ಬಳ್ಳಾರಿ : ಕಾಂಗ್ರೆಸ್‌ನಿಂದ ಟಿಕೆಟ್ ತಪ್ಪಿರುವ ಬಳ್ಳಾರಿ ಗ್ರಾಮಾಂತರ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅವರಿಗೆ ಕೂಡ್ಲಿಗಿ ಕ್ಷೇತ್ರದ ಟಿಕೆಟ್ ನೀಡುವ ಭರವಸೆಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಮೊಳಕಾಲ್ಮೂರು ಮತ್ತು ಬಳ್ಳಾರಿಯಲ್ಲಿ ಬೆಂಬಲಿಗರನ್ನು ಹೊಂದಿರುವ ಗೋಪಾಲಕೃಷ್ಣ ಸೇರ್ಪಡೆ ಕಾಂಗ್ರೆಸ್‌ಗೆ ಹೊಡೆತ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸಂಸದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅವರು ಸೋಮವಾರ ರಾತ್ರಿ ಗೋಪಾಲಕೃಷ್ಣ ಅವರ ನಿವಾಸಕ್ಕೆ ಆಗಮಿಸಿ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾದಿದ್ದಾರೆ.
ಬುಧವಾರ ಅವರು ಪಕ್ಷಕ್ಕೆ ಸೇರ್ಪಡೆಯಾಗಿ ಅಧಿಕೃತವಾಗಿ ಪ್ರಚಾರದಲ್ಲಿ ನಿರತರಾಗಲಿದ್ದಾರೆ ಎಂದು ಹೇಳಲಾಗಿದೆ.
ಬಳ್ಳಾರಿ ಗ್ರಾಮಾಂತರ ಮೀಸಲು ಕ್ಷೇತ್ರದಲ್ಲಿ ಬಿ.ನಾಗೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ.
ಗೋಪಾಲಕೃಷ್ಣ ಅವರು 2013 ರ ಚುನಾವಣೆಯಲ್ಲಿ ಮೊಳಕಾಲ್ಮೂರಿನಲ್ಲಿ ತಿಪ್ಪೇಸ್ವಾಮಿ ವಿರುದ್ದ ಸೋಲನುಭವಿಸಿದ್ದರು. ಬಳಿಕ ಶ್ರೀರಾಮುಲು ಸಂಸದರಾಗಿ ಆಯ್ಕೆಯಾಗಿ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಬಳಿಕ ತೆರವಾದ ಸ್ಥಾನಕ್ಕೆ ಸ್ಪರ್ಧಿಸಿ ಜಯ ಸಾಧಿಸಿದ್ದರು.