ತೋಟಗಾರಿಕ ಬೆಳೆಯಾಗಿರುವ ಅಡಿಕೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ತಾಲೂಕುಗಳ ಕೃಷಿಕರ ಜೀವನಕ್ಕೆ ಆಧಾರವಾಗಿದೆ. ಧಾರಣೆಯ ಏರಿಳಿತಗಳ ಹೊರತಾಗಿಯೂ ಈ ಭಾಗಗಳ ಜನ ಅಡಿಕೆ ಬೆಳೆಯನ್ನೇ ಅವಲಂಬಿಸಿದ್ದಾರೆ. ದಶಕಗಳ ಹಿಂದೆ ಅಡಿಕೆ ಮರಗಳಿಗೆ ತಗಲಿದ ಹಳದಿ ರೋಗವೆಂಬ ಹೆಮ್ಮಾರಿ ಈಗ ಹೆಮ್ಮರವಾಗಿ ಬೆಳೆದು ಎಕರೆಗಟ್ಟಲೆ ಅಡಿಕೆ ತೋಟಗಳನ್ನು ನಾಶ ಮಾಡಿದೆ. ಪುತ್ತೂರು, ಸುಳ್ಯ, ಕಡಬ ತಾಲೂಕಿನ ಹಲವೆಡೆ ಅಡಿಕೆ ಮರಗಳನ್ನು ಬಾಧಿಸಿರುವ ಈ ರೋಗಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸರಕಾರದ ಇಲಾಖೆಗಳಿಗಾಗಲಿ, ತೋಟಗಾರಿಕ ತಜ್ಞರಿಗಾಗಲಿ ಇನ್ನೂ ಸಾಧ್ಯವಾಗಿಲ್ಲ. ವರ್ಷಗಳುರುಳಿದಂತೆ ಹಳದಿ ರೋಗದ ಸಮಸ್ಯೆ ಅಧಿಕಗೊಳ್ಳುತ್ತಲೇ ಸಾಗಿದ್ದು ಬೆಳೆಗಾರರ ಪಾಲಿಗೆ ಇದೊಂದು ಬಗೆಹರಿಯದ ಜಟಿಲ ಸಮಸ್ಯೆಯಾಗಿಯೇ ಉಳಿದಿದೆ.
ಅಡಿಕೆಗೆ ಮಾರುಕಟ್ಟೆಯಲ್ಲಿ ಸೂಕ್ತ ಧಾರಣೆ, ಬೇಡಿಕೆ ಇರುವ ಸಂದರ್ಭದಲ್ಲಿಯೇ ಹಳದಿ ರೋಗಕ್ಕೆ ಅಡಿಕೆ ಮರಗಳು ತುತ್ತಾಗುತ್ತಿರುವುದು ಬೆಳೆಗಾರರನ್ನು ಆತಂಕದ ಮಡುವಿಗೆ ತಳ್ಳಿದೆ. ಸುಳ್ಯದ ಸಂಪಾಜೆಯಲ್ಲಿ ಹಲವು ದಶಕಗಳ ಹಿಂದೆ ಕಾಣಿಸಿಕೊಂಡ ಅಡಿಕೆ ಹಳದಿ ರೋಗವೀಗ ಹತ್ತಾರು ಗ್ರಾಮಗಳ ಅಡಿಕೆ ತೋಟಗಳಿಗೆ ವ್ಯಾಪಿಸಿದೆ. ಈಗಾಗಲೇ ಪುತ್ತೂರು ತಾಲೂಕಿನ ಕೆಲವೆಡೆ ಅಡಿಕೆ ತೋಟಗಳಿಗೂ ಹಳದಿ ರೋಗ ಕಾಲಿಟ್ಟಿದ್ದು ತೀವ್ರ ಗತಿಯಲ್ಲಿ ವ್ಯಾಪಿಸುತ್ತಿದೆ.
ಹಲವಾರು ವರ್ಷಗಳಿಂದ ಹಳದಿ ರೋಗದ ಕುರಿತಂತೆ ನಿರಂತರವಾಗಿ ಸಂಶೋಧನೆ, ಅಧ್ಯಯನಗಳು ನಡೆಯುತ್ತಲೇ ಬಂದಿವೆಯಾದರೂ ಇಂದಿಗೂ ಈ ರೋಗ ತಡೆಗಟ್ಟಲು ಔಷಧ ಕಂಡುಹಿಡಿಯುವಲ್ಲಿ ಸಂಶೋಧನ ಕೇಂದ್ರಗಳು ಸಫಲವಾಗಿಲ್ಲ. ಸಾವಯವ, ವೈಜ್ಞಾನಿಕ ಮಾದರಿಯಲ್ಲಿ ರೋಗ ತಡೆಯುವ ಪ್ರಯತ್ನಗಳು ಮುಂದುವರಿದಿವೆಯಾದರೂ ಇವ್ಯಾವೂ ಶಾಶ್ವತ ಫಲ ನೀಡಿಲ್ಲ.
ಶೇ. 85ಕ್ಕೂ ಅಧಿಕ ಭಾಗ ಕೃಷಿಯಿಂದ ಆವೃತವಾಗಿರುವ ಈ 3 ತಾಲೂಕುಗಳಲ್ಲಿ ಹಳದಿ ರೋಗ ವ್ಯಾಪಿಸಿದ ತೋಟಗಳಲ್ಲಿ ಅಡಿಕೆ ಮರಗಳು ಸಂಪೂರ್ಣ ನಾಶವಾಗಿವೆ. ರೋಗದ ತೀವ್ರತೆಯಿಂದಾಗಿ ಹಿಂದೆ ಅಡಿಕೆ ತೋಟಗಳಿದ್ದ ಜಾಗದಲ್ಲಿ ಪುನಃ ಅಡಿಕೆ ಕೃಷಿ ಸಾಧ್ಯವಾಗುತ್ತಿಲ್ಲ. ರೋಗ ಬಾಧಿಸಿದ ತೋಟದಲ್ಲಿ ಹೊಸದಾಗಿ ಅಡಿಕೆ ಗಿಡ ನೆಟ್ಟರೂ ಅವು ಚಿಗುರುತ್ತಿಲ್ಲ. ಹತ್ತಾರು ವಿಜ್ಞಾನಿಗಳ ತಂಡ ಹಲವು ಪರೀಕ್ಷೆಗಳನ್ನು ನಡೆಸಿದರೂ ರೋಗದ ಮೂಲ ಪತ್ತೆ, ನಿಯಂತ್ರಣ ಕ್ರಮ, ಶಾಶ್ವತ ಪರಿಹಾರ ಇವೆಲ್ಲವೂ ಇಂದಿಗೂ ಬಗೆಹರಿಯದ ಸಮಸ್ಯೆಗಳಾಗಿಯೇ ಉಳಿದಿವೆ.
ಹಳದಿ ರೋಗದ ಸಮಸ್ಯೆ ಉಲ್ಬಣಿಸಿದಾಗಲೆಲ್ಲ ಅಡಿಕೆ ಬೆಳೆಗಾರರ ನಿಯೋಗ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬಳಿಗೆ ತೆರಳಿ ನಷ್ಟಕ್ಕೆ ಪರಿಹಾರ, ನಿಯಂತ್ರಣ ಕ್ರಮಗಳ ಬಗೆಗೆ ಬೇಡಿಕೆ ಸಲ್ಲಿಸುತ್ತಲೇ ಬಂದಿದೆ. ಆದರೆ ಇದುವರೆಗೂ ಬೆಳೆಗಾರರ ಬೇಡಿಕೆಗೆ ಸೂಕ್ತ ಸ್ಪಂದನೆ ದೊರಕಿಲ್ಲ. ಹಳದಿ ರೋಗ ಪೀಡಿತ ಪ್ರದೇಶದ ಅಡಿಕೆ ಬೆಳೆಗಾರರ ನೆರವಿಗೆ ಪ್ಯಾಕೇಜ್ ಘೋಷಿಸುವ ಭರವಸೆಯನ್ನು ಸಚಿವರು, ಅಧಿಕಾರಿಗಳು ನೀಡಿದರೂ ಅದಿನ್ನೂ ಜಾರಿ ಆಗಿಲ್ಲ. ಇತ್ತ ಜಿಲ್ಲೆಯ ನೂತನ ಸಚಿವರು ತತ್‌ಕ್ಷಣ ಗಮನಹರಿಸಿ ಅಡಿಕೆ ಬೆಳೆಗಾರರ ಗೋಳಿಗೆ ಸ್ಪಂದಿಸಬೇಕಿದೆ.
-ಸಂ