ಬೆಲ್‌ಫಾಸ್ಟ್: ಮೈಕಲ್ ಬ್ರೇಸ್‌ವೆಲ್ ತಮ್ಮ ಪ್ರಪ್ರಥಮ ಅಂತಾರಾಷ್ಟ್ರೀಯ ಓವರ್ ನಲ್ಲೇ ಹ್ಯಾಟ್ರಿಕ್ ಸಾಧಿಸಿದ ಅಮೋಘ ಪರಾಕ್ರಮ ಗೈದಿದ್ದಾರೆ. ಇದರೊಂದಿಗೆ ದ್ವಿತೀಯ ಟಿ20 ಪಂದ್ಯದಲ್ಲಿ ಆತಿಥೇಯ ಐರ್ಲೆಂಡನ್ನು 88 ರನ್ನುಗಳಿಂದ ಸುಲಭದಲ್ಲಿ ಮಣಿಸಿದ ನ್ಯೂಜಿ ಲ್ಯಾಂಡ್ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ ಪಡೆ 4 ವಿಕೆಟಿಗೆ 179 ರನ್ ಗಳಿಸಿದರೆ, ಐರ್ಲೆಂಡ್ ಕೇವಲ 13.5 ಓವರ್‌ಗಳಲ್ಲಿ 91 ರನ್ನುಗಳಿಗೆ ಕುಸಿಯಿತು. ಮೊದಲ ಪಂದ್ಯವನ್ನು ನ್ಯೂಜಿಲ್ಯಾಂಡ್ 31 ರನ್ನುಗಳಿಂದ ಜಯಿಸಿತ್ತು. ಅಂತಿಮ ಹಣಾಹಣಿ ಶುಕ್ರವಾರ ನಡೆಯಲಿದೆ.
ಈ ಪ್ರವಾಸದುದ್ದಕ್ಕೂ ಬ್ಯಾಟಿಂಗ್‌ನಲ್ಲಿ ಮಿಂಚಿದ ನ್ಯೂಜಿಲ್ಯಾಂಡ್‌ನ ನವತಾರೆ ಮೈಕಲ್ ಬ್ರೇಸ್‌ವೆಲ್ ಅವರನ್ನು 14ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿಸಲಾಯಿತು. ಇದು ಅಂತಾ ರಾಷ್ಟ್ರೀಯ ಪಂದ್ಯದಲ್ಲಿ ಅವರ ಮೊದಲ ಓವರ್ ಆಗಿತ್ತು. ಇದನ್ನು ಭರ್ಜರಿಯಾಗಿ ಬಳಸಿಕೊಂಡ ಅವರು 3ನೇ, 4ನೇ ಹಾಗೂ 5ನೇ ಎಸೆತದಲ್ಲಿ ಕ್ರಮವಾಗಿ ಮಾರ್ಕ್ ಅಡೈರ್, ಬ್ಯಾರ್ರಿ ಮೆಕಾರ್ಥಿ ಮತ್ತು ಕ್ರೆಗ್ ಯಂಗ್ ವಿಕೆಟ್ ಉಡಾಯಿಸಿದರು. ಐದೇ ಎಸೆತ ಎಸೆದ ಅವರು 5 ರನ್ನಿಗೆ 3 ವಿಕೆಟ್ ಉರುಳಿಸಿ ಮೆರೆದರು. 21ಕ್ಕೆ 3 ವಿಕೆಟ್ ಕಿತ್ತ ಐಶ್ ಸೋಧಿ ನ್ಯೂಜಿಲ್ಯಾಂಡಿನ ಮತ್ತೋರ್ವ ಯಶಸ್ವಿ ಬೌಲರ್.
ನ್ಯೂಜಿಲ್ಯಾಂಡ್ ಪರ ವಿಕೆಟ್ ಕೀಪರ್-ಬ್ಯಾಟರ್ ಡೇನ್ ಕ್ಲೀವರ್ ಅಜೇಯ 78 ರನ್ ಬಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-4 ವಿಕೆಟಿಗೆ 179 (ಕ್ಲೀವರ್ ಔಟಾಗದೆ 78, ಅಲೆನ್ 35, ಲಿಟ್ಲ 31ಕ್ಕೆ 2, ಯಂಗ್ 34ಕ್ಕೆ 2). ಐರ್ಲೆಂಡ್-13.5 ಓವರ್‌ಗಳಲ್ಲಿ 91 (ಅಡೈರ್ 27, ಸ್ಟರ್ಲಿಂಗ್ 21, ಬ್ರೇಸ್‌ವೆಲ್ 5ಕ್ಕೆ 3, ಸೋಧಿ 21ಕ್ಕೆ 3, ಡಫಿ 20ಕ್ಕೆ 2). ಪಂದ್ಯಶ್ರೇಷ್ಠ: ಡೇನ್ ಕ್ಲೀವರ್.