ಕೋಲಾರ: ನಿರೀಕ್ಷೆಯಂತೆಯೇ ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ ಎಂಟು ಕೋವಿಡ್ 19 ಸೋಂಕಿತ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 64 ಕ್ಕೇರಿದೆ. ಇಡೀ ಜಿಲ್ಲೆಯಲ್ಲಿ ಇದುವರೆಗೂ ಒಂದೇ ದಿನ 8 ಪ್ರಕರಣಗಳು ಪತ್ತೆಯಾಗಿರುವುದು ಇದೇ ಮೊದಲಾಗಿದ್ದು, ಕೋಲಾರದಲ್ಲಿ 3, ಮಾಲೂರಿನಲ್ಲಿ 1, ಬಂಗಾರಪೇಟೆಯಲ್ಲಿ 3, ಮುಳಬಾಗಿಲಿನಲ್ಲಿ 1 ಪ್ರಕರಣ ಭಾನುವಾರ ಪತ್ತೆಯಾಗಿವೆ.
ಬಂಗಾರಪೇಟೆಯಿಂದ ಬೆಂಗಳೂರಿಗೆ ಕಾರ್ಯಕ್ರಮವೊಂದಕ್ಕೆ ಹೋಗಿ ಬಂದಿದ್ದ 26 ವರ್ಷ ಯುವತಿ ಹಾಗೂ 18 ವರ್ಷದ ಯುವಕನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಬಂಗಾರಪೇಟೆಯ 30 ವರ್ಷದ ಮಹಿಳೆಗೂ ಸೋಂಕು ಖಚಿತವಾಗಿದೆ. ಕೋಲಾರದಿಂದ ಬೆಂಗಳೂರಿಗೆ ತೆರಳಿದ್ದ ಗಲ್‌ಪೇಟೆಯ 31 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಗಲ್‌ಪೇಟೆ 8ನೇ ವಾರ್ಡ್ ಅನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಕೋಲಾರದ ಮತ್ತೂರ್ವ 35 ವರ್ಷ ವ್ಯಕ್ತಿಗೂ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಪಿ.8059 ರೋಗಿಯ ಸಂಪರ್ಕದಲ್ಲಿದ್ದ 29 ವರ್ಷದ ವ್ಯಕ್ತಿಗೂ ಕೋವಿಡ್ 19 ಸೋಂಕು ದೃಢಪಟ್ಟಿದೆ. ಮುಳಬಾಗಿಲಿನಿಂದ 24 ವರ್ಷದ ಮಹಿಳೆ ಮತ್ತು ಮಾಲೂರಿನಿಂದ 71 ವರ್ಷದ ಮಹಿಳೆಗೂ ಸೋಂಕು ಖಚಿತವಾಗಿದ್ದು, ಈ ಪೈಕಿ ಒಬ್ಬರು ಜಾಲಪ್ಪ ಕೋವಿಡ್ ಆಸ್ಪತ್ರೆ ಹಾಗೂ ಉಳಿದವರೆಲ್ಲರೂ ಎಸ್‌ಎನ್‌ಆರ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಯಾವುದೇ ರೋಗಿ ಗುಣಮಖರಾಗಿ ಬಿಡುಗಡೆಹೊಂದಿಲ್ಲ. ಸೋಂಕಿತರ ಸಂಖ್ಯೆ 64 ಆದರೂ ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ 19ದಿಂದ ಯಾವುದೇ ಸಾವು ಸಂಭವಿಸಿಲ್ಲ.
ಬಂಗಾರಪೇಟೆ: ಮಹಿಳೆಗೆ ಕೋವಿಡ್ 19 ಸೋಂಕು
ಬಂಗಾರಪೇಟೆ: ತಾಲೂಕಿನಲ್ಲಿ ಶನಿವಾರ ಇಬ್ಬರಲ್ಲಿ ಕಾಣಿಸಿಕೊಂಡಿದ್ದ ಸೋಂಕು ಭಾನುವಾರ ಮಹಿಳೆ ಯೊಬ್ಬರಲ್ಲಿ ದೃಢಪಟ್ಟಿದೆ. ತಾಲೂಕಿನ ಹುಲಿಬೆಲೆ ಗ್ರಾಪಂ ವ್ಯಾಪ್ತಿಯ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ 23 ವರ್ಷದ ಮಹಿಳೆಯಲ್ಲಿ ಕೋವಿಡ್ 19 ಕಾಣಿಸಿಕೊಂಡಿದೆ. ಈಕೆಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಈಕೆಯ ಪತಿ ಬೆಂಗಳೂರಿಗೆ ಪ್ರತಿ ದಿನ ಬಣ್ಣ ಬಳಿಯುವ ಕೆಲಸಕ್ಕೆ ಹೋಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೋಂಕಿತನ ಪತಿ, ಕುಟುಂಬದ ಐವರು, ಅಕ್ಕಪಕ್ಕದ ಮನೆಯಲ್ಲಿದ್ದ ಸಂಬಂಧಿಕರು ಸೇರಿ 10 ಜನರ ಗಂಟಲು ದ್ರವ ಸಂಗ್ರಹಿಸಿ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ಜೂ.15ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ಸೋಂಕಿತೆ ಕೆಮ್ಮು, ಉಸಿರಾಟದ ತೊಂದರೆ ಇರುವುದು ಕಂಡು ಬಂದಿತ್ತು. ವೈದ್ಯರು ಕೋವಿಡ್ ಪರೀಕ್ಷೆ ನಡೆಸಿದ್ದರು. ಪಾಸಿಟಿವ್ ಬಂದ ತಕ್ಷಣ ತಾಲೂಕು ಪ್ರಭಾರ ವೈದ್ಯಾಧಿಕಾರಿ ಡಾ.ಸುನೀಲ್, ಸಿಬ್ಬಂದಿ ತಂಡ, ಸೋಂಕಿತರ ಅಕ್ಕಪಕ್ಕದ ಮನೆಯವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದರು ಬೇತಮಂಗಲ ಸಬ್ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್, ಎಎಸ್‌ಐ ರವೀಂದ್ರ, ಆರೋಗ್ಯ ನಿರೀಕ್ಷಕ ಆರ್.ರವಿ, ಆದರ್ಶ್, ಹುಲಿಬೆಲೆ ಗ್ರಾಪಂ ಪಿಡಿಒ ಶ್ರೀನಿವಾಸರೆಡ್ಡಿ, ಕಾರ್ಯದರ್ಶಿ ಶಿವಕುಮಾರ್ ಇದ್ದರು.