Advertisement

ಬಿಎಸ್‌ವೈ ನಿರ್ಗಮನ; ವಿಶ್ವಾಸಮತ ಯಾಚಿಸದೇ ಸಿಎಂ ಸ್ಥಾನಕ್ಕೆ ರಾಜೀನಾಮೆ

06:00 AM May 20, 2018 | |

ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯ ಸರ್ಕಾರ ರಚನೆ ಕಡೆಗೂ ಕೈಗೂಡಲಿಲ್ಲ. ಮೊನ್ನೆಯಷ್ಟೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿ.ಎಸ್‌.ಯಡಿಯೂರಪ್ಪ ಸುಪ್ರೀಂಕೋರ್ಟ್‌ ಆದೇಶದಂತೆ ಶನಿವಾರ ವಿಶ್ವಾಸಮತ ಗಳಿಸಬೇಕಿತ್ತು. ಅದು ಸಾಧ್ಯವಾಗದ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬೆನ್ನಲ್ಲೇ, ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದ್ದಾರೆ.

Advertisement

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೂರು ದಿನದ ಸರ್ಕಾರಕ್ಕೆ ಶನಿವಾರ ತೆರೆ ಬಿದ್ದಿದೆ. ಸಂಖ್ಯಾಬಲದ ಕೊರತೆಯಿಂದ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಇದರ ಬೆನ್ನಲ್ಲೇ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ರಚನೆಗೆ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಆಹ್ವಾನ ನೀಡಿದ್ದು, ಸೋಮವಾರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಒಂದು ವಾರದಲ್ಲಿ ಎರಡು ಸರ್ಕಾರಗಳನ್ನು ರಾಜ್ಯದ ಜನ ನೋಡುವಂತಾಗಿದೆ.

ಅಂದುಕೊಂಡಂತೆ ನಡೆಯಲಿಲ್ಲ:
ಗುರುವಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ಅವರಿಗೆ ವಿಶ್ವಾಸಮತ ಸಾಬೀತುಪಡಿಸಲು ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದರೂ ಸುಪ್ರೀಂಕೋರ್ಟ್‌ ಆದೇಶದಂತೆ ಶನಿವಾರವೇ ಅವರು ವಿಶ್ವಾಸಮತ ಸಾಬೀತುಪಡಿಸುವ ಪರಿಸ್ಥಿತಿ ಎದುರಾಗಿತ್ತು. ಪ್ರತಿಪಕ್ಷದ ಶಾಸಕರನ್ನು ಸೆಳೆಯಲು ಕೊನೆಯವರೆಗೂ ಪ್ರಯತ್ನ ಮಾಡಿ, ಅದು ಕೈಗೂಡದೇ ಇದ್ದ ಕಾರಣ ವಿಶ್ವಾಸಮತ ಯಾಚಿಸದೇ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಇದರೊಂದಿಗೆ ಯಡಿಯೂರಪ್ಪ ಅವರ ಸರ್ಕಾರ ಮೂರೇ ದಿನಕ್ಕೆ ಅಂತ್ಯ ಕಂಡಂತಾಗಿದೆ.ಬಹುಮತ ಸಾಬೀತುಪಡಿಸುವ ಬಗ್ಗೆ ಶನಿವಾರ ಬೆಳಗ್ಗೆಯವರೆಗೂ ಯಡಿಯೂರಪ್ಪ ಮತ್ತು ಬಿಜೆಪಿ ವಿಶ್ವಾಸ ಹೊಂದಿತ್ತು. ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗಿ ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸುತ್ತಲೇ ಈ ವಿಶ್ವಾಸ ಕುಂದುತ್ತಾ ಹೋಯಿತು. ಮಧ್ಯಾಹ್ನ 12 ಗಂಟೆ ವೇಳೆಗೆ ಪ್ರತಿಪಕ್ಷದ ಇಬ್ಬರನ್ನು ಹೊರತುಪಡಿಸಿ ಉಳಿದೆಲ್ಲಾ ಸದಸ್ಯರು ಪ್ರಮಾಣವಚನ ಸ್ವೀಕರಿಸಲು ಮುಂದಾಗುತ್ತಿದ್ದಂತೆ ವಿಶ್ವಾಸಮತ ಸಿಗುವ ನಿರೀಕ್ಷೆ ದೂರವಾಯಿತು.

Advertisement

221 ಸದಸ್ಯಬಲದ ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರು ವಿಶ್ವಾಸಮತ ಸಾಬೀತುಪಡಿಸಬೇಕಿದ್ದರೆ 111 ಸ್ಥಾನಗಳ ಅಗತ್ಯವಿದ್ದು, ಪ್ರತಿಪಕ್ಷಗಳ ಕನಿಷ್ಟ 14 ಸದಸ್ಯರು ಮತದಾನ ಪ್ರಕ್ರಿಯೆಯಿಂದ ದೂರ ಇರಬೇಕಿತ್ತು. ಆದರೆ, ಮಧ್ಯಾಹ್ನ ಭೋಜನದ ಅವಧಿಗೆ ಪ್ರತಿಪಕ್ಷದ ಇಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಹಾಜರಿದ್ದರು. ಹೀಗಾಗಿ ಕಲಾಪವನ್ನು ಬೋಜನ ವಿರಾಮಕ್ಕೆ ಮುಂದೂಡುತ್ತಲೇ ಸಿಎಂ ಯಡಿಯೂರಪ್ಪ ಅವರು ಪಕ್ಷದ ಹಿರಿಯ ನಾಯಕರು ಮತ್ತು ಶಾಸಕರೊಂದಿಗೆ ಸಮಾಲೋಚನೆ ನಡೆಸಿ ರಾಜೀನಾಮೆ ನೀಡಲು ನಿರ್ಧರಿಸಿದರು. ಅದರಂತೆ ಸದನದಲ್ಲಿ ಮಾಡಬೇಕಾದ ಭಾಷಣ ಸಿದ್ಧಪಡಿಸಿದರು.

ಮಧ್ಯಾಹ್ನ 3.30ಕ್ಕೆ ಮತ್ತೆ ಕಲಾಪ ಆರಂಭವಾಗಿ ಬಾಕಿ ಉಳಿದ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಯಡಿಯೂರಪ್ಪ ಅವರು “ಈ ಸದನ ಬಿ.ಎಸ್‌.ಯಡಿಯೂರಪ್ಪ ಸಂಪುಟದ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತದೆ’ ಎಂಬ ವಿಶ್ವಾಸಮತ ಪ್ರಸ್ತಾಪವನ್ನು ಸದನದಲ್ಲಿ ಮಂಡಿಸಿದರು. ನಂತರ ಸುಮಾರು 22 ನಿಮಿಷ ಭಾವನಾತ್ಮಕ ಭಾಷಣ ಮಾಡಿದರು. ಬಳಿಕ ಕಾಂಗ್ರೆಸ್‌ನ ಕುತಂತ್ರದಿಂದ ಜನಾದೇಶಕ್ಕೆ, ಪ್ರಜಾತಂತ್ರ ವ್ಯವಸ್ಥೆಗೆ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಶ್ವಾಸಮತ ಪ್ರಸ್ತಾಪ ಮುಂದುವರಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಈ ಪ್ರಜಾತಂತ್ರ ವಿರೋಧಿ ವಿರುದ್ಧ ರಾಜ್ಯದ ಜನರ ಮುಂದೆ ಹೋಗುತ್ತೇನೆ. ಇಲ್ಲಿಂದ ನೇರವಾಗಿ ರಾಜ್ಯಪಾಲರ ಬಳಿ ಹೋಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಹೇಳಿದರು.

ಅಧಿಕಾರ ಸಿಗದೇ ಇರಲಿ, ಜನರಿಗಾಗಿ ಪ್ರಾಣ ಕೊಡುತ್ತೇನೆ
ನನಗೆ ಅಧಿಕಾರ ಕೊಡದೇ ಇದ್ದರೆ ನಾನು ಪ್ರಾಣ ಕಳೆದುಕೊಳ್ಳುತ್ತೇನೆ ಎಂದು ಕೆಲವರು ಮಾತಾಡಿದರು. ನಾನು ಆ ಮಾತು ಹೇಳುವುದಿಲ್ಲ. ಅಧಿಕಾರ ಸಿಗದೇ ಇರಲಿ, ಜನರಿಗಾಗಿ ಪ್ರಾಣ ಕೊಡುತ್ತೇನೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರ ತೀರ್ಮಾನ ಅಂತಿಮ. ಅದಕ್ಕೆ ತಲೆ ಬಾಗಲೇ ಬೇಕು. ಆದರೆ, ಜನರು ತೋರಿಸಿದ ಪ್ರೀತಿ, ವಿಶ್ವಾಸ ಜೀವನದ ಕೊನೆಯುಸಿರು ಇರುವವರೆಗೆ ಮರೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ಕುತಂತ್ರದಿಂದ ಜನಾದೇಶಕ್ಕೆ, ಪ್ರಜಾತಂತ್ರ ವ್ಯವಸ್ಥೆಗೆ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಶ್ವಾಸಮತ ಪ್ರಸ್ತಾಪ ಮುಂದುವರಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಪ್ರಜಾತಂತ್ರ ವಿರೋಧಿಗಳ ವಿರುದ್ಧ ರಾಜ್ಯದ ಜನರ ಮುಂದೆ ಹೋಗುತ್ತೇನೆ. ಇಲ್ಲಿಂದ ನೇರವಾಗಿ ರಾಜ್ಯಪಾಲರ ಬಳಿ ಹೋಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ.
ಈ ರೀತಿ ವಿಶ್ವಾಸಮತ ಯಾಚನೆ ವೇಳೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸಮತ ಯಾಚನೆ ಪ್ರಸ್ತಾಪವನ್ನು ಮುಂದುವರಿಸದೆ, ರಾಜೀನಾಮೆ ನೀಡುವ ಮುನ್ನ ಭಾವನಾತ್ಮಕವಾಗಿ ಮಾತನಾಡಿದರು. ಅವರ ಭಾಷಣದ ಪೂರ್ಣ ಪಾಠ ಹೀಗಿದೆ.

ಶನಿವಾರ ಏನಾಯಿತು?
– ಬೆಳಗ್ಗೆ 11ರಿಂದ 3.50ರತನಕ ವಿಧಾನಸಭೆಯಲ್ಲಿ ನೂತನ ಸದಸ್ಯರ ಪ್ರಮಾಣವಚನ.
– ಬೆಳಗ್ಗೆ ಸದನಕ್ಕೆ ಬಾರದ ಕಾಂಗ್ರೆಸ್‌ನ ಆನಂದ್‌ ಸಿಂಗ್‌ ಮತ್ತು ಪ್ರತಾಪ್‌ಗೌಡ ಪಾಟೀಲ್‌ ಮಧ್ಯಾಹ್ನದ ವೇಳೆ ಸದನಕ್ಕೆ ಹಾಜರು.
– ಮಧ್ಯಾಹ್ನ ಭೋಜನ ವಿರಾಮದ ನಂತರ ಬಿಜೆಪಿಯ ಸೋಮಶೇಖರರೆಡ್ಡಿ ಸದನದಲ್ಲಿ ಪ್ರತ್ಯಕ್ಷ.
– ಸಂಜೆ 3.50ಕ್ಕೆ ವಿಶ್ವಾಸಮತ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ.
– ಸಂಜೆ 4.15ಕ್ಕೆ ವಿಶ್ವಾಸಮತ ಪ್ರಸ್ತಾವನೆ ಮುಂದುವರಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ.
– ಸಂಜೆ 4.30ಕ್ಕೆ ಸಿಎಂ ಯಡಿಯೂರಪ್ಪ ಅವರಿಂದ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಕೆ, ರಾಜ್ಯಪಾಲರಿಂದ ಅಂಗೀಕಾರ.
– ರಾತ್ರಿ 7.30ಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚಿಸಲು ಕುಮಾರಸ್ವಾಮಿ ಅವರಿಗೆ ರಾಜ್ಯಪಾಲರಿಂದ ಆಹ್ವಾನ.

ಇದುವರೆಗೆ ಏನೇನಾಯಿತು?
ಮೇ 12- ವಿಧಾನಸಭೆಯ 222 ಕ್ಷೇತ್ರಗಳಿಗೆ ಚುನಾವಣೆ.
ಮೇ 15- ಫ‌ಲಿತಾಂಶ ಪ್ರಕಟ. 104 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ. ಕಾಂಗ್ರೆಸ್‌ಗೆ 78, ಜೆಡಿಎಸ್‌-ಬಿಎಸ್‌ಪಿ ಮೈತ್ರಿಕೂಟಕ್ಕೆ 38, ಇತರರಿಗೆ 2 ಸ್ಥಾನ. ಜೆಡಿಎಸ್‌ ಸರ್ಕಾರ ರಚನೆಗೆ ಕಾಂಗ್ರೆಸ್‌ ಬೆಂಬಲ ಘೋಷಣೆ. ಎರಡೂ ಕಡೆಯವರಿಂದ ಸರ್ಕಾರ ರಚಿಸಲು ಹಕ್ಕು ಮಂಡನೆ.
ಮೇ 16- ಶಾಸಕಾಂಗ ಪಕ್ಷದ ಸಭೆಯ ನಿರ್ಣಯದೊಂದಿಗೆ ಬಿಜೆಪಿ ಹಾಗೂ ಜೆಡಿಎಸ್‌-ಕಾಂಗ್ರೆಸ್‌ನಿಂದ ಸರ್ಕಾರ ರಚಿಸಲು ಮತ್ತೂಮ್ಮೆ ಹಕ್ಕು ಮಂಡನೆ. ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಿದ ರಾಜ್ಯಪಾಲರು. ವಿಶ್ವಾಸಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ.
ಮೇ 16 ಮತ್ತು 17- ರಾಜ್ಯಪಾಲರ ಕ್ರಮ ಪ್ರಶ್ನಿಸಿ ಕಾಂಗ್ರೆಸ್‌ನಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ. ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ. ಯಡಿಯೂರಪ್ಪ ಪ್ರಮಾಣವಚನಕ್ಕೆ ತಡೆ ನೀಡಲು ನಕಾರ.
ಮೇ 17- ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ.
ಮೇ 18- ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಆದೇಶ ನೀಡಿದ ಸುಪ್ರೀಂ ಕೋರ್ಟ್‌. ಶನಿವಾರ ಸಂಜೆಯೊಳಗೆ ಬಹುಮತ ಸಾಬೀತುಪಡಿಸಲು ಸಿಎಂ ಯಡಿಯೂರಪ್ಪ ಅವರಿಗೆ ಆದೇಶ.
ಮೇ 19- ಬೆಳಗ್ಗೆ 11ರಿಂದ ನೂತನ ಸಚಿವರ ಪ್ರಮಾಣವಚನ. ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಯಡಿಯೂರಪ್ಪ. ಹೊಸ ಸರ್ಕಾರ ರಚನೆಗೆ ಕುಮಾರಸ್ವಾಮಿ ಅವರಿಗೆ ರಾಜ್ಯಪಾಲರಿಂದ ಆಹ್ವಾನ.

ಸಮ್ಮಿಶ್ರ ಸರ್ಕಾರದ ರೂಪುರೇಷೆಗೆ
ಸೋನಿಯಾ-ದೇವೇಗೌಡ ಮಾತುಕತೆ

– ಕಾಂಗ್ರೆಸ್‌ನಿಂದ ದಲಿತರ ಜತೆಗೆ ಮುಸ್ಲಿಂರೊಬ್ಬರಿಗೆ ಡಿಸಿಎಂ ಬೇಡಿಕೆ ಸಾಧ್ಯತೆ
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜತೆಗೂಡಿ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿರುವ ಬೆನ್ನಲ್ಲೇ ಸರ್ಕಾರ ರಚನೆಯ ರೂಪು-ರೇಷೆಗಳ ಬಗ್ಗೆ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮಾತುಕತೆ ನಡೆಸಿ ಅಂತಿಮಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.

ಈಗಿನ ಲೆಕ್ಕಾಚಾರದ ಪ್ರಕಾರ ಜೆಡಿಎಸ್‌ನಿಂದ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ್‌ ಉಪ ಮುಖ್ಯಮಂತ್ರಿ ಎಂಬುದು ಪಕ್ಕಾ ಎನ್ನಲಾಗಿದೆ. ಜತೆಗೆ ಈ ಬಾರಿಯಚುನಾವಣೆಯಲ್ಲಿ ಸಾರಾಸಗಟಾಗಿ ತಮ್ಮನ್ನು ಬೆಂಬಲಿಸಿದ ಮುಸ್ಲಿಂ ಸಮುದಾಯಕ್ಕೆ ಮತ್ತೂಂದು ಉಪ ಮುಖ್ಯಮಂತ್ರಿ ಸ್ಥಾನದ ಬೇಡಿಕೆಯನ್ನು ಕಾಂಗ್ರೆಸ್‌ ಇಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಆದರೆ, ಇದಕ್ಕೆ ದೇವೇಗೌಡರು ಒಪ್ಪುತ್ತಾರೆಯೇ ಎಂಬ ಪ್ರಶ್ನೆಯೂ ಇದೆ. ಮೇಲ್ನೋಟಕ್ಕೆ ಒಪ್ಪದರಿಲು ಯಾವುದೇ ಕಾರಣಗಳೂ ಕಾಣುವುದಿಲ್ಲ.

ಇನ್ನು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸರ್ಕಾರದಲ್ಲಿ ಸ್ಪೀಕರ್‌ ಸ್ಥಾನ ಆರ್‌.ವಿ.ದೇಶಪಾಂಡೆ ಅಥವಾ ರಮೇಶ್‌ಕುಮಾರ್‌ ಅವರಿಗೆ ವಹಿಸುವ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ. ಜೆಡಿಎಸ್‌ಗೆ ಉಪ ಸಭಾಧ್ಯಕ್ಷ ಸ್ಥಾನ ನೀಡಿ ಎಚ್‌.ವಿಶ್ವನಾಥ್‌ ಅವರಿಗೆ ವಹಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಎಷ್ಟು ಸಚಿವ ಸ್ಥಾನ ಕಾಂಗ್ರೆಸ್‌ಗೆ, ಎಷ್ಟು ಜೆಡಿಎಸ್‌ಗೆ ಎಂಬುದು ಸೋನಿಯಾಗಾಂಧಿ ಸಮ್ಮುಖದಲ್ಲಿ ನಿರ್ಧಾರವಾಗಲಿದೆ.

ಜತೆಗೆ, ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಉಸ್ತುವಾರಿ ವೇಣುಗೋಪಾಲ್‌, ಡಾ.ಜಿ.ಪರಮೇಶ್ವರ್‌ , ಜೆಡಿಎಸ್‌ನಿಂದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಕೆ.ಕುಮಾರಸ್ವಾಮಿ, ಎಚ್‌.ವಿಶ್ವನಾಥ್‌, ಬಸವರಾಜ ಹೊರಟ್ಟಿ ಅವರನ್ನೊಳಗೊಂಡ ಸಮನ್ವಯ ಸಮಿತಿ ರಚನೆಯಾಗಲಿದೆ. ಸುಸೂತ್ರವಾಗಿ ಸರ್ಕಾರ ರಚನೆಗೆ ಇಂಥದ್ದೊಂದು ಸಮನ್ವಯ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಶಾಸಕರನ್ನು ಕೂಡಿ ಹಾಕಿದಿರಿ. ಕುಟುಂಬದವರ ಜತೆ ಮೊಬೈಲ್‌ನಲ್ಲಿ ಮಾತನಾಡಲೂ ಬಿಡಲಿಲ್ಲ. ನಿಮ್ಮ ಶಾಸಕರ ಬಗ್ಗೆಯೇ ನಿಮಗೆ ವಿಶ್ವಾಸ ಇರಲಿಲ್ಲ. ಇವತ್ತಾದರೂ ಮನೆಯವರು, ಹೆಂಡತಿ-ಮಕ್ಕಳು ನೆಮ್ಮದಿಯಿಂದ ಇರಬಹುದೇನೋ…
– ಯಡಿಯೂರಪ್ಪ, ಮಾಜಿ ಸಿಎಂ

ರಾಜ್ಯದ ಜನತೆ ಬಿಜೆಪಿ ವಿರುದ್ಧ ಮತ ಹಾಕಿದ್ದಾರೆ. ಹೀಗಾಗಿ ಅವರು ಬಹುಮತ ಸಾಬೀತು ಪಡಿಸುವಲ್ಲಿ ವಿಫ‌ಲರಾಗಿ, ಪಲಾಯನ ಮಾಡಿದರು. ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದೇ ಕಾನೂನು ಬಾಹಿರ.
– ಸಿದ್ದರಾಮಯ್ಯ, ಮಾಜಿ ಸಿಎಂ

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಉಳಿಸಿಕೊಳ್ಳಲು ಶಾಸಕರ ಖರೀದಿಗೆ ಪ್ರಧಾನಿ ಮೋದಿಯವರೇ ಕುಮ್ಮಕ್ಕು ನೀಡಿದ್ದಾರೆ. ಈ ಪ್ರಕರಣದಿಂದ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಪಾಠ ಕಲಿಯಬೇಕು. ಪ್ರಧಾನಿಯವರು ದೇಶಕ್ಕಿಂತ ಮತ್ತು ಸುಪ್ರೀಂಕೋರ್ಟ್‌ಗಿಂತ ದೊಡ್ಡವರಲ್ಲ.
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ .

ಮುಖ್ಯಮಂತ್ರಿಯಾದಾಗಲೆಲ್ಲಾ ಸಮಸ್ಯೆ
ಬಿ.ಎಸ್‌.ಯಡಿಯೂರಪ್ಪ ಅವರಿಗೂ ಮುಖ್ಯಮಂತ್ರಿ ಕುರ್ಚಿಗೂ ಏಕೋ ಹೊಂದಾಣಿಕೆ ಆಗುತ್ತಿಲ್ಲ. 2007ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾದಾಗಿನಿಂದ ಹಿಡಿದು ಮೂರನೇ ಬಾರಿ ಮುಖ್ಯಮಂತ್ರಿಯಾದಾಗಲೂ ಅದೇ ಕಥೆ. 2007ರಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತಾದರೂ ಜೆಡಿಎಸ್‌ ಬೆಂಬಲ ವಾಪಸ್‌ ಪಡೆದಿದ್ದರಿಂದ ಏಳೇ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಯಿತು.
ಇದರ ಪರಿಣಾಮ 2008ರಲ್ಲಿ ಬಿಜೆಪಿ 110 ಸ್ಥಾನ ಗಳಿಸಿತ್ತಾದರೂ ಬಹುಮತದ ಕೊರತೆಯಿಂದ ಪಕ್ಷೇತರರನ್ನು ನೆಚ್ಚಿಕೊಂಡು ಸರ್ಕಾರ ರಚಿಸಿ ಮೂರು ವರ್ಷ ಹೆಣಗಾಡಿದರು. ನಂತರ ಪಕ್ಷೇತರರು ಬೆಂಬಲ ವಾಪಸ್‌ ಪಡೆದಿದ್ದರಿಂದ 2011ರಲ್ಲಿ ವಿಶ್ವಾಸಮತ ಯಾಚಿಸುವಂತಾಯಿತು. ಈ ಸಂದರ್ಭದಲ್ಲಿ ಸ್ಪೀಕರ್‌ ನೆರವಿನೊಂದಿಗೆ ಪಕ್ಷೇತರರನ್ನು ಅನರ್ಹಗೊಳಿಸಿ ಸಿಎಂ ಹುದ್ದೆ ಉಳಿಸಿಕೊಂಡರಾದರೂ ಸ್ವಲ್ಪ ದಿನದಲ್ಲೇ ಅಕ್ರಮ ಗಣಿಗಾರಿಕೆ ಮತ್ತು ಡಿನೋಟಿಫಿಕೇಷನ್‌ ಪ್ರಕರಣದಿಂದಾಗಿ ಹುದ್ದೆ ಕಳೆದುಕೊಳ್ಳಬೇಕಾಯಿತು. ಅಷ್ಟೇ ಅಲ್ಲ, ಜೈಲಿಗೂ ಹೋಗಿ ಬರಬೇಕಾಯಿತು.

2018ರಲ್ಲೂ ಇದೇ ಪರಿಸ್ಥಿತಿ ಆಗಿದೆ. ಬಹುಮತ ಕೊರತೆಯಿದ್ದರೂ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರು ಕೊನೇ ಕ್ಷಣದವರೆಗೂ ಪ್ರತಿಪಕ್ಷ ಸದಸ್ಯರ ಬೆಂಬಲ ಪಡೆಯಲು ಪ್ರಯತ್ನಿಸಿ ವಿಫ‌ಲರಾಗಿ ಮೂರೇ ದಿನಗಳಲ್ಲಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next