Advertisement

ಅಪೌಷ್ಟಿಕತೆ ತಡೆಗೆ ಪೋಷಣೆ ಅಭಿಯಾನ

06:10 AM Sep 27, 2018 | |

ಬೆಂಗಳೂರು: ರಾಜ್ಯದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರನ್ನು ಆರೋಗ್ಯವಂತರನ್ನಾಗಿ ರೂಪಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು “ಪೋಷಣೆ ಅಭಿಯಾನ- ಪೌಷ್ಠಿಕ ಕರ್ನಾಟಕ’ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿದೆ.

Advertisement

ಮುಖ್ಯವಾಗಿ ರಾಜ್ಯದಲ್ಲಿ ಗರ್ಭಿಣಿಯರು, ಬಾಣಂತಿಯರು, ಶಿಶುವಿನ ಬೆಳವಣಿಗೆ ಕುಂಠಿತ, ತೂಕ ಕೊರತೆ, ರಕ್ತಹೀನತೆ, ಅಪೌಷ್ಠಿಕತೆ, ಕಡಿಮೆ ತೂಕದ ಶಿಶು ಸೇರಿದಂತೆ ಅಪೌಷ್ಠಿಕತೆ ಸಮಸ್ಯೆಯಿಂದ ಬಳಲುತ್ತಿರುವವರನ್ನು ಅದರಿಂದ ಹೊರಕ್ಕೆ ತರಲು ಪೂರಕವಾಗಿ ಇಲಾಖೆಯು ನಾನಾ ಯೋಜನೆಯನ್ನು ಜಾರಿಗೊಳಿಸಿದ್ದು, ಹಂತವಾಗಿ ಅಪೌಷ್ಠಿಕತೆ ಮುಕ್ತ ಕರ್ನಾಟಕ ರೂಪಿಸಲು ಉದ್ದೇಶಿಸಿದೆ. ಯೋಜನೆಯಿಂದ ಧನಾತ್ಮಕ ಬದಲಾವಣೆ ತರುವ ಜತೆಗೆ ನಾನಾ ಇಲಾಖೆಗಳು ಒಂದಾಗಿ ಕಾರ್ಯ ನಿರ್ವಹಿಸಲು ನೆರವಾಗಲಿದೆ ಎಂಬುದು ಇಲಾಖೆ ಆಶಯ.

ಅಪೌಷ್ಠಿಕತೆ ನಿವಾರಣೆಗಾಗಿ ರಾಜ್ಯ ಸರ್ಕಾರ ಈಗಾಗಲೇ ನಾನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಮುಖ್ಯವಾಗಿ ಪೌಷ್ಠಿಕಾಂಶ ನೀತಿ ಅಭಿವೃದ್ಧಿಪಡಿಸುತ್ತಿದ್ದು, ಪೌಷ್ಠಿಕ ಸ್ಟೀರಿಂಗ್‌ ಸಮಿತಿಯನ್ನೂ ರಚಿಸುತ್ತಿದೆ. ಗರ್ಭಿಣಿಯರು, ಬಾಣಂತಿಯರಲ್ಲಿ ಪೌಷ್ಠಿಕಾಂಶ ಮಟ್ಟ ವೃದ್ಧಿಗಾಗಿ ಮಾತೃಪೂರ್ಣ, ಸೃಷ್ಟಿ ಹಾಗೂ ಕ್ಷೀರಭಾಗ್ಯ ಯೋಜನೆಯನ್ನೂ ಜಾರಿಗೊಳಿಸಿದೆ.

ಇನ್ನೊಂದೆಡೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸಮಾಲೋಚನೆ, ಪೋಷಣೆಯ ಸಾಕ್ಷರತೆ, ಪ್ರಾಯಪೂರ್ವ ಬಾಲಕಿಯರು ಹಾಗೂ ಗರ್ಭಿಣಿಯರಲ್ಲಿ ರಕ್ತಹೀನತೆಯನ್ನು ಗುರುತಿಸಿ ನಿವಾರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮಧ್ಯಮ ಹಂತದ ಸಿಬ್ಬಂದಿ ಸಾಮರ್ಥಯ ಅಭಿವೃದ್ಧಿಪಡಿಸಲು ಪೌಷ್ಠಿಕ ಮತ್ತು ಆರೋಗ್ಯದ ಬಗ್ಗೆ ಸಮಗ್ರ ತರಬೇತಿ ಮಾದರಿಗಳನ್ನು ರೂಪಿಸಿದೆ.

ಇಲಾಖೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಹಯೋಗದಲ್ಲಿ ಮಕ್ಕಳ ಸ್ನೇಹಿ ಅಂಗನವಾಡಿ, ಶೌಚಾಲಯಗಳ ನಿರ್ಮಾಣ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಿದೆ. ಈ ಎಲ್ಲ ಕಾರ್ಯಕ್ರಮಗಳು ಅಪೌಷ್ಠಿಕತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಮುಖ ಪ್ರಯತ್ನಗಳೆನಿಸಿವೆ.

Advertisement

ಅಪೌಷ್ಠಿಕತೆ ನಿವಾರಣೆಗೆ ಆದ್ಯತೆ
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಡಾ.ಜಯಮಾಲಾ, ರಾಜ್ಯದಲ್ಲಿ ಅಪೌಷ್ಠಿಕತೆಯನ್ನು ಕಡಿತಗೊಳಿಸಲು ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು,
“ಪೋಷಣೆ ಅಭಿಯಾನ- ಪೌಷ್ಠಿಕ ಕರ್ನಾಟಕ’ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅಪೌಷ್ಠಿಕತೆ ನಿವಾರಣೆಗೆ ಪೂರಕವಾದ ಕಾರ್ಯಕ್ರಮಗಳ ಅನುಷ್ಠಾನದ ಜತೆಗೆ ನಾನಾ ಇಲಾಖೆಗಳು ಸಂಘಟಿತವಾಗಿ ಕಾರ್ಯ ನಿರ್ವಹಿಸುವಂತೆ ಪ್ರೋತ್ಸಾಹಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

“ಪೋಷಣೆ ಅಭಿಯಾನ- ಪೌಷ್ಠಿಕ ಕರ್ನಾಟಕ’ ಅಭಿಯಾನದಡಿ ಮಾತೃಪೂರ್ಣ, ಮಾತೃಶ್ರೀ, ಸೃಷ್ಟಿ, ಕ್ಷೀರಭಾಗ್ಯ, ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಯೋಜನೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅರ್ಹ ಫ‌ಲಾನುಭವಿಗಳಿಗೆ ಎಲ್ಲ ಯೋಜನೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ.

ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಮಧ್ಯಾಹ್ನ ಬಿಸಿಯೂಟ ನೀಡುವ ಮಾತೃಪೂರ್ಣ ಯೋಜನೆ ಜಾರಿಯಾದಾಗ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಬಿಸಿಲಿನಲ್ಲಿ ಗರ್ಭಿಣಿಯರು ಅಂಗನವಾಡಿ ಕೇಂದ್ರಗಳಿಗೆ ನಡೆದು ಹೋಗಿ ಊಟ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು. ಆ ಯೋಜನೆ ಶ್ರೀಮಂತ ಜನರಿಗೆ ರೂಪಿಸಿದ್ದಲ್ಲ. ಬದಲಿಗೆ ರೈತ ಮಹಿಳೆ, ಕಾರ್ಮಿಕ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಿದ ಯೋಜನೆಯಾಗಿದ್ದು, ಇಂದು ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next