Advertisement

ಅಡಿಕೆ, ರಬ್ಬರ್‌ಗೆ ಪರ್ಯಾಯ ಬೆಳೆ ತಾಳೆ; ಸಂಘಕ್ಕೆ ಸರಕಾರದಿಂದ ಅನುಮತಿ

05:58 PM Dec 23, 2019 | mahesh |

ಅರಂತೋಡು: ಸುಳ್ಯ ತಾಲೂಕಿನಲ್ಲಿ ಅಡಿಕೆ ತೋಟಕ್ಕೆ ಬಾಧಿಸಿದ ವಿವಿಧ ರೋಗಗಳಿಂದ ಹಾಗೂ ರಬ್ಬರ್‌ ಧಾರಣೆ ಕುಸಿತದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕೆಲವು ವರ್ಷಗಳಿಂದ ಅಡಿಕೆ ಮತ್ತು ರಬ್ಬರ್‌ಗೆ ಪರ್ಯಾಯ ಬೆಳೆಯಾಗಿ ತಾಳೆಯನ್ನು ಬೆಳೆಯುತ್ತಿದ್ದಾರೆ.

Advertisement

ಸುಳ್ಯ ಹಾಗೂ ಪುತ್ತೂರು ತಾಲೂಕಿನಲ್ಲಿ ಅಡಿಕೆ ಬೆಳೆಗೆ ಎಳೆ ಹಳದಿ ರೋಗ, ಬೇರು ಹುಳ ರೋಗ, ಕೊಳೆ ರೋಗ ವ್ಯಾಪಕವಾಗಿ ಕಾಡುತ್ತಿವೆ. ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ರಬ್ಬರ್‌ ಕೃಷಿಗೂ ವಿವಿಧ ರೋಗಗಳು ಬಾಧಿಸುತ್ತಿವೆ. ರಬ್ಬರ್‌ ಧಾರಣೆಯೂ ಪಾತಾಳಕ್ಕೆ ಇಳಿದ ಹಿನ್ನೆಲೆಯಲ್ಲಿ ರೈತರರಿಗೆ ಪರ್ಯಾಯ ಕೃಷಿ ಹುಡುಕುವುದು ಅನಿವಾರ್ಯವಾಯಿತು.

ಸರಕಾರ 2011ರಲ್ಲಿ ತಾಳೆಯನ್ನು ಅಡಿಕೆ ಹಾಗೂ ರಬ್ಬರ್‌ ಬೆಳೆಗೆ ಪರ್ಯಾಯ ಬೆಳೆಯಾಗಿ ಘೋಷಿಸಿದೆ. ದ.ಕ., ಉಡುಪಿ ಜಿಲ್ಲೆಯಲ್ಲಿ ತಾಳೆ ಬೆಳೆಗಾರರಿದ್ದು, ಸುಮಾರು 500 ರೈತರು ತಾಳೆ ಕೃಷಿ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲೂ ತಾಳೆ ಬೆಳೆಯುವ ಉತ್ಸಾಹಿ ರೈತರಿದ್ದಾರೆ.

ತಾಳೆ ಎಣ್ಣೆಗೆ ಬೇಡಿಕೆ
ತಾಳೆ ಎಣ್ಣೆಗೆ ದೇಶದಲ್ಲಿ ಸಾಕಷ್ಟು ಬೇಡಿಕೆ ಇದ್ದು, ಅದರ ಪೂರೈಕೆಗಾಗಿ ಸುಮಾರು 90 ಲಕ್ಷ ಟನ್‌ ಎಣ್ಣೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಕೇವಲ ಮೂರು ಲಕ್ಷ ಟನ್‌ ತಾಳೆ ಎಣ್ಣೆ ಉತ್ಪಾದನೆಯಾಗುತ್ತಿದೆ. ತಾಳೆ ಬೆಳೆಯುವ ಪ್ರದೇಶವನ್ನು ಹೆಚ್ಚಿಸಲಾಗುವುದು. ಉತ್ಪಾದನೆ ವೃದ್ಧಿಸುವಂತೆ ಮಾಡಿ ತಾಳೆ ಎಣ್ಣೆಯ ಆಮದನ್ನು ಹಂತ ಹಂತವಾಗಿ ತಗ್ಗಿಸಿ, ನಿಲ್ಲಿಸಲು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ಚಿಂತನೆ ನಡೆದಿದೆ.

ಖಾಸಗಿ ಕಂಪೆನಿ ವಿಫ‌ಲ
ತಾಳೆ ತೋಟಗಾರಿಕಾ ಬೆಳೆ. ಸರಕಾರ ತಾಳೆ ಕೃಷಿಕರ ನಿರ್ವಹಣೆಯನ್ನು ಖಾಸಗಿ ಕಂಪೆನಿಗೆ ವಹಿಸಿಕೊಟ್ಟಿದೆ. ತಾಳೆ ಕೃಷಿಕರಿಗೆ ರಿಯಾಯಿತಿ ದರದಲ್ಲಿ ದೊರೆಯುವ ಗೊಬ್ಬರ, ತಾಳೆಗಿಡ, ಕೀಟನಾಶಕ ಮತ್ತು ಇತರ ಸಾಮಗ್ರಿಗಳನ್ನು ಸಕಾಲಕ್ಕೆ ದೊರಕಿಸಲು ಕಂಪೆನಿ ವಿಫ‌ಲವಾಗುತ್ತಿದೆ ಎಂದು ಅಂದುಕೊಂಡಿರುವ ತಾಳೆ ಬೆಳೆಗಾರರು ಸರಕಾರದಿಂದ ಅನುಮತಿ ಪಡೆದುಕೊಂಡು ಸಹಕಾರ ಭಾರತಿಯಡಿಯಲ್ಲಿ ಸಂಘದ ಪ್ರವವರ್ತಕರಾದ ಕೊಂಕೋಡಿ ಪದ್ಮನಾಭ ಭಟ್‌ ಅವರ ಮುಂದಾಳತ್ವದಲ್ಲಿ ತಾಳೆ ಬೆಳೆಗಾರರ ಸಹಕಾರ ಸಂಘ ರಚನೆಗೆ ಸಿದ್ಧತೆ ಮಾಡುತ್ತಿದ್ದಾರೆ. ದ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡು ಕಾರ್ಕಳದಲ್ಲಿ ತಾಳೆ ಬೆಳೆಗಾರರ ಸಹಕಾರ ಸಂಘ ತೆರೆಯಲು ನಿರ್ಧರಿಸಲಾಗಿದೆ.

Advertisement

ಮುಖ್ಯವಾಗಿ ತಾಳೆ ಬೆಳೆಗಾರರ ಸಂಘ ರಚಿಸಿಕೊಂಡು ತಾಳೆ ಬೆಳೆಗಾರರ ಎಲ್ಲ ಬೇಡಿಕೆಯನ್ನು ಪೂರೈಸುವುದು ಸಂಘದ ಗುರಿಯಾಗಿದೆ. ನೆರೆಯ ಜಿಲ್ಲೆಗಳಲ್ಲಿ ತಾಳೆ ಬೆಳೆ ವಿಸ್ತರಿಸಿ ತಾಳೆ ಬೆಳೆಯಲ್ಲಿ ಭಾರತದಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದು ಸಂಘದ ಇನ್ನೊಂದು ಉದ್ದೇಶ. ಅಲ್ಲದೆ ಕ್ಯಾಂಪ್ಕೋ ಮಾದರಿಯಲ್ಲಿ ಕೈಗಾರಿಕಾ ಕೇಂದ್ರವನ್ನು ಸ್ಥಾಪಿಸುವ ಭವಿಷ್ಯದ ಗುರಿ ಇಟ್ಟುಕೊಳ್ಳಲಾಗಿದೆ. ತೊಡಿಕಾನ ದೊಡ್ಡಡ್ಕ ವಸಂತ ಭಟ್‌ 2011ರಿಂದ ಸುಮಾರು 20 ಎಕ್ರೆ ಜಾಗದಲ್ಲಿ ಈಗ ಸಂಪೂರ್ಣ ತಾಳೆ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಅವರು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿಯೇ ಹೆಚ್ಚು ತಾಳೆ ಬೆಳೆಯುವ ಕೃಷಿಕರಾಗಿದ್ದಾರೆ. ತಾಳೆ ಕೆ.ಜಿ.ಗೆ ಸರಕಾರದ ಬೆಂಬಲ ಸೇರಿ 11.05 ರೂ. ಬೆಲೆ ದೊರೆತಿದೆ. ಈ ವರ್ಷದಿಂದ ಸರಕಾರದ ಮಟ್ಟದಲ್ಲಿ ತಾಳೆಗೆ ಇನ್ನಷು ಬೆಂಬಲ ನೀಡಲು ನಿರ್ಧರಿಸಲಾಗಿದೆ.

ಶೀಘ್ರ ಸ್ಥಾಪನೆ
ತಾಳೆ ಕೃಷಿ ಲಾಭದಾಯಕ ಬೆಳೆ. ಇದರ ನಿರ್ವಹಣೆಗೆ ತಗಲುವ ಖರ್ಚು ಕಡಿಮೆ. ದ.ಕ., ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಕೇಂದ್ರ ವಾಗಿರಿಸಿಕೊಂಡು ತಾಳೆ ಕೃಷಿಕರಿಗೆ ಇನ್ನಷ್ಟು ಸೇವೆ ಒದಗಿಸಲು ಸರಕಾರದ ಅನುಮತಿ ಪಡೆದುಕೊಂಡು ಸಹಕಾರಿ ಸಂಘದ ಪ್ರವರ್ತಕ ಕೊಂಕೋಡಿ ಪದ್ಮನಾಭ ಅವರ ನೇತೃತ್ವದಲ್ಲಿ ಸಹಕಾರಿ ಸಂಘ ಸ್ಥಾಪನೆಯಾಗಲಿದೆ. ನನ್ನ ಅಡಿಕೆ ತೋಟಕ್ಕೆ ಹಳದಿ ರೋಗ ಬಾಧಿಸಿದ್ದು ನಾನು ತಾಳೆ ಕೃಷಿ ಮಾಡಿ ಯಶಸ್ಸು ಕಂಡಿದ್ದೇನೆ. ಇನ್ನಷ್ಟು ರೈತರು ತಾಳೆ ಕೃಷಿ ಮಾಡಲು ಮುಂದೆ ಬರಬೇಕಾಗಿದೆ.
– ವಸಂತ ಭಟ್‌ ತೊಡಿಕಾನ, ತಾಳೆ ಕೃಷಿಕ

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next