Advertisement

ಅಡಿಕೆ, ಕಾಳು ಮೆಣಸು ಬುಡ ಬಿಡಿಸಲು ಇದು ಸಕಾಲ

07:26 PM Sep 03, 2020 | mahesh |

ಬ್ರಹ್ಮಾವರ: ಅಡಿಕೆ ಕರಾವಳಿ ಪ್ರದೇಶದ ವಾಣಿಜ್ಯ ಬೆಳೆ. ಸಮರ್ಪಕ ನಿರ್ವಹಣೆಯಾದಲ್ಲಿ ಪ್ರತಿ ಮರದಿಂದ 2ರಿಂದ 3 ಕೆ.ಜಿ.ಯಷ್ಟು ಚಾಲಿ ಇಳುವರಿ ಅಪೇಕ್ಷಿಸಬಹುದು. ಕರಾವಳಿ ಜಿಲ್ಲೆಯಲ್ಲಿ 3,800 ಮಿ.ಮೀ.ಗೂ ಅ ಧಿಕ ಮಳೆಯಾಗುವುದರಿಂದ ಅಡಿಕೆಗೆ ಕೊಳೆ ರೋಗದ ಬಾಧೆ ಹೆಚ್ಚು. ಇದಕ್ಕೆ ಈಗಾಗಲೇ 2ರಿಂದ 3 ಬಾರಿ ಬೋರ್ಡೊ ದ್ರಾವಣ ಸಿಂಪರಣೆಯನ್ನು ರೈತರು ಮಾಡಿರುತ್ತಾರೆ.

Advertisement

ಬೇಸಾಯ ಕ್ರಮ
ಅಡಿಕೆ ಮತ್ತು ಕಾಳು ಮೆಣಸು ಬಹು ವಾರ್ಷಿಕ ಬೆಳೆಗಳಾಗಿದ್ದು ಉತ್ತಮ ಇಳುವರಿ ಕೊಡಲು ನಿರಂತರ ಪೋಷಕಾಂಶಗಳನ್ನು ಅಪೇಕ್ಷಿಸುತ್ತವೆ. ಸಾಮಾನ್ಯವಾಗಿ ಇವೆರಡು ಬೆಳೆಗಳ ಬೇರು ಭೂಮಿಯ ಆಳಕ್ಕೆ ಹೋಗದೇ ಇರುವ ಕಾರಣ ಸಾಕಷ್ಟು ಪೋಷಕಾಂಶಗಳು ಬೇರಿನ ವ್ಯಾಪ್ತಿಗೆ ಸಿಗುವುದಿಲ್ಲ. ಆದ್ದರಿಂದ ಉತ್ತಮ ಇಳುವರಿ ಪಡೆಯುವ ನಿಟ್ಟಿನಲ್ಲಿ ಅಡಿಕೆ ಮರಗಳಿಗೆ ಮುಖ್ಯ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ ಪ್ರತಿ ವರ್ಷ ಶಿಫಾರಸು ಮಾಡಿರುವ ಪ್ರಮಾಣದಲ್ಲಿ ಅಥವಾ ಮಣ್ಣು ಪರೀಕ್ಷೆ ಆಧಾರದ ಮೇಲೆ ಒದಗಿಸಬೇಕಾಗುತ್ತದೆ.

ಪ್ರಮಾಣ
ಮುಖ್ಯ ಬೆಳೆಯಾಗಿ ಅಡಿಕೆಯೊಂದೇ ಬೆಳೆದಿರುವ ಐದು ವರ್ಷ ಮೇಲ್ಪಟ್ಟ ಮರಗಳಿಗೆ ಆಗಸ್ಟ್‌ನಲ್ಲಿ ಪ್ರತಿ ಮರಕ್ಕೆ ಅರ್ಧ ಕೆಜಿ ಸುಣ್ಣ (ಚಿಪ್ಪು ಸುಣ್ಣ ಅಥವಾ ಡೋಲೋಮೈಟ್‌ ಸುಣ್ಣ)ವನ್ನು ಬುಡದಿಂದ 1 ಅಡಿ ದೂರದಲ್ಲಿ ಕಳೆಗಳನ್ನು ತೆಗೆದು ಚೆಲ್ಲಬೇಕು. ಸುಣ್ಣ ಒದಗಿಸಿದ 15ರಿಂದ 21 ದಿವಸದ ಅನಂತರ ಅಡಿಕೆಗೆ ಶಿಫಾರಸು ಮಾಡಿರುವ ಪೋಷಕಾಂಶಗಳ ಅರ್ಧದಷ್ಟು ಪ್ರಮಾಣವನ್ನು ಒದಗಿಸಬೇಕು. ಅದರಂತೆ ಪ್ರತಿ ಅಡಿಕೆ ಮರಕ್ಕೆ 165 ಗ್ರಾಂ ಬೇವು ಲೇಪಿತ ಯೂರಿಯಾ, 150 ಗ್ರಾಂ ಶಿಲಾರಂಜಕ ಮತ್ತು 175 ಗ್ರಾಂ ಪೊಟ್ಯಾಷ್‌ ಗೊಬ್ಬರವನ್ನು ನೀಡಬೇಕು.

ರಾಸಾಯನಿಕ ಗೊಬ್ಬರದ ಜತೆ 10 ಕೆಜಿ ಹಸಿರಎಲೆ ಗೊಬ್ಬರ ಮತ್ತು 20 ಕೆಜಿ ಕಂಪೋಸ್ಟ್‌ ಗೊಬ್ಬರ ಕೊಡುವುದರಿಂದ ಮಣ್ಣಿನಲ್ಲಿ ಸೂಕ್ಷ್ಮ ಜೀವಾಣುಗಳ ಜತೆಗೆ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ಶಿಫಾರಸು ರಾಸಾಯನಿಕ ಗೊಬ್ಬರವನ್ನು ಮೇ-ಜೂನ್‌ ತಿಂಗಳಲ್ಲಿ ಮೇಲಿನಂತೆ 1 ಅಡಿ ದೂರದಲ್ಲಿ ನೀಡಬೇಕು.

ಅಡಿಕೆ ಮತ್ತು ಕಾಳು ಮೆಣಸು ಬಳ್ಳಿಗಳನ್ನು ಅಂತರ ಬೆಳೆಯಾಗಿ ಬೆಳೆದ ತೋಟದಲ್ಲಿ ಹೆಚ್ಚುವರಿಯಾಗಿ ಪೋಷಕಾಂಶಗಳನ್ನು ಒದಗಿಸಬೇಕಾಗುತ್ತದೆ. ಇಂತಹ ಮರಗಳಿಗೆ 290 ಗ್ರಾಂ ಬೇವು ಲೇಪಿತ ಯೂರಿಯಾ, 250 ಗ್ರಾಂ ಶಿಲಾರಂಜಕ, ಮತ್ತು 300 ಗ್ರಾಂ ಪೊಟ್ಯಾಷ್‌ ಗೊಬ್ಬರಗಳನ್ನು ಹಾಗೂ ಅಷ್ಟೇ ಪ್ರಮಾಣವನ್ನು ಮೇ-ಜೂನ್‌ ತಿಂಗಳುಗಳಲ್ಲಿ ನೀಡಬೇಕಾಗುತ್ತದೆ. ಹಾಗೆಯೆ ಶಿಫಾರಸು ಮಾಡಿದ ಹಸಿರೆಲೆ ಮತ್ತು ಕಾಂಪೋಸ್ಟ್‌ ಗೊಬ್ಬರಗಳನ್ನು ಕೊಡಬೇಕಾಗುತ್ತದೆ.

Advertisement

ಅಡಿಕೆ ಸೀಳಲು ಪ್ರಮುಖ ಕಾರಣ
ಬೇಸಗೆಯಲ್ಲಿ ನೀರು ಕಡಿಮೆ ಇದ್ದು, ಮಳೆಗಾಲದಲ್ಲಿ ನೀರು ನಿಂತ ತೋಟಗಳಲ್ಲಿ ಅಡಿಕೆ ಸೀಳುವುದು ಹೆಚ್ಚಾಗಿ ಕಂಡು ಬರುತ್ತದೆ. ಪೊಟ್ಯಾಷ್‌ ಪೋಷಕಾಂಶ ಕಡಿಮೆಯಾದರೆ ಆಗಲೂ ಅಡಿಕೆ ಸೀಳುತ್ತದೆ. ಮೇಲೆ ತಿಳಿಸಿದ ಎರಡು ಸಮಸ್ಯೆ ಇಲ್ಲದೆಯೂ ಅಡಿಕೆ ಸೀಳುವಿಕೆ ಕಂಡುಬಂದರೆ ಅದು ಬೊರಾನ್‌ ಪೋಷಕಾಂಶದ ಕೊರತೆಯಿಂದಾಗಿರುತ್ತದೆ. ಅದಕ್ಕಾಗಿ ಪ್ರತಿ ಅಡಿಕೆ ಬುಡಕ್ಕೆ 25 ರಿಂದ 30ಗ್ರಾಂ ಬೊರಾನ್‌ ಗೊಬ್ಬರವನ್ನು ಕೊಡಬೇಕಾಗುತ್ತದೆ. ಇದರಿಂದ ಸಮಸ್ಯೆ ಕಡಿಮೆಯಾಗುತ್ತದೆ.
ಹೆಚ್ಚಿನ ಮಾಹಿತಿಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರವನ್ನು (0820-2563923) ಸಂಪರ್ಕಿಸಬಹುದಾಗಿದೆ.

ಸೂಕ್ತ ಸಮಯ
ಸೆಪ್ಟಂಬರ್‌-ಅಕ್ಟೋಬರ್‌ ತಿಂಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವುದರಿಂದ ಮರಕ್ಕೆ ಬೇಸಾಯ ಮಾಡುವುದಕ್ಕೆ ಸೂಕ್ತ ಕಾಲವಾಗಿರುತ್ತದೆ. ಇದರಿಂದ ಬರುವ ವರ್ಷ ಉತ್ತಮ ಫಸಲು ನಿರೀಕ್ಷಿಸಬಹುದು. ಸಾಮಾನ್ಯವಾಗಿ ಅಡಿಕೆ ತೋಟದಲ್ಲಿ ಕಾಳು ಮೆಣಸು ಬಳ್ಳಿಗಳನ್ನು ಅಂತರ ಬೆಳೆಯಾಗಿ ಬೆಳೆದಿರುವುದರಿಂದ, ಶಿಫಾರಸು ಮಾಡಿರುವ ಪೋಷಕಾಂಶಗಳನ್ನು ಎರಡು ಸಮ ಕಂತುಗಳಲ್ಲಿ ನೀಡಬೇಕಾಗುತ್ತದೆ.

ರೈತಸೇತು ಸಹಾಯವಾಣಿ ಕೃಷಿ ಸಮಸ್ಯೆಗಳಿದ್ದರೆ ತಿಳಿಸಿ
ಇದು ರೈತರಿಗಾಗಿ ಇರುವ ಅಂಕಣ. ಕೃಷಿಕರಿಗೆ ಸಿಗುವ ಸೌಲಭ್ಯ, ಅವರಿಗೆ ಅಗತ್ಯವಿರುವ ಮಾಹಿತಿಯನ್ನು ಇಲ್ಲಿ ಪ್ರತಿ ವಾರ ಕೊಡಲಾಗುತ್ತದೆ. ನಿಮ್ಮಲ್ಲಿಯೂ ಯಾವುದಾದರೂ ಸಂಶಯಗಳಿದ್ದರೆ, ಪರಿಣತರ ಅಭಿಪ್ರಾಯ ಅಗತ್ಯವಿದ್ದರೆ ಅದನ್ನು ಬರೆದು ಕಳುಹಿಸಬಹುದು. ತಜ್ಞರ ಬಳಿ ಸಮಾಲೋಚಿಸಿ ಅದಕ್ಕೆ ಪರಿಹಾರ ಸೂಚಿಸಲಾಗುವುದು. ಈ ರೀತಿ ಕಳುಹಿಸುವಾಗ ನಿಮ್ಮ ಹೆಸರು, ಊರು, ಸಂಪರ್ಕ ಸಂಖ್ಯೆ ನಮೂದಿಸಿ.

ವಾಟ್ಸಪ್‌ ಸಂಖ್ಯೆ 76187 74529

Advertisement

Udayavani is now on Telegram. Click here to join our channel and stay updated with the latest news.

Next