ಶರ್ಮಾ 15 ದಿನಗಳ ಹಿಂದೆಯೇ ಲೋಕಾಯುಕ್ತರಿಗೆ ಪ್ರಾಣ ಬೆದರಿಕೆ ಹಾಕಿದ್ದ ಎಂಬ ಸಂಗತಿ ಸಿಸಿಬಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಸಿಸಿಬಿ ವಶದಲ್ಲಿರುವ ಆರೋಪಿ ತೇಜರಾಜ್ ಶರ್ಮಾ 15 ದಿನದ ಹಿಂದೆ ಒಮ್ಮೆ ಲೋಕಾಯುಕ್ತ ಕಚೇರಿಗೆ ಬಂದು, ನೇರವಾಗಿ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರ ಕೊಠಡಿಗೆ ನುಗ್ಗಿದ್ದಾನೆ. ಬಳಿಕ ನನ್ನ ದೂರುಗಳಿಗೆ ಯಾರು ಸ್ಪಂದಿಸುತ್ತಿಲ್ಲ. ತನಿಖೆ ಸರಿಯಾಗಿ ನಡೆಸುತ್ತಿಲ್ಲ. ನನಗೆ ಅನ್ಯಾಯವಾಗಿದೆ ಎಂದು ಕೂಗಾಡಿದ್ದಾನೆ. ಅಲ್ಲದೇ ಒಂದು ವೇಳೆ ನನಗೆ ನ್ಯಾಯ ಸಿಗದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಆ ದೇವರು ಕೂಡ ಕ್ಷಮಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಬಳಿಕ ಕೂಡಲೇ ಲೋಕಾಯುಕ್ತರ ಭದ್ರತಾ ಸಿಬ್ಬಂದಿ ಆರೋಪಿಯನ್ನು ಹೊರ ಹಾಕಿದ್ದರು ಎಂದು ಹೇಳಿಕೆ ನೀಡಿದ್ದಾನೆ. ಆದರೆ, ಈ ಬೆದರಿಕೆಯನ್ನು ಲೋಕಾಯುಕ್ತರು ಗಂಭೀರವಾಗಿ ಪರಿಗಣಿಸಿಲ್ಲ. ಮಾನವೀಯತೆಯಿಂದ ಎಚ್ಚರಿಕೆ ನೀಡಿ ಕಳುಹಿಸಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ತಪ್ಪೊಪ್ಪಿಕೊಂಡಿರು ವುದರಿಂದ ಹೆಚ್ಚಿನ ಮಾಹಿತಿ ಇಲ್ಲ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಸಿಸಿಬಿ ಡಿಸಿಪಿ ಜಿನೇಂದ್ರ ಖಣಗಾವಿ ನೇತೃತ್ವದ ತಂಡ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿದೆ.
Advertisement
ಹೇಳಿಕೆ ವೇಳೆ ದೇವರ ಜಪ ಆರೋಪಿ ಹೇಳಿಕೆ ಪಡೆಯುವ ಸಂದರ್ಭದಲ್ಲಿ ಇದಕ್ಕಿದ್ದಂತೆ ದೇವರ ಜಪ ಮಾಡುತ್ತಾ ಕೂರುತ್ತಾನೆ. ಆಗ ಪ್ರಶ್ನಿಸಿದರೆ ಯಾವುದೇ ಉತ್ತರ ನೀಡುವುದಿಲ್ಲ. ನಾನು ದೇವರನ್ನು ಕಾಣುತ್ತಿದ್ದೇನೆ. ನನಗೆ ತೊಂದರೆ ಕೊಡಬೇಡಿ. ಒಂದು ವೇಳೆ ಕೊಟ್ಟರೆ ನಿಮಗೆ ಒಳ್ಳೆಯದಾಗುವುದಿಲ್ಲ ಎಂದು ಪೊಲೀಸರಿಗೆ ಎಚ್ಚರಿಕೆನೀಡಿ ಅಚ್ಚರಿ ಮೂಡಿಸಿದ್ದಾನೆ.