ಹೊಸದಿಲ್ಲಿ : ಕೋವಿಡ್ ದಿಂದ ರಕ್ಷಣೆ ಪಡೆಯುವಲ್ಲಿ ಮಾನವನ ದೇಹದಲ್ಲಿ ಹರಿಯುವ ರಕ್ತದ ಗುಂಪು ಪ್ರಮುಖ ಪಾತ್ರ ವಹಿಸುತ್ತದೆಯಂತೆ. ಈ ಕುರಿತಂತೆ ಬ್ಲೂಂಬರ್ಗ್ “ದಿ 23ಅಂಡ್‌ಮಿ’ ಎಂಬ ಅಧ್ಯಯನದ ವರದಿಯನ್ನು ಪ್ರಕಟಿಸಿದೆ. ಸೋಂಕಿನ ತೀವ್ರತೆ ಮತ್ತು ಅನಾರೋಗ್ಯ ರೀತಿಯ ಅಂಶಗಳಿಗಿಂತಲೂ ಹೆಚ್ಚಾಗಿ ಅನುಮಾನದ ಆಧಾರದಲ್ಲಿ ಈ ಅಧ್ಯಯನ ನಡೆದಿರುವುದು ವಿಶೇಷ. ರಕ್ತದ ನಿರ್ದಿಷ್ಟ ಗುಂಪು ಕೋವಿಡ್ ವೈರಾಣುವನ್ನು ಸೆಳೆಯಬಲ್ಲದೇ ಅಥವಾ ಪ್ರತಿರೋಧಿಸಬಲ್ಲದೇ ಎಂಬ ಅನುಮಾನದೊಂದಿಗೆ ಅಧ್ಯಯನ ಆರಂಭಿಸಿದ ಸಂಶೋಧಕರು, ಸುಮಾರು 10,000 ಸೋಂಕಿತರ ಮಾಹಿತಿ ಕಲೆಹಾಕಿದ್ದಾರೆ. ಅದರಂತೆ, ಇತರೆ ರಕ್ತದ ಗುಂಪುಗಳಿಗೆ ಹೋಲಿಸಿದರೆ “ಒ’ ಗುಂಪಿನ ರಕ್ತ ಹೊಂದಿರುವವರಿಗೆ ಸೋಂಕು ತಗುಲುವ ಸಾಧ್ಯತೆ ಶೇ.18ರಷ್ಟು ಕಡಿಮೆ ಎಂದು ಆ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಇದೇ ವೇಳೆ ಸುಮಾರು 7.50 ಲಕ್ಷ ಸೋಂಕಿತರ ಪರೀಕ್ಷೆ ಫಲಿತಾಂಶಗಳ ಪ್ರಕಾರ “ಒ’ ಗುಂಪಿನ ರಕ್ತವು ವೈರಾಣುವಿನಿಂದ ದೇಹಕ್ಕೆ ಸುರಕ್ಷತೆ ಒದಗಿಸಬಲ್ಲದು ಎಂದು ಸಂಶೋಧಕರು ತಿಳಿಸಿದ್ದಾರೆ. ವೈರಾಣುವಿನ ಅಥವಾ ಸೋಂಕಿತರ ನಿಕಟ ಸಂಪರ್ಕದಲ್ಲಿರುವ ಆರೋಗ್ಯ ಕಾರ್ಯಕರ್ತರ ಮಾಹಿತಿಯನ್ನಷ್ಟೇ ಬೇರ್ಪಡಿಸಿ ನೋಡಿದಾಗಲೂ ಅದೇ ಫಲಿತಾಂಶ ಬಂದಿದೆ ಎಂದು ಹೇಳಲಾಗಿದೆ.