Advertisement

ಆತಂಕದಲ್ಲಿ ನರ್ಸಿಂಗ್‌ ವಿದ್ಯಾರ್ಥಿಗಳು:  ತುರ್ತು ಸ್ಪಂದನಕ್ಕೆ ಐವನ್‌

03:50 AM Jul 04, 2017 | Team Udayavani |

ಮಂಗಳೂರು: ರಾಜ್ಯದಲ್ಲಿ ನರ್ಸಿಂಗ್‌ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಮಾನ್ಯತೆ ಇಲ್ಲ ಹಾಗೂ ಬೇರೆ ರಾಜ್ಯಗಳಲ್ಲಿ ಉದ್ಯೋಗವಕಾಶಗಳೂ ಇಲ್ಲ ಎಂದು ಇಂಡಿಯನ್‌ ನರ್ಸಿಂಗ್‌ ಕೌನ್ಸಿಲ್‌ ಆದೇಶ ಹೊರಡಿಸಿರುವ ಪರಿಣಾಮ ವಿದ್ಯಾರ್ಥಿಗಳು ಆತಂಕಿತರಾಗಿದ್ದಾರೆ. ಹೀಗಾಗಿ ರಾಜ್ಯ ಸರಕಾರ ತುರ್ತಾಗಿ ಸ್ಪಂದಿಸುವಂತೆ ವಿಶೇಷ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಇಂಡಿಯನ್‌ ನರ್ಸಿಂಗ್‌ ಕೌನ್ಸಿಲ್‌ ಆದೇಶದಂತೆ ಕರ್ನಾಟಕದಲ್ಲಿ ಕಲಿಯುತ್ತಿರುವ ಜನರಲ್‌ ನರ್ಸಿಂಗ್‌, ಬಿಎಸ್ಸಿ ನರ್ಸಿಂಗ್‌, ಎಂಎಸ್ಸಿ ನರ್ಸಿಂಗ್‌, ಎಂಫಿಲ್‌ ನರ್ಸಿಂಗ್‌, ಪಿಎಚ್‌ಡಿ ಇನ್‌ ನರ್ಸಿಂಗ್‌ ಕೋರ್ಸ್‌ಗಳಿಗೆ ಕರ್ನಾಟಕ ರಾಜ್ಯದ ಒಳಗಡೆಯೇ ಉದ್ಯೋಗವಕಾಶ ಪಡೆದುಕೊಳ್ಳಬೇಕು. ಅಲ್ಲದೆ ತಮ್ಮ ವೃತ್ತಿಯನ್ನು ಕರ್ನಾಟಕ ರಾಜ್ಯವನ್ನು ಹೊರತು ಬೇರೆ ರಾಜ್ಯಗಳಲ್ಲಿ ವಿದೇಶಗಳಲ್ಲಿ ನೋಂದಣಿ ಹಾಗೂ ಉದ್ಯೋಗ ಮಾಡುವಂತಿಲ್ಲ ಎಂದು ಹೊರಡಿಸಿದ ಈ ಸಮಸ್ಯೆ ಪರಿಹರಿಸಲು ರಾಜ್ಯ ಸರಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರಕಾರ ಉತ್ತರ ನೀಡುವುದಾಗಿ ತಿಳಿಸಿದೆ.ವಿದ್ಯಾರ್ಥಿಗಳು ಈ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂದು ಐವನ್‌ ಹೇಳಿದರು.

ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ, ತುಂಬೆಯ ನೂತನ ವೆಂಟೆಡ್‌ ಡ್ಯಾಂ ಮಟ್ಟವನ್ನು 7 ಮೀ. ಎತ್ತರಿಸುವುದು ಕಾರ್ಯಸಾಧುವಾಗಿದ್ದು, ಇದಕ್ಕೆ ತಗಲುವ 250 ಕೋಟಿ ರೂ.ಗಳನ್ನು ಮುಂದಿನ ರಾಜ್ಯ ಬಜೆಟ್‌ನಲ್ಲಿ ಮೀಸಲಿರಿಸಬೇಕು. ಈ ನಡುವೆ ಸಮುದ್ರ ನೀರನ್ನು ಶುದ್ಧೀಕರಣ ಮಾಡುವ ಪ್ರಸ್ತಾವವೂ ಇದ್ದು, ಈಗಾಗಲೇ ಒಂದು ತಂಡ ಚೆನ್ನೈಗೆ ತೆರಳಿ ಅಧ್ಯಯನ ನಡೆಸಿದೆ. ತುಂಬೆ ಡ್ಯಾಂ ಮಟ್ಟ ಎತ್ತರಿಸಿ ಕೇವಲ 250 ಕೋಟಿ ರೂ. ಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸುವುದು ಸಾಧ್ಯ ಇರುವಾಗ ಶುದ್ಧೀಕರಣ ಘಟಕದ ಆವಶ್ಯಕತೆ ಬಾರದು. 250 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದರು.

ನಂತೂರು ಅಂಡರ್‌ಪಾಸ್‌ ಯಾವಾಗ?
ನಂತೂರಿನಲ್ಲಿ ಸಂಚಾರ ದಟ್ಟಣೆ ನೀಗಿಸುವ ಅಂಡರ್‌ಪಾಸ್‌ ನಿರ್ಮಾಣ ಪ್ರಸ್ತಾಪ ಹಲವು ಸಮಯಗಳಿಂದ ನೆನೆಗುದಿಗೆ ಬಿದ್ದಿದೆ. ಈ ಕುರಿತು ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ‘ಅನುಮೋದನೆಗೆ ನೀಡಲಾಗಿದೆ’ ಎಂಬ ಉತ್ತರ ದೊರೆತಿದೆ. ನಂತೂರಿನಲ್ಲಿ ಅನೇಕ ಜೀವಹಾನಿಯಾಗಿದ್ದರೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕಾಮಗಾರಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ.  ಸುರತ್ಕಲ್‌- ಮಂಗಳೂರು, ಬಿ.ಸಿ.ರೋಡ್‌- ಮಂಗಳೂರು ಹೆದ್ದಾರಿ ಕಾಮಗಾರಿಯನ್ನೂ ಅರೆಬರೆ ಮಾಡಿದ್ದು, ಇನ್ನೂ ಕೂಡ ರಾಜ್ಯ ಸರಕಾರಕ್ಕೆ ಹಸ್ತಾಂತರಿಸಿಲ್ಲ. ಆದರೆ ಟೋಲ್‌ ಸಂಗ್ರಹ ಮಾತ್ರ ಚಾಚೂ ತಪ್ಪದೆ ಮಾಡುತ್ತಿದೆ ಎಂದು ಐವನ್‌ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಮನಪಾ ಸ್ಥಾಯೀ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ, ಕಾರ್ಪೊರೇಟರ್‌ ಡಿ.ಕೆ. ಅಶೋಕ್‌, ಮುಖಂಡ ಅಶ್ರಫ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next