ಶಿರಸಿ: ತಾಲೂಕಿನ ಯಡಳ್ಳಿಯ ಕಾನಗೋಡ ಗ್ರೂಪ್ ವಿವಿಧೋದ್ದೇಶಗಳ ಸಹಕಾರಿ ಸಂಘ ದಶಂಬರ 24 ಮತ್ತು 25ರಂದು ದೋಟಿಯ ಮೂಲಕ ಅಡಿಕೆ ಕೊಯ್ಲು ಮತ್ತು ಸಿಂಪಡಣೆ ತರಬೇತಿ ಶಿಬಿರ ನಡೆಸಲಿದೆ.
ಮರ ಏರಿ ನಡೆಸುವ ಮರಗೆಲಸದಲ್ಲಿರುವ ಅವಘಡ ಸಾಧ್ಯತೆ, ಈ ಕೆಲಸ ಮಾಡುವ ಕುಶಲಕರ್ಮಿಗಳ ಅಭಾವ ಗಮನದಲ್ಲಿಟ್ಟು ಯಡಳ್ಳಿ ಸೊಸೈಟಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಕುಶಲಕರ್ಮಿ ಮಾಡಲು ಆಸಕ್ತಿ ಇರುವ ಆಯ್ದ ೮ ಮಂದಿ ಯುವಕರು ಈ ಶಿಬಿರದಲ್ಲಿ ತರಬೇತಿ ಪಡೆಯಲಿದ್ದಾರೆ.
ಮೂರೂರು ಕಲ್ಲಬ್ಬೆಯ ಹಿರಿಯ ಕೃಷಿಕ ಆರ್.ಜಿ.ಹೆಗಡೆ ಮತ್ತವರ ಸ್ನೇಹಿತರು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ದೋಟಿ ಮೂಲಕ ಅಡಿಕೆಯ ಮರಗೆಲಸದಲ್ಲಿ ಕುಮಟಾ ತಾಲೂಕಿನ ಮೂರೂರು ಕಲ್ಲಬ್ಬೆ ದೊಡ್ಡ ಸಾಧನೆ ಮಾಡಿದೆ. ಕಳೆದೆರಡು ವರ್ಷಗಳಲ್ಲಿ ಅಲ್ಲಿ ಐವತ್ತಕ್ಕೂ ಹೆಚ್ಚು ದೋಟಿ ಜಾಬ್‌ವರ್ಕರುಗಳು ತಯಾರಾಗಿದ್ದಾರೆ. ಇವರು ತಿಂಗಳಿಗೆ ಸರಾಸರಿ 25,000 ರೂ. ಸಂಪಾದನೆ ಮಾಡುತ್ತಿದ್ದಾರೆ. ಇವರಿಗೆ ಹೆಚ್ಚುಕಡಿಮೆ ವರ್ಷಾರ್ಧ ಕಾಲ ಈ ಕೆಲಸ ಸಿಗುತ್ತಿದೆ. ಪ್ರಾಣಾಪಾಯ ಸಾಧ್ಯತೆ ಇಲ್ಲದಿರುವುದು ಮತ್ತು ಒಳ್ಳೆಯ ವರಮಾನ ಈ ಯುವಕರನ್ನು ದೋಟಿ ಮರಗೆಲಸಕ್ಕೆ ಆಕರ್ಷಿಸಿದೆ. ತರಬೇತಿಯ ಪ್ರಾಯೋಗಿಕ ಶಿಕ್ಷಣ ಯಡಳ್ಳಿ ಬೆಳ್ಳೇಕೇರಿ ಕೃಷಿಕರ ತೋಟದಲ್ಲಿ ನಡೆಯಲಿದೆ.
ತ್ಯಾಗಲಿ ಸೊಸೈಟಿ ಕಳೆದೆರಡು ವರ್ಷಗಳಿಂದ ಸ್ಥಳೀಯ ಯುವಕರಿಗೆ ದೋಟಿ ಮರಗೆಲಸ ಕಲಿಸಿ ತಾನೇ ಕೊಯ್ಲು – ಸಿಂಪಡಣೆ ನಡೆಸಿಕೊಡುತ್ತಿದೆ. ಕೃಷಿಕ ಸದಸ್ಯರ ಸಂಕಟ ನಿವಾರಣೆಯತ್ತ ಈ ಸಾಧನೆ ಒಂದು ಮೈಲಿಗಲ್ಲಾಗಿದೆ. ಈ ಸಾಧನೆಯ ಪ್ರೇರಣೆಯಿಂದ ಯಡಳ್ಳಿ ಸೊಸೈಟಿ ಈ ತರಬೇತಿ ಕೊಡಿಸಲು ಮುಂದಾಗಿದೆ.
ಅಂದು ಬೆಳಿಗ್ಗೆ 9:30ಕ್ಕೆ ನಾಣಿಕಟ್ಟ ಸೊಸೈಟಿ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತಿಹಳ್ಳಿ ಉದ್ಘಾಟಿಸುವರು. ಅತಿಥಿಗಳಾಗಿ ಮೂರೂರು ಆರ್.ಜಿ.ಹೆಗಡೆ, ಕೆಶಿನ್ಮನೆ ವಿ.ಎಸ್.ಹೆಗಡೆ ಪಾಲ್ಗೊಳ್ಳುವರು ಎಂದು ಪ್ರಕಟನೆಯಲ್ಲಿ ಸೊಸೈಟಿ ಅಧ್ಯಕ್ಷ ಜಿ.ಆರ್ .ಹೆಗಡೆ ಬೆಳ್ಳೇಕೆರಿ ತಿಳಿಸಿದ್ದಾರೆ.