Advertisement

ಬೇಸಾಯಗಾರರ ಸಂಖ್ಯೆ ಇಳಿಮುಖ

10:16 AM Jan 06, 2019 | |

ಶಿರಸಿ: ಭಾರತೀಯರ ಹಸಿವನ್ನು ನೀಗಿಸುವ ಮಹತ್ಕಾರ್ಯ ಮಾಡುವ ರೈತರ ಸಂಖ್ಯೆ ಇಳಿಮುಖ ಆಗುತ್ತಿರುವುದು ಆತಂಕದ ಸಂಗತಿಯಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲರೂ ಉತ್ತಮ ವಿದ್ಯೆ ಕಲಿತು ಮರಳಿ ಮಣ್ಣಿಗೆ ಬರುತ್ತೇವೆ ಎಂಬ ಫಣ ತೊಡಬೇಕೆಂದು ಮುಂಡಗೋಡ ಬಿಇಒ ಡಿ.ಎಂ ಬಸವರಾಜಪ್ಪ ಅಭಿಪ್ರಾಯಪಟ್ಟರು.

Advertisement

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಕೃಷಿ ಪ್ರತಿಷ್ಠಾನ ಸ್ವರ್ಣವಲ್ಲೀ ಆಯೋಜನೆಯಲ್ಲಿ ಮಾಧ್ಯಮಿಕ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡ ಕೃಷಿ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯಲ್ಲಿ ಎಷ್ಟೇ ಯಾಂತ್ರಿಕತೆಗಳು ಬಂದರೂ ಉಳಿಮೆಗೆ ಕುಳ ಬೇಕೇ ಬೇಕು. ಅದಕ್ಕೆ ಹಿರಿಯರು ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಉತ್ತಮ ಎಂದು ಹೇಳುತ್ತಿದ್ದರು. ಮನುಷ್ಯನಿಗೆ ಅನ್ನ ಪರಬ್ರಹ್ಮ ದೇವರು. ಭಾರತ ಕೃಷಿ ಪ್ರಧಾನ ದೇಶ, ಅದನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಕೃಷಿಯಲ್ಲಿ ನಂಬಿಕೆ ಇಟ್ಟಾಗ ಮಾತ್ರ ಭೂತಾಯಿ ಎಲ್ಲರನ್ನೂ ಸಲಹುತ್ತಾಳೆ ಎಂದರು.

ಮಕ್ಕಳಿಗೆ ಪ್ರಾರಂಭದಲ್ಲಿಯೇ ಸ್ಪರ್ಧೆ ಮುಖಾಂತರ ಕೃಷಿಯ ಬಗ್ಗೆ ಅರಿಯಲು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಒಂದು ಸಂಸ್ಥಾನ ಕೃಷಿಯ ಉಳಿವಿಗೆ ಅರಿವು ಮೂಡಿಸಲು ಅಳಿಲು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

ಕ್ಷೇತ್ರ ಸಂಪನ್ಮೂಲ ಕೇಂದ್ರದ ಮುಖ್ಯಸ್ಥ ಜಿ.ವಿ. ನಾಯ್ಕ ಮಾತನಾಡಿ, ವಿಜ್ಞಾನ ಎಷ್ಟೇ ಮುಮದುವರೆದರೂ ರೈತನಿಗೆ ತಿಳಿಯುವ ಪ್ರಕೃತಿಯ ಜ್ಞಾನ, ಭೂ ತಾಯಿಯ ವೇದನೆ, ಇನ್ಯಾರಿಗೂ ತಿಳಿಯುವುದಿಲ್ಲ. ರೈತ ಕ್ರಿಮಿನಾಶಕ-ರಾಸಾಯನಿಕಗಳನ್ನು ಬಿಟ್ಟು ಸಾವಯವದಲ್ಲಿ ಬೆಳೆ ಬೆಳೆದಾಗ್ಯೂ ವ್ಯಾಪಾರಸ್ಥರು ಬೆಳೆಯ ಸಂಸ್ಕರಣೆಗಾಗಿ ರಾಸಾಯನಿಕ ಬಳಕೆ ಮಾಡುತ್ತಾರೆ. ಇಂತಹ ಕೃತ್ಯಗಳು ನಿಲ್ಲಬೇಕು, ಇಲ್ಲವಾದಲ್ಲಿ ಮನುಕುಲಕ್ಕೆ ಅಪಾಯ ಉಂಟಾಗಲಿದೆ ಎಂದರು.

Advertisement

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಸ್‌. ಕುಲಕರ್ಣಿ ತಾಲೂಕಿನ ಭೌಗೋಳಿಕ ಪರಿಚಯದೊಂದಿಗೆ ಹಸಿರು ಕ್ರಾಂತಿ ಬೆಳವಣಿಗೆ ಹಾಗೂ ಬಂಜರು ಭೂಮಿಯನ್ನು ಫಲವಂತಿಕೆ ಮಾಡುವ ಪರಿ ವಿವರಿಸಿದರು.

ಇದೇ ವೇಳೆ ಯುವ ರೈತ ಉಮೇಶ ಗೌಡ ಹೊಸಕೊಪ್ಪ ಹಾಗೂ ಶೈಲಜಾ ನಿಂಗಳಕಿ ಇವರನ್ನು ಸಂಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಯುವ ರೈತರು ಸಭೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು. ಸಭಾಧ್ಯಕ್ಷ ಸ್ಥಾನದಿಂದ ಎಂ.ಕೆ. ಹೆಗಡೆ ಚಿಪಗೇರಿಯವರು ಇಂದಿನ ದಿನದಲ್ಲಿ ಕೃಷಿಯ ಅಗತ್ಯತೆ ಬಗ್ಗೆ ವಿವರಿಸಿದರು.

ಸಂಪನ್ಮೂಲ ಕೇಂದ್ರದ ಗಣಪತಿ, ಶ್ರೀಧರ ಹೆಗಡೆ ಗುಡ್ಡೇಮನೆ, ಸಿ.ಆರ್‌.ಪಿಗಳಾದ ಮಾನಸಿಂಗ್‌ ರಾಥೋಡ ಇದ್ದರು. ರತ್ನಾಕರ ಹೆಗಡೆ ಬಾಡಲಕೊಪ್ಪ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವಿ.ಟಿ. ಹೆಗಡೆ ವಂದಿಸಿದರು. ಅನುಷಾ ಹೆಗಡೆ ಸೋಂದಾ ನಿರ್ವಹಿಸಿದರು.

ಕೃಷಿ ರಸಪ್ರಶ್ನೆ ವಿಜೇತರು
ಕಾತೂರಿನ ಸರ್ಕಾರಿ ಪ್ರೌಢಶಾಲೆಯ ಧನ್ಯಾ ಭಟ್ಟ ಹಾಗೂ ರಕ್ಷಿತಾ ಗಲಗಿನಕಟ್ಟಾ ಪ್ರಥಮ, ಮಳಗಿ ಸರ್ಕಾರಿ ಪ್ರೌಢಶಾಲೆಯ ಆಶಾ ಭೋವಿ ಹಾಗೂ ಪ್ರಭಾವತಿ ನಾಯ್ಕ ದ್ವಿತೀಯ, ಅಂದಲಗಿ ಪ್ರೌಢಶಾಲೆಯ ಯಾಸಿನ್‌ ಮಮ್ದೂನವರ ಮತ್ತು ಮಂಜುನಾಥ ಕುಂದಗೋಳ ಕೃಷಿ ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next