Advertisement

ನೂರು ದಾಟಿದ ಕೊರೊನಾ ಪೀಡಿತರು

10:24 AM Mar 17, 2020 | Sriram |

ಬೆಂಗಳೂರು/ಕಲಬುರಗಿ/ಹೊಸದಿಲ್ಲಿ: ಮಹಾಮಾರಿ ಕೊರೊನಾ ಸೋಂಕಿಗೆ ನಿಯಂತ್ರಣ ಹೇರಲು ಸರಕಾರಗಳು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದರೂ ಸೋಂಕುಪೀಡಿತರ ಸಂಖ್ಯೆ ಏರುತ್ತಲೇ ಇದೆ. ರವಿವಾರ ದೇಶಾದ್ಯಂತ ಸೋಂಕುಪೀಡಿತರ ಸಂಖ್ಯೆ 110ಕ್ಕೆ ಏರಿದೆ. ಕಲಬುರಗಿಯಲ್ಲಿ ಇತ್ತೀಚೆಗಷ್ಟೇ ಕೊರೊನಾದಿಂದ ಮೃತಪಟ್ಟ ವೃದ್ಧನ ಸಂಬಂಧಿಯೊಬ್ಬರಿಗೆ ಸೋಂಕು ತಗಲಿರುವುದು
ದೃಢಪಟ್ಟಿದೆ.

Advertisement

ಮಹಾರಾಷ್ಟ್ರ ಒಂದರಲ್ಲೇ 32 ಪ್ರಕರಣಗಳು ವರದಿಯಾಗಿದ್ದು, ಅತ್ಯಧಿಕ ಸೋಂಕುಪೀಡಿತರಿರುವ ರಾಜ್ಯಗಳಲ್ಲಿ ಕೇರಳ (22 ಪ್ರಕರಣಗಳು) 2ನೇ ಸ್ಥಾನದಲ್ಲಿದೆ. ಇದೇ ವೇಳೆ ನಾಗರಿಕರು ಭಯ ಪಡಬೇಕಾದ ಸ್ಥಿತಿಯಿಲ್ಲ. ಈವರೆಗೆ ಸೋಂಕಿನ ಯಾವುದೇ ಸಾಮುದಾಯಿಕ ಪ್ರಸರಣ ಆಗಿಲ್ಲ. ಅಲ್ಲದೆ ಭಾರತದಲ್ಲಿ ಇದು ಸದ್ಯಕ್ಕೆ ಆರೋಗ್ಯ ತುರ್ತು ಪರಿಸ್ಥಿತಿಯೂ ಅಲ್ಲ ಎಂದೂ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

31 ಮಂದಿ ಶಂಕಿತರು ಆಸ್ಪತ್ರೆಗೆ
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ರವಿವಾರ ಶಂಕಿತ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಳವಾಗಿದ್ದು, ಒಂದೇ ದಿನ 31 ಮಂದಿ ಒಳರೋಗಿಗಳಾಗಿ ದಾಖಲಾಗಿದ್ದಾರೆ. ಈ ಹಿಂದೆ ದಾಖಲಾಗಿದ್ದ 12 ಮಂದಿಯ ಪರೀಕ್ಷಾ ವರದಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದಾರೆ. ಸದ್ಯ 6 ಮಂದಿ ಶಂಕಿತರ ಸಹಿತ ಒಟ್ಟು 57 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ವಿದೇಶಗಳಿಗೆ ಭೇಟಿ ನೀಡಿ ವಾಪಸಾದವರಲ್ಲಿ ರೋಗ ಲಕ್ಷಣ ಕಾಣಿಸಿಕೊಂಡದ್ದರಿಂದ ರವಿವಾರ ಬೆಂಗಳೂರು ರಾಜೀವ್‌ ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ ನಾಲ್ವರು, ಬೆಂಗಳೂರಿನ ಇತರ ಆಸ್ಪತ್ರೆ ಗಳಲ್ಲಿ 9, ದಕ್ಷಿಣ ಕನ್ನಡ 9, ಬಳ್ಳಾರಿ 4, ವಿಜಯಪುರ, ಗದಗಗಳಲ್ಲಿ ತಲಾ 2, ಧಾರವಾಡದಲ್ಲಿ ಒಬ್ಬರು ಒಳರೋಗಿಗಳಾಗಿ ದಾಖಲಾಗಿದ್ದಾರೆ.

12 ಮಂದಿ ಶಂಕಿತರು ಮನೆಗೆ
ಈ ಹಿಂದೆ ದಾಖಲಾಗಿದ್ದವರ ಶಂಕಿತರ ಪೈಕಿ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿದ್ದ ಮೂವರು ಮತ್ತು ಹಾಸನ ಜಿಲ್ಲಾಸ್ಪತ್ರೆಯಲ್ಲಿದ್ದ ಎಂಟು ಮಂದಿ, ಚಿಕ್ಕಮಗಳೂರಿನ ಒಬ್ಬರು ಸೇರಿ 12 ಮಂದಿಯ ವರದಿ ನೆಗೆಟಿವ್‌ ಬಂದ ಹಿನ್ನೆಲೆ ಡಿಸಾcರ್ಜ್‌ ಮಾಡಲಾಗಿದೆ.

Advertisement

ಕೋರ್ಟ್‌ ಕಲಾಪಗಳಿಗೂ ನಿರ್ಬಂಧ
ಕೊರೊನಾ ಕಾವು ರಾಜ್ಯದ ಕೋರ್ಟ್‌ ಕಲಾಪಗಳಿಗೂ ತಟ್ಟಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್‌ ಮುಂಜಾಗ್ರತಾ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಿಜೆ ಎ.ಎಸ್‌. ಓಕಾ ನಿರ್ದೇಶನದಂತೆ ಸೋಮವಾರದಿಂದ ಕೇವಲ ತುರ್ತು ಪ್ರಕರಣಗಳ ವಿಚಾರಣೆ ಮಾತ್ರ ನಡೆಯಲಿದೆ. ಕೋರ್ಟ್‌ನ ಸಭೆ, ಸಮಾರಂಭಗಳಿಗೆ ನಿರ್ಬಂಧ ವಿಧಿಸಲಾಗಿದೆ.

ನೆಗಡಿ, ಕೆಮ್ಮು, ಜ್ವರವಿದ್ದರೂ ತಪಾಸಿಸಿಕೊಳ್ಳಿ
ಕೊರೊನಾ ಸಂಬಂಧಿ ವದಂತಿಗಳಿಗೆ ಕಿವಿಗೊಡಬೇಡಿ ಎಂದಿರುವ ಆರೋಗ್ಯ ಸಚಿವ ಶ್ರೀರಾಮುಲು, ಮುನ್ನೆಚ್ಚರಿಕೆ ಕ್ರಮವಾಗಿ ನೆಗಡಿ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವವರು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದಿದ್ದಾರೆ. ತಪಾಸಣೆಗೆ ಒಳಗಾಗದಿದ್ದವರ ವಿರುದ್ಧ ಕಠಿನ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಸ್ಪೇಯ್ನ ಪ್ರಧಾನಿ ಪತ್ನಿಗೂ ಸೋಂಕು
ಸ್ಪೇಯ್ನನಲ್ಲಿ ಕೊರೊನಾ ತೀವ್ರವಾಗಿದೆ. ಒಂದೇ ದಿನ 2,000 ಮಂದಿಗೆ ಸೋಂಕು ತಗುಲಿದ್ದು, 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ ದೇಶದ ಪ್ರಧಾನಿ ಪತ್ನಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಇರಾನ್‌ನಲ್ಲೂ 24 ತಾಸುಗಳಲ್ಲಿ ಸೋಂಕುಪೀಡಿತರು ಮತ್ತು ಮೃತರ ಸಂಖ್ಯೆ ಹೆಚ್ಚಾಗಿದೆ.

7, 8, 9ರ ಪರೀಕ್ಷೆಯೂ ಮುಂದಕ್ಕೆ
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈಗ 7, 8 ಮತ್ತು 9ನೇ ತರಗತಿ ಪರೀಕ್ಷೆಗಳನ್ನೂ ಮಾ.31ರ ವರೆಗೆ ಮುಂದೂಡಲಾಗಿದೆ. ಈಗಾಗಲೇ 6ನೇ ತರಗತಿಯ ವರೆಗಿನ ಎಲ್ಲ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಹಿಂದಿನ ನಿರ್ಧಾರದ ಪ್ರಕಾರ ಸೋಮವಾರದಿಂದ 7ನೇ ತರಗತಿ ಪರೀಕ್ಷೆ ಆರಂಭವಾಗಬೇಕಿತ್ತು. ಆದರೆ ಇದನ್ನು ಮುಂದೂಡಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಅನಂತರ ಹೊಸ ಪರೀಕ್ಷಾ ದಿನಾಂಕಗಳನ್ನು ನಿಗದಿ ಮಾಡುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. ಎಸೆಸೆಲ್ಸಿ ಪರೀಕ್ಷೆಗಳು ನಿಗದಿಯಂತೆಯೇ ನಡೆಯಲಿವೆ.

ಎರಡು ಪರೀಕ್ಷೆ ಉಚಿತ
ಕೋವಿಡ್‌-19 ಸೋಂಕು ದೃಢಪಡಿಸಲು ನಡೆಸುವ ಮೊದಲ ಮತ್ತು ದ್ವಿತೀಯ ಪರೀಕ್ಷೆ ಗಳಿಗೆ ನಾಗರಿಕರಿಗೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಆರೋಗ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂಜೀವ ಕುಮಾರ್‌ ಹೇಳಿದ್ದಾರೆ. ದೇಶದಲ್ಲಿ ಒಟ್ಟು 52 ಪರೀಕ್ಷಾ ಕೇಂದ್ರಗಳಿದ್ದು, ಮೊದಲೆರಡು ಪರೀಕ್ಷೆಗಳು ಉಚಿತ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಲಬುರಗಿ: ಮತ್ತೂಬ್ಬರಿಗೆ ದೃಢ
ಕೊರೊನಾದಿಂದ ಮೃತಪಟ್ಟಿದ್ದ ಕಲಬುರಗಿಯ ವೃದ್ಧನ ಕುಟುಂಬದ 45 ವರ್ಷದ ಸಂಬಂಧಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮೃತ ವೃದ್ಧನೊಂದಿಗೆ ನೇರ ಸಂಪರ್ಕ ಹೊಂದಿದ್ದ ನಾಲ್ವರು ಕುಟುಂಬಸ್ಥರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಶನಿವಾರ ಮೂವರ ವರದಿ ನೆಗೆಟಿವ್‌ ಬಂದಿತ್ತು. ರವಿವಾರ ಮತ್ತೂಬ್ಬ ಮಹಿಳೆಯ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ. ಈ ಮಹಿಳೆಯನ್ನು ಐಸೋಲೇಟೆಡ್‌ ವಾರ್ಡ್‌ನಲ್ಲಿ ನಿಗಾದಡಿ ಇರಿಸಲಾಗಿದೆ.

ಕೊರೊನಾಕ್ಕೆ ಬಿಸಿಲು ಮದ್ದಲ್ಲ
ಸುಡು ಬಿಸಿಲಿನಿಂದ ಕೊರೊನಾ ನಿಯಂತ್ರಣಕ್ಕೆ ಬರುವುದಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇದುವರೆಗೆ ಬಿಸಿಲು ಹೆಚ್ಚಾದರೆ ಅದು ನಿಯಂತ್ರಣಕ್ಕೆ ಬರುತ್ತದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇದನ್ನು ತಳ್ಳಿಹಾಕಿರುವ ವೈದ್ಯರು, ಬಿಸಿಲು ಹೆಚ್ಚಿರುವೆಡೆ ಸೋಂಕು ಹರಡುವುದಿಲ್ಲ ಎಂದು ಉದಾಸೀನ ತೋರುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next