ಬೆಂಗಳೂರು : ಗರ್ಭಿಣಿಯರು ಹಾಗೂ ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪೋಷಣ ಅಭಿಯಾನ-ಪೌಷ್ಠಿಕ ಕರ್ನಾಟಕ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಮಂಗಳವಾರ ಚಾಲನೆ ನೀಡಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ. ಜಯಮಾಲ ಹೇಳಿದರು.
ಸೋಮವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ ಕರ್ನಾಟಕದ 19 ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಇದಕ್ಕಾಗಿ ಕೇಂದ್ರದಿಂದ ಶೇ.60ರಷ್ಟು ಹಾಗೂ ರಾಜ್ಯದಿಂದ ಶೇ.40ರಷ್ಟು ಅನುದಾನ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಯೋಜನೆಯಡಿ ಈಗಾಗಲೇ ವಿವಿಧ ಕಾರ್ಯಕ್ರಮ ನಡೆಯುತ್ತಿದೆ. ಯೋಜನೆ ಇನ್ನಷ್ಟು ಬಲಿಷ್ಠಗೊಳಿಸಿ, ಅರ್ಹರೆಲ್ಲರಿಗೂ ಸೌಲಭ್ಯ ದೊರಕಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳನ್ನು ಒಂದೇ ಸೂರಿನಡಿ ತಂದು ಯೋಜನೆ ಯಶಸ್ವಿಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 66 ಸಾವಿರ ಅಂಗನವಾಡಿಗಳಿದ್ದು, ಅದರಲ್ಲಿ ಆರು ತಿಂಗಳಿಂದ 6 ವರ್ಷದೊಳಗಿನ 40 ಲಕ್ಷಕ್ಕೂ ಹೆಚ್ಚು ಮಕ್ಕಳಿ¨ªಾರೆ. ರಾಜ್ಯದಲ್ಲಿ 2012ರಲ್ಲಿ ಅಪೌಷ್ಠಿಕತೆ ಶೇ.1.6ರಷ್ಟಿದ್ದಿತ್ತು, ಈಗ ಅದು ಶೇ.0.39ಕ್ಕೆ ಇಳಿಕೆಯಾಗಿದೆ. ಯೋಜನೆಯ ಹೊಸ ಕಾರ್ಯಕ್ರಮಗಳಲ್ಲಿ ಗರ್ಭಿಣಿಗೆ ಸೀಮಂತ, ತಾಯಂದಿರಿಗೆ ಎದೆಹಾಲು ಉಣಿಸುವ ಬಗ್ಗೆ ಅರಿವು, ಮಕ್ಕಳ ವಿವಿಧ ಹಂತದ ಬೆಳವಣಿಗೆಯ ಜಾಗೃತಿ, ಮಕ್ಕಳಿಗೆ ತಿನಿಸುವ ಆಹಾರದ ಪ್ರಮಾಣ, ಬಳಕೆ ಹಾಗೂ ಪೌಷ್ಠಿಕಾಂಶದ ಆಹಾರಗಳ ಬಗ್ಗೆ ಅರಿವು ಮೂಡಿಸಲಿದ್ದೇವೆ. ಸ್ತ್ರೀಯರಿಗೆ ಹಾಗೂ ಮಕ್ಕಳಿಗೆ ಉತ್ತಮ ಆರೋಗ್ಯ ನೀಡಿ, ಸ್ವಾಸ್ಥ್ಯ ಸಮಾಜ ಕಟ್ಟುವುದು ಇದರ ಉದ್ದೇಶವಾಗಿದೆ ಎಂದು ವಿವರಿಸಿದರು.
ಸರ್ಕಾರ ಯಾವುದೇ ಯೋಜನೆಗಳನ್ನು ಜಾರಿಗೆ ತಂದಾಗ ಅವುಗಳನ್ನು ಜನರಿಗೆ ಮುಟ್ಟಿಸುವುದು, ಅರಿವು ಮೂಡಿಸುವುದು ಹಾಗೂ ಯೋಜನೆಯ ನ್ಯೂನತೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವಲ್ಲಿ ಮಾಧ್ಯಮಗಳ ಪಾತ್ರ ಅತಿ ಮುಖ್ಯ.ಅಪೌಷ್ಠಿಕತೆ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆಗೆ ಪರಿಹಾರ ಹುಡುಕಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಮೊದಲಾದವರು ಉಪಸ್ಥಿತರಿದ್ದರು.