Advertisement

Nut yellow leaf: ಅಡಿಕೆ ಹಳದಿ ಎಲೆ ರೋಗ ನಿರೋಧಕ ಅಂಗಾಂಶ ಕಸಿ ತಳಿ

12:54 AM Aug 13, 2023 | Team Udayavani |

ಪುತ್ತೂರು: ಕಾಸರಗೋಡು ಸಿಪಿಸಿಆರ್‌ಐಯಲ್ಲಿ ಅಡಿಕೆ ಎಲೆ ಹಳದಿ ರೋಗ ನಿರೋಧಕ ಗುಣವುಳ್ಳ ಅಂಗಾಂಶ ಕಸಿ ತಳಿ ಅಭಿವೃದ್ಧಿ ನಡೆಯುತ್ತಿದ್ದು, ಗಿಡದ ಒಂದು ಹಂತ ಪೂರ್ಣವಾಗಿದೆ.

Advertisement

ಎರಡು ವರ್ಷಗಳ ಹಿಂದೆ ಕಾಸರ ಗೋಡು ಸಿಪಿಸಿಆರ್‌ಐ ವಿಜ್ಞಾನಿ ಗಳು ಅಡಿಕೆ ಎಲೆ ಹಳದಿ ರೋಗ ಬಾಧಿತ ಪ್ರದೇಶಗಳಲ್ಲಿ ಉಳಿದಿರುವ ಬೆರಳೆಣಿಕೆಯ ಆರೋಗ್ಯಯುತ ಅಡಿಕೆ ಮರ ಗಳಿಂದ ಎಳೆ ಹಿಂಗಾರ ಸಂಗ್ರಹಿಸಿ ಅಡಿಕೆ ಹಳದಿ ಎಲೆ ರೋಗ ನಿರೋಧಕ ಗುಣವುಳ್ಳ ಅಂಗಾಂಶ ಕಸಿ ತಳಿ ಅಭಿವೃದ್ಧಿಯ ಪ್ರಯತ್ನ ಆರಂಭಿಸಿದ್ದರು. ಈಗ ಅಭಿವೃದ್ಧಿ ಪಡಿಸಿದ ತಳಿ ಪ್ರಯೋಗಾಲಯದಲ್ಲಿ ಬೆಳೆಯುತ್ತಿದ್ದು, ಯಶಸ್ಸಿನ ನಿರೀಕ್ಷೆ ಮೂಡಿಸಿದೆ.

ಅಂಗಾಂಶ ಕಸಿ ಗಿಡ ಬೆಳೆಸುವ ಹಂತ
ಅಡಿಕೆ ಹಳದಿ ಎಲೆ ರೋಗ ನಿರೋಧಕ ಗುಣವುಳ್ಳ ತಳಿ ಅಭಿವೃದ್ಧಿಯ ವಿಧಾನದ ಬಗ್ಗೆ ಎರಡು ವರ್ಷಗಳಿಂದ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಪ್ರಯತ್ನ ನಡೆಸಿತ್ತು. ಅಂಗಾಂಶ ಕಸಿಗಾಗಿ ಸಂಪಾಜೆ, ಅರಂತೋಡು, ಚೆಂಬು ಹಾಗೂ ಶೃಂಗೇರಿಗಳಿಂದ ಆರೋಗ್ಯಯುತ ಮರಗಳ ಎಳೆ ಹಿಂಗಾರವನ್ನು ಸಂಗ್ರಹಿಸಿ ದ್ದರು. ಇದನ್ನು ಅಂಗಾಂಶ ಕಸಿ ವಿಧಾನದಲ್ಲಿ ಅಭಿವೃದ್ಧಿಪಡಿಸುತ್ತಿದ್ದರು.

ಎರಡು ವರ್ಷ ಬೇಕು
ಇದುವರೆಗೆ ಅಂಗಾಂಶ ಕಸಿ ವಿಧಾನ ಅಡಿಕೆ ಹಾಗೂ ತೆಂಗಿನಲ್ಲಿ ಪರಿಣಾಮಕಾರಿಯಾಗಿ ಸಾಧ್ಯವಾಗಿರಲಿಲ್ಲ. ಈಗ ಸಿಪಿಸಿಆರ್‌ಐ ವಿಜ್ಞಾನಿಗಳು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ತೀರಾ ನಿಧಾನವಾದ ಹಾಗೂ ಸೂಕ್ಷ್ಮವಾದ ಕಾರ್ಯ ಇದಾಗಿದೆ. ವಿಜ್ಞಾನಿಗಳ ತಂಡ ಅತೀವ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದು, ಇದು ಗಿಡವಾಗಿ ರೂಪುಗೊಳ್ಳಲು ಇನ್ನೂ ಕನಿಷ್ಠ ಎರಡು ವರ್ಷ ಬೇಕು.

ಒಂದು ಹಂತ ಪೂರ್ಣ
ಅಂಗಾಂಶ ಕಸಿ ವಿಧಾನದಲ್ಲಿ ಈಗಾಗಲೇ ಗಿಡದ ಒಂದು ಹಂತ ಸಿದ್ಧವಾಗಿದೆ. ಗಿಡ ಇನ್ನಷ್ಟೇ ಬೇರು ಮತ್ತು ಎಲೆಗಳ ಹಂತಕ್ಕೆ ಬೆಳೆಯಬೇಕಿದೆ. ಪ್ರತೀ ಹಂತದಲ್ಲೂ ತುಂಬಾ ಎಚ್ಚರಿಕೆ ಮತ್ತು ಆರೈಕೆ ಅಗತ್ಯವಾಗಿರುವುದರಿಂದ ಇಡೀ ಪ್ರಕ್ರಿಯೆ ನಿಧಾನವಾಗಿ ನಡೆಯುತ್ತಿದೆ. ಅಂಗಾಂಶ ಕಸಿಯಲ್ಲಿ ಎಲ್ಲ ಮರಗಳ ಹಿಂಗಾರವೂ ಒಂದೇ ವೇಗದಲ್ಲಿ ಬೆಳೆಯಲು ಸಾಧ್ಯವಿಲ್ಲದ ಕಾರಣ ಸಾಕಷ್ಟು ಮಾದರಿಗಳು ಬೇಕಾಗುತ್ತವೆ. ಎರಡು ವರ್ಷಗಳ ಬಳಿಕ ಗಿಡ ತಯಾರಾದರೂ ಅದರ ಬೆಳವಣಿಗೆ ಹಾಗೂ ಅಧ್ಯಯನದ ಬಳಿಕವಷ್ಟೇ ಕೃಷಿಕರಿಗೆ ಲಭ್ಯವಾಗಲು ಸಾಧ್ಯವಿದೆ ಎಂದು ಸಿಪಿಸಿಆರ್‌ಐ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

Advertisement

ತಂಡ ಭೇಟಿ
ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕ ಡಾ| ಬಾಲಚಂದ್ರ ಹೆಬ್ಟಾರ್‌, ಹಿರಿಯ ವಿಜ್ಞಾನಿಗಳಾದ ಡಾ| ವಿನಾಯಕ ಹೆಗ್ಡೆ, ಡಾ| ರವಿ ಭಟ್‌, ಪ್ರಯೋಗಾಲಯದ ತಾಂತ್ರಿಕ ವಿಜ್ಞಾನಿ ಮುರಳಿಕೃಷ್ಣ ಹಾಗೂ ತಂಡ ಅಂಗಾಂಶ ಕಸಿ ತಳಿ ಅಭಿವೃದ್ಧಿಯ ಬಗ್ಗೆ ಕೃಷಿಕರ ತಂಡಕ್ಕೆ ಮಾಹಿತಿ ನೀಡಿದರು. ತಂಡದಲ್ಲಿ ಸುಳ್ಯ ಸಹಕಾರಿ ಯೂನಿಯನ್‌ ಅಧ್ಯಕ್ಷ ರಮೇಶ್‌ ದೇಲಂಪಾಡಿ, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆ, ಅಖೀಲಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ, ಸಂಪಾಜೆ-ಚೆಂಬು ಕೃಷಿಕ ಭವ್ಯಾನಂದ ಕುಯಿಂತೋಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next