ಶಿರಹಟ್ಟಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯಾದ್ಯಂತ ಸಮಾಜಿಕ ಸೇವಾ ಕಾರ್ಯ ನೆರವೇರಿಸುತ್ತಿರುವುದು ಶ್ಲಾಘನೀಯವಾಗಿದೆ. ಸಮಾಜದ ಅಭಿವೃದ್ಧಿ ಗುರಿಯಾಗಿ ಇಟ್ಟುಕೊಂಡಿ ಈ ಸಂಸ್ಥೆ ನಡೆಯುತ್ತಿದೆ ಎಂದು ಶಿರಹಟ್ಟಿ ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನವರ ಹೇಳಿದರು.
ಇಲ್ಲಿನ ಫಕ್ಕಿರೇಶ್ವರ ಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಜರುಗಿದ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಹಲವಾರು ಯೋಜನೆಗಳಲ್ಲಿ ಮಗು ಮತ್ತು ಬಾಣಂತಿಯರಿಗಾಗಿ ಅನೇಕ ಕಾರ್ಯಕ್ರಮಗಳಿವೆ. ಅದನ್ನು ಉಪಯೋಗಿಸಿಕೊಂಡಾಗ ಮಕ್ಕಳಲ್ಲಿ ಪೌಷ್ಟಿಕತೆ ಕೊರತೆ ಕಾಣುವುದಿಲ್ಲ. ಧರ್ಮಸ್ಥಳದ ಧರ್ಮಾಧಿಕಾರಿ ಪೌಷ್ಟಿಕ ಆಹಾರದಂತ ಕಾರ್ಯಕ್ರಮ ಹಮ್ಮಿಕೊಂಡು ಆಹಾರ ಜಾಗೃತಿ ಕ್ರಾಂತಿ ನಡೆಸುತ್ತಿದ್ದಾರೆ. ಸೌಂದರ್ಯ ವರ್ದಕಗಳಿಗೆ ಹೆಚ್ಚು ಮಾರು ಹೋಗದೇ ಹೊಟ್ಟೆಗೆ ತಿನ್ನುವಆಹಾರ ಶುದ್ಧವಾಗಿ, ಸ್ವಚ್ಚವಾಗಿರಬೇಕು ಎಂದು ತಿಳಿಸಿದರು. ನಂತರ ಪೌಷ್ಟಿಕ ಆಹಾರ ತಯಾರಿಸಿದ್ದನ್ನು ವೀಕ್ಷಿಸಿ ರುಚಿ ನೋಡಿದರು.
ಶಿವಣ್ಣ ಎಸ್. ಮಾತನಾಡಿ, ಜ್ಞಾನ ವಿಕಾಸ ಕೇಂದ್ರದ ಮುಖಾಂತರ ಸ್ತ್ರೀಯರಿಗೆ ಪೌಷ್ಟಿಕ ಆಹಾರ ತಯಾರಿಸುವ ತರಬೇತಿಯನ್ನು ಗ್ರಾಮ ಮಟ್ಟದಲ್ಲಿ ನಡೆಸುತ್ತಿದ್ದು, ಸ್ತ್ರೀಯರು ಮತ್ತು ಮಕ್ಕಳು ಇದರ ಉಪಯೋಗ ಪಡೆಯಬೇಕು. ರಸ್ತೆಯ ಬದಿಯಲ್ಲಿ ಮಾರುವ ಸೊಪ್ಪು ತರಕಾರಿಗಳನ್ನು ಸ್ವಚ್ಛಗೊಳಿಸಿ ತಿನ್ನುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಮಹಾಂತೇಶ ದಶಮನಿ, ಡಾ| ವೈ.ಎಸ್. ಪಾಟೀಲ್, ವಿನಾಯಕ, ನಿವೃತ್ತ ಅರಣ್ಯ ಅಧಿಕಾರಿಗಳು, 100ಕ್ಕೂ ಹೆಚ್ಚು ಮಹಿಳೆಯರು ಇದ್ದರು. ಚಂದ್ರಕಲಾ ನಿರೂಪಿಸಿ, ಸ್ವಾಗತಿಸಿದರು.