ಘಟಪ್ರಭಾ: ಇತ್ತೀಚೆಗೆ ಗೋಕಾಕ ತಾಲೂಕಿನ ಶಿಂದಿ ಕುರಬೇಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲ ಮಹಿಳಾ ಸಿಬ್ಬಂದಿ ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಅಷ್ಟೆ ಅಲ್ಲದೇ ಧೂಮ್ರಪಾನ ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಲ್ಲದೆ ರೋಗಿಗಳಿಗೆ ಏಕವಚನದಲ್ಲಿ ಮಾತನಾಡುತ್ತ ಅವರಿಂದಲೇ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡುತ್ತಿವೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಹಲವಾರು ದಿನಗಳಿಂದ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಆದರೆ ಆರೋಗ್ಯ ಇಲಾಖೆಯ ಮೇಲಾಧಿ ಕಾರಿಗಳು ನರ್ಸ್ ಕೃತ್ಯ ನೋಡಿಯೂ ಸುಮ್ಮನೇ ಕುಳಿತಿರುವುದು ನರ್ಸ್ ಹಿಂದೆ ಕಾಣದ ಕೈಗಳು ಇರುವ ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ.
ಆರೋಗ್ಯ ಕೇಂದ್ರದ ನರ್ಸ್ ಹಾಗೂ ಗ್ರೂಪ್ ಡಿ ದರ್ಜೆಯ ಮಹಿಳೆಯರು ಇಂತಹ ಹೀನ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗುತ್ತಿದೆ. ಪಿಎಚ್‌ಸಿ ವೈದ್ಯಾಧಿಕಾರಿ ಡಾ| ಪ್ರವೀಣ ಕರಗಾವಿ ಅವರನ್ನು ವಿಚಾರಿಸಿದಾಗ, ಈ ಘಟನೆ ನಡೆದು ತುಂಬಾ ದಿನಗಳಾಗಿವೆ. ಆಗಲೇ ಅವರಿಗೆ ಕರೆದು ಎಚ್ಚರಿಕೆ ನೀಡಿದ್ದೇನೆ. ಈ ವಿಷಯದ ಕುರಿತು ತಾಲೂಕು ವೈದ್ಯಾ ಧಿಕಾರಿಗಳಿಗೂ ತಿಳಿಸಿರುವುದಾಗಿ ಹೇಳಿದ್ದಾರೆ. ಪಿಎಚ್‌ಸಿಯಲ್ಲಿರುವ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸದೆ ಇರುವ ಬಗ್ಗೆಯೂ ಮೇಲಾಧಿ ಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
ತಾಲೂಕು ವೈದ್ಯಾಧಿಕಾರಿ ಡಾ|ಎಮ್.ಎಸ್. ಕೊಪ್ಪದ ಮಾತ್ರ ಸಿಸಿ ಕ್ಯಾಮೆರಾ ಕೆಟ್ಟಿರುವ ವಿಷಯ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರಲ್ಲದೆ, ಪಿಎಚ್‌ಸಿಯ ಆಕ್ರಮ ಚಟುವಟಿಕೆ ಬಗ್ಗೆ ಚಿಕ್ಕೋಡಿಯ ಎಡಿಎಚ್‌ಒ ಮತ್ತು ಬೆಳಗಾವಿಯ ಡಿಎಚ್‌ಒ ಅವರಿಗೆ ವರದಿ ನೀಡಲಾಗಿದೆ ಎಂದು ತಿಳಿಸಿದರು. ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗಾವಣೆ ಮಾಡಬೇಕು ಮತ್ತು ಬೇರೆ ಸಿಬ್ಬಂದಿ ನೇಮಕವಾಗಬೇಕು ಎಂಬುದು ಗ್ರಾಮಸ್ಥರ ಮನವಿಯಾಗಿದೆ. ಇನ್ನಾದರೂ ಈ ಕೃತ್ಯದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವರೇ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.