಮತ್ತೂಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ನಾಂದಿ ಹಾಡಲಿದೆ ಎಂದು ಹೆಬ್ಟಾಳಕರ್‌ ಹೇಳಿದರು.

ನಾವು ಡಿಜಿಟಲ್‌ ವ್ಯವಸ್ಥೆ ಬಳಸಿಕೊಂಡು ಪದಗ್ರಹಣ ಕಾರ್ಯಕ್ರಮವನ್ನು ಅತ್ಯಂತ ವಿಶಿಷ್ಟವಾಗಿ ಮಾಡುತ್ತಿದ್ದೇವೆ. ಇದು ಯಾರ ನಕಲೂ ಅಲ್ಲ, ನಾವು ಯಾರನ್ನೂ ನಕಲು ಮಾಡುವುದಿಲ್ಲ. ಬದಲಾಗಿ ನಮ್ಮ ನೂರಾರು ಯೋಜನೆಗಳನ್ನು ಬೇರೆಯವರು ಕಾಪಿ ಮಾಡಿದ್ದನ್ನು ಉದಾಹರಣೆ ಸಹಿತ ತೋರಿಸಬಲ್ಲೆ ಎಂದು ಲಕ್ಷ್ಮೀ ಹೆಬ್ಟಾಳಕರ್‌ ಸವಾಲು ಹಾಕಿದರು.

ನೂತನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದಾಗ ಕಷ್ಟಪಟ್ಟು ಈ ಜಾಗವನ್ನು ಪಡೆದು ಇಲ್ಲಿ ಕಾಂಗ್ರೆಸ್‌ ಕಚೇರಿ ನಿರ್ಮಾಣಕ್ಕೆ ಚಾಲನೆ ನೀಡಿದ್ದೆ. ಇಲ್ಲಿ ಮೊದಲ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ. ಇದನ್ನು ನಾನು ಕಾಂಗ್ರೆಸ್‌ ದೇವಸ್ಥಾನ ಎಂದು ಕರೆಯುತ್ತೇನೆ ಎಂದು ಭಾವುಕರಾಗಿ ಹೇಳಿದರು.

Advertisement

ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಎಲ್ಲ ಮುಖಂಡರೂ ಒಗ್ಗಟ್ಟಿನಿಂದ ಇದ್ದೇವೆ. ಸತೀಶ್‌ ಜಾರಕಿಹೊಳಿ ಕೂಡ ನಮ್ಮ ಮುಖಂಡರು. ಕಾರ್ಯಕ್ರಮಕ್ಕೆ ಹೆಚ್ಚು ಪ್ರಚಾರ ಸಿಗಲಿ ಎನ್ನುವ ಕಾರಣಕ್ಕೆ ಬೇರೆ ಬೇರೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇವೆ. ಇದರಲ್ಲಿ ವಿಶೇಷ ಏನೂ ಇಲ್ಲ. ಇಂದು ಎಲ್ಲ ಜಿಲ್ಲೆಗಳಲ್ಲೂ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುತ್ತಿದ್ದೇವೆ ಎಂದರು.

ಮಾಜಿ ಶಾಸಕ ಫಿರೋಜ್‌ ಸೇಠ್, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ರಾಜು ಸೇಠ್ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next