Advertisement

ಮಕ್ಕಳ ಪೌಷ್ಟಿಕತೆ: ಕರಾವಳಿಯ ಮುನ್ನೆಗೆತ

10:28 AM Jul 15, 2019 | keerthan |

ಉಡುಪಿ: ಕರಾವಳಿಯಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಈ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಮತ್ತು ಉಡುಪಿ ಕೊನೆಯ ಸ್ಥಾನದಲ್ಲಿವೆ. ಇದರರ್ಥ, ಕರಾವಳಿ ಅಪೌಷ್ಟಿಕತೆ ಮುಕ್ತಿಯತ್ತ ಮುನ್ನಡೆಯುತ್ತಿದೆ.

Advertisement

ಅಪೌಷ್ಟಿಕತೆಯಿಂದ ಬಳಲುತ್ತಿರುವ ಚಿಣ್ಣರಿರುವ ಜಿಲ್ಲೆಗಳ ಪಟ್ಟಿಯಲ್ಲಿ ದ.ಕ. ಕೊನೆಯ ಸ್ಥಾನದಲ್ಲಿದೆ. 2019ರ ಮಾರ್ಚ್‌ನಿಂದ ಮೇ ವರೆಗೆ ಒಟ್ಟು 3,25,526 ಮಕ್ಕಳನ್ನು ತೂಕ ಮಾಡಿದ್ದು, 9,186 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿ ದ್ದಾರೆ. ಮಾರ್ಚ್‌ ತಿಂಗಳಲ್ಲಿ ಶೇ. 2.89 ಇದ್ದ ಅಪೌಷ್ಟಿಕ ಮಕ್ಕಳ ಸಂಖ್ಯೆ ಮೇ ತಿಂಗಳ ಅಂತ್ಯಕ್ಕೆ ಶೇ. 2.73 ಆಗಿದೆ.

ಉಡುಪಿ ಜಿಲ್ಲೆಗೆ ನಾಲ್ಕನೇ ಸ್ಥಾನ
ಅತ್ಯಂತ ಕಡಿಮೆ ಅಪೌಷ್ಟಿಕ ಮಕ್ಕಳನ್ನು ಹೊಂದಿರುವ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿ ದ.ಕ. ಇದ್ದರೆ ದ್ವಿತೀಯ ಹಾಸನ, ತೃತೀಯ ಬೆಂಗಳೂರು ಗ್ರಾಮಾಂತರ ಮತ್ತು ನಾಲ್ಕನೇ ಸ್ಥಾನದಲ್ಲಿ ಉಡುಪಿ ಇವೆ. ಉಡುಪಿ ಜಿಲ್ಲೆಯಲ್ಲಿ 2019ರ ಮಾರ್ಚ್‌ನಿಂದ ಮೇ ವರೆಗೆ ಒಟ್ಟು 1,91,330 ಮಕ್ಕಳನ್ನು ತೂಕ ಮಾಡಿದ್ದು, 8,184 ಮಕ್ಕಳು ಅಪೌಷ್ಟಿಕವಾ ಗಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಶೇ. 4.60 ಇದ್ದ ಅಪೌಷ್ಟಿಕತೆಯ ಮಕ್ಕಳ ಸಂಖ್ಯೆ ಮೇ ತಿಂಗಳ ಅಂತ್ಯಕ್ಕೆ ಶೇ. 3.45ಕ್ಕೆ ಇಳಿದಿದೆ.

ರಾಜ್ಯ ಮಟ್ಟದಲ್ಲೂ ಪೌಷ್ಟಿಕತೆ ಪ್ರಮಾಣ ಉತ್ತಮ
ರಾಜ್ಯದಲ್ಲಿ 2019ನೇ ಮಾರ್ಚ್‌ ತಿಂಗಳಲ್ಲಿ ಒಟ್ಟು 39,59,902 ಮಕ್ಕಳನ್ನು ತೂಕ ಮಾಡಲಾಗಿತ್ತು. 6,26,169 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಎಪ್ರಿಲ್‌ ತಿಂಗಳಲ್ಲಿ 38,65,140 ಮಕ್ಕಳನ್ನು ತೂಗಿದ್ದು, 6,10,413 ಅಪೌಷ್ಟಿಕರು ಮತ್ತು ಮೇಯಲ್ಲಿ ಒಟ್ಟು 36,58,379 ಮಕ್ಕಳನ್ನು ತೂಕ ಮಾಡಿದ್ದು, 5,62,251 ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಾರ್ಚ್‌ನಲ್ಲಿ ಶೇ.15.81 ಇದ್ದ ಅಪೌಷ್ಟಿಕ ಮಕ್ಕಳ ಸಂಖ್ಯೆ ಮೇ ತಿಂಗಳ ಅಂತ್ಯಕ್ಕೆ ಶೇ. 15.37ಕ್ಕೆ ಇಳಿದಿದೆ.

ಸಾಧನೆ ಹಿಂದಿನ ಶ್ರಮ
ಕರಾವಳಿಯ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಲ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು, ನೆಲಗಡಲೆ ಮಿಠಾಯಿ, 2 ದಿನ ಮೊಟ್ಟೆ, ವಾರದಲ್ಲಿ 6 ದಿನಗಳ ಕಾಲ ಮಧ್ಯಾಹ್ನದ ಬಿಸಿಯೂಟ (ಪೌಷ್ಟಿಕ ಆಹಾರ) ನೀಡಲಾಗುತ್ತಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆ, 200 ಮಿ.ಲೀ. ಹಾಲು, ನೆಲಗಡಲೆ ಮಿಠಾಯಿ, 6 ದಿನ ಬಿಸಿಯೂಟ ಕೊಡಲಾಗುತ್ತಿದೆ. ಇಲಾಖೆಯ ವತಿಯಿಂದ ವಾರ್ಷಿಕ 2 ಸಾವಿರ ರೂ. ಮೊತ್ತದ ನ್ಯೂಟ್ರಿಮಿಕ್ಸ್‌ ಪೌಷ್ಟಿಕ ಆಹಾರದ ಪೊಟ್ಟಣವನ್ನು 3 ವರ್ಷದೊಳಗಿನ ಅಪೌಷ್ಟಿಕ ಮಕ್ಕಳ ಮನೆಗೆ ಕಳುಹಿಸಿಕೊಡಲಾಗುತ್ತಿದೆ.

Advertisement

ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಾಕಷ್ಟು ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂಗನವಾಡಿ ಕಾರ್ಯಕರ್ತರ ಮೂಲಕ ಮಕ್ಕಳಿಗೆ ಯಾವೆಲ್ಲ ಆಹಾರ ನೀಡಬೇಕು ಎನ್ನುವ ಕುರಿತು ಪೋಷಕರಿಗೆ ಮಾಹಿತಿ ನೀಡಲಾಗಿದೆ.
ಸುಂದರ್‌ ಪೂಜಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ, ದ.ಕ. ಜಿಲ್ಲೆ.

ಎನ್‌ಆರ್‌ಸಿ ಕೇಂದ್ರದಲ್ಲಿ ಅಪೌಷ್ಟಿಕ ಮಕ್ಕಳನ್ನು ಸೇರ್ಪಡೆಗೊಳಿಸಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಕಡಿಮೆಯಿದೆ.
ಗ್ರೇಸಿ ಗೋನ್ಸಾಲ್ವಿಸ್‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ, ಉಡುಪಿ ಜಿಲ್ಲೆ.

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next