ಅಶೋಕ ಪಿಲ್ಲರ್‌ನಿಂದ ಲಾಲ್‌ಬಾಗ್ ಸಿದ್ದಾಪುರ ಗೇಟ್ ಕಡೆ ಹೋದರೆ, ಬಲಗಡೆ ತಣ್ಣಗೆ ಗಾಳಿ ಬೀಸಿದಂತಾಗುತ್ತದೆ. ಅತ್ತ ಕಣ್ಣು ಹೊರಳಿಸಿ. ಮರಿ ಲಾಲ್‌ಬಾಗ್ ಕಂಡರೆ ಆಶ್ಚರ್ಯ ಪಡಬೇಕಿಲ್ಲ. ಏಕೆಂದರೆ ಇಲ್ಲಿದೆ ನರ್ಸರಿಗಳ ದಂಡು. ನಿಮಗೆ ಗಿಡಬೇಕಾ? ಹೂವಿನ ಪಾಟು ಬೇಕಾ? ಅದಕ್ಕೆ ಮಣ್ಣು, ಗೊಬ್ಬರ ತುಂಬಬೇಕಾ? ಎಲ್ಲವೂ ಇಲ್ಲಿ ಬಿಕರಿಗೆ ಇದೆ. ಕೈಯಲ್ಲೊಂದು ಚೀಲ, ಜೇಬಲ್ಲಿ ಒಂದಷ್ಟು ದುಡ್ಡು ಇಟ್ಟುಕೊಂಡು ಹೋದರೆ ನಿಮಗಿಷ್ಟವಾಗುವ ಗಿಡಗಳು ಸಿಗುತ್ತವೆ.
ವೆಲ್‌ಕಮ್ ನರ್ಸರಿ ಸ್ಟ್ರೀಟ್
ಹೌದು, ಇದೊಂಥರಾ ಫುಡ್‌ಸ್ಟ್ರೀಟ್ ಇದ್ದಂತೆ. ಬೀದಿ ಬೀದಿಯಲ್ಲಿ ಗಿಡಗಳು ಮಾರಾಟಕ್ಕೆ ಸಿಗುತ್ತವೆ. ಈ ಬೀದಿನೇ ಒಂಥರ ಮಿನಿ ತೋಟವಿದ್ದಂತೆ. ಹೆಜ್ಜೆ ಹೆಜ್ಜೆಗೂ ನರ್ಸರಿಗಳು. ಹೆಚ್ಚಾ ಕಡಿಮೆ 20-25 ನರ್ಸರಿಗಳು ಇಲ್ಲಿರಬಹುದು. ಯಾವ ಕಡೆ ಕಣ್ಣಿಟ್ಟರೂ ಬರೀ ಗಿಡಗಳೇ ಕಾಣಿಸುತ್ತವೆ. ಒಂದಷ್ಟು ಮನೆಗಳು, ಇನ್ನೊಂದಷ್ಟು ಖಾಲಿ ಜಾಗವೆಲ್ಲಾ ನರ್ಸರಿಗಳಾಗಿವೆ. ಪ್ರತಿ ನರ್ಸರಿಯ ಮುಂದೆ ಸಾಲು ಗಟ್ಟಿ ನಿಂತ ಹೂವಿನ ಪಾಟುಗಳನ್ನು ನೋಡುವುದೇ ಅಂದ. ಚಾವಣಿಯಲ್ಲಿ ತೂಗು ಪಾಟುಗಳು, ಅದರಲ್ಲಿ ಹೂ ಗಿಡಗಳು ಸಿಂಗಾರಗೊಂಡಿವೆ.
ಪಾಟುಗಳಲ್ಲಿ ವೈವಿಧ್ಯಮಯ- ಸಿಮೆಂಟ್ ಪಾಟು, ಪ್ಲಾಸ್ಟಿಕ್ ಪಾಟು ಹೀಗೆ. ಇಲ್ಲಿ ತಲೆ ಎತ್ತಿರುವ ನರ್ಸರಿಗಳೆಲ್ಲವೂ ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ, ದೊಡ್ಡ ಆಲದ ಮರದ ಸುತ್ತಮುತ್ತ ಇರುವ ಫಾರಂನಿಂದ ಬರುವಂತಥವು. ಅಲ್ಲಿ ಫಾರಂ ಇಟ್ಟುಕೊಂಡವರಿಗೆ ಈ ರಸ್ತೆಯೇ ಮಾರ್ಕೆಟ್. ಅಲ್ಲಿ ಪಾಟಿಂಗ್ ಮಾಡಿದ ಗಿಡಗಳನ್ನು ನೇರವಾಗಿ ಇಲ್ಲಿ ತಂದು ಮಾರುತ್ತಾರೆ. ಬೇಕು ಎಂದರೆ ರೀ ಪಾಟಿಂಗ್ ಕೂಡ ಮಾಡಿಕೊಡುತ್ತಾರೆ.
ಗಾರ್ಡನಿಂಗ್‌ಗೆ ಸಂಬಂಧಿಸಿದಂತೆ, ಇಲ್ಲಿ ಏನು ಸಿಗೋಲ್ಲ ಅಂತ ನೀವು ಕೇಳಬೇಕು? ಏಕೆಂದರೆ ಎಲ್ಲಾ ರೀತಿಯ ಗಿಡಗಳೂ ಇಲ್ಲಿ ಸಿಗುತ್ತವೆ. ಪ್ರತಿದಿನ ಹೂ ಬಿಡುವ ಕೆಂಪು, ಬಿಳಿ ನಂಜಬಟ್ಟಲು, ನಂದಿಬಟ್ಟಲು, ಕಣಗಲೆ, ದಾಸವಾಳ, ಥರಹೇವಾರಿ ರೋಜಾ, ಕನಕಾಂಬರ ಗಿಡಗಳು ಸಿಗುತ್ತವೆ. ರಾಮ ತುಳಸಿ, ಕೃಷ್ಣ ತುಳಸಿಯಂಥ 10ಕ್ಕೂ ಹೆಚ್ಚವ ವಿಧದ ತುಳಸಿ ಗಿಡಗಳು ಇಲ್ಲಿವೆ. ಡೈಫನ್‌ಬಿಕಿಯಾ, ಆಸ್ಪರಾಗಸ್, ಮರಾಂಟಾಸ್ ಮುಂತಾದ ಶೋ ಗಿಡಗಳೂ ಉಂಟು. ಹಾದಿ ಬೀದಿಯ ತುಂಬ ಗಿಡಗಳ್ಳೋ ಗಿಡಗಳಾಗಿರುವುದರಿಂದ ಆಹ್ಲಾದಕರ ವಾತಾವರಣ ಇಲ್ಲಿನದು.
ಮತ್ತೂಂದು ಸ್ವಾರಸ್ಯ ಏನೆಂದರೆ, ಈ ನರ್ಸರಿಯಲ್ಲಿನ ಜನ ಬರೀ ಗಿಡಗಳನ್ನು ಕೊಟ್ಟು ಕೈ ತೊಳೆದುಕೊಳ್ಳುವುದಿಲ್ಲ. ನಿಮ್ಮ ಮನೆಯಲ್ಲಿ ಪಾಟ್ ಇದೆ, ಗಿಡವೂ ಇದೆ. ಅದರ ರೀ- ಪಾಟ್ ಮಾಡಲು ಮಣ್ಣು ಇಲ್ಲ, ಗೊಬ್ಬರವೂ ಇಲ್ಲ ಅಂತಾದರೆ ತಲೆಬೇನೆ ಬೇಡ. ಅದೂ ಕೂಡ ಇಲ್ಲಿ ಸಿಗುತ್ತದೆ. ಒಂದು ಮೂಟೆ ಮಣ್ಣಿಗೆ 50 ರು. ಅದಕ್ಕೆ ಗೊಬ್ಬರ ಬೆರೆಸಿದರೆ 150 ರು. ಒಂದು ಚೀಲದ ಗೊಬ್ಬರ ಮಿಶ್ರಿತ ಮಣ್ಣನ್ನು 6-7 ಪಾಟ್‌ಗಳಿಗೆ ಬಳಸಬಹುದು.
ಇಲ್ಲಿ ನಿಮಗೆ ಯಾವ ರೀತಿಯ ಗೊಬ್ಬರ ಬೇಕು ಅನ್ನೋದನ್ನು ನೀವು ಹೇಳಬಹುದು. ಕುರಿ ಗೊಬ್ಬರ, ಸಾಮಾನ್ಯ ಗೊಬ್ಬರ ಕೂಡ ಇಲ್ಲಿ ಸಿಗುತ್ತದೆ. ಮನೆ ಮುಂದಿನ ಜಾಗ ಚೆನ್ನಾಗಿ ಕಾಣಲಿ ಅಂತ ಕೆಲವರು ಲಾನ್ (ನೆಲ ಹಾಸು) ಇರಬೇಕೆಂದು ಅಪೇಕ್ಷಿಸುತ್ತಾರೆ. ಇಲ್ಲಿ ಅದೂ ಕೂಡ ದೊರೆಯುತ್ತದೆ. ಅದಕ್ಕೆ ಚದರ ಅಡಿ ಲೆಕ್ಕದಲ್ಲಿ ಬೆಲೆ ನಿಗದಿ ಪಡಿಸುತ್ತಾರೆ.
ಇಲ್ಲಿ ಹಣ್ಣಿನ ಗಿಡಗಳೂ ಲಭ್ಯ. ಸಪೋಟ, ಮೂಸಂಬಿ, ಮಾವು, ಲಿಚಿ ಹೀಗೆ ಒಂದಷ್ಟು ಮರದ ಜಾತಿಯ ಹಣ್ಣಿನ ಗಿಡಗಳು ಇಲ್ಲಿ ಸಿಗುತ್ತವೆ. ಇದರ ಜೊತೆಗೆ ಬೋನ್ಸಾಯ್ ಗಿಡಗಳು ದೊರೆಯುತ್ತವೆ. ಹೂವು, ಹಣ್ಣು ಆದ ಮೇಲೆ ಕೈ ತೋಟಕ್ಕೆ ತರಕಾರಿ ಗಿಡಗಳು ಬೇಕಲ್ಲವೇ? ಹೌದು, ಅದೂ ಕೂಡ ಇಲ್ಲಿ ಸಿಗುತ್ತದೆ.
ಬಿಡುವಿದ್ದಾಗ ಈ ಮಿನಿ ಲಾಲ್‌ಬಾಗಿನ ಕಡೆ ಒಮ್ಮೆ ಹೋಗಿ ನೋಡಿ.
– ಕಟ್ಟೆ ಗುರುರಾಜ್