ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿರುವ “ಓ ಮೈ ಲವ್’ ಚಿತ್ರತಂಡ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.
ಇತ್ತೀಚೆಗಷ್ಟೇ “ಓ ಮೈ ಲವ್’ ಚಿತ್ರದ ಸಾಂಗ್ ಟೀಸರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ಸಿನಿಮಾದ ಮೊದಲ ಮೆಲೋಡಿ ಲವ್ ಟ್ರಾಕ್ ಬಿಡುಗಡೆ ಮಾಡಿದೆ. “ಏನಾಯ್ತೋ ಕಾಣೆ…’ ಎಂಬ ಸಾಲುಗಳಿಂದ ಶುರುವಾಗುವ ಚಿತ್ರದ ಮೊದಲ ಲವ್ ಟ್ರ್ಯಾಕ್‌ಗೆ ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದು, ಯಾಜ್ಹಿನ್ ನಿಸಾರ್, ಅನುರಾಧಾ ಭಟ್ ಧ್ವನಿಯಾಗಿದ್ದಾರೆ. ಗೀತೆಗೆ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದ್ದು, ಮುರಳಿ ನೃತ್ಯ ಸಂಯೋಜಿಸಿದ್ದಾರೆ.
ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ “ಓ ಮೈ ಲವ್’ ಚಿತ್ರದಲ್ಲಿ ಕೀರ್ತಿ ಕಲ್ಕೆರೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸ್ಮೈಲ್ ಶ್ರೀನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ, “ಓ ಮೈ ಲವ್’ ಚಿತ್ರಕ್ಕೆ ಜಿ. ರಾಮಾಂಜಿನಿ ಕಥೆ ಬರೆದು, “ಜಿಸಿಬಿ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ:ಕೆಜಿಎಫ್-2 ಜೊತೆ ತೋತಾಪುರಿ ಟ್ರೇಲರ್
ಇನ್ನು “ಓ ಮೈ ಲವ್’ ಚಿತ್ರದ ಮೊದಲ ಗೀತೆಯ ಬಗ್ಗೆ ಮಾತನಾಡುವ ನಿರ್ದೇಶಕ ಸ್ಮೈಲ್ ಶ್ರೀನು, “ಸಿನಿಮಾದಲ್ಲಿ ಎಲ್ಲ ಹಾಡುಗಳೂ ವಿಭಿನ್ನವಾಗಿದ್ದು, ಈಗ ಸಿನಿಮಾದ ಪ್ರಮೋಶನ್ಸ್ ಭಾಗವಾಗಿ ಮೊದಲ ಹಾಡು ಬಿಡುಗಡೆ ಮಾಡಿದ್ದೇವೆ. ಇಂದಿನ ಯೂಥ್ ಆಡಿಯನ್ಸ್‌ಗೆ ಇಷ್ಟವಾಗುವಂಥ ಮೆಲೋಡಿ ಲವ್ ಟ್ರ್ಯಾಕ್ ಇದಾಗಿದ್ದು, ಹಾಡು ಕೇಳುಗರಿಗೆ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು. ನಟ ಅಕ್ಷಿತ್, ನಟಿ ಕೀರ್ತಿ ಕಲ್ಕೆರೆ, ನಿರ್ಮಾಪಕ ಜಿ. ರಾಮಾಂಜಿನಿ ಚಿತ್ರದ ಬಗ್ಗೆ ಮಾತನಾಡಿದರು
ರವಿಪ್ರಕಾಶ್ ರೈ