ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ನಾಗಲೋಟ ಮುಂದುವರೆದಿದೆ.
ಸೋಮವಾರ ಹೊಸದಾಗಿ 60 ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಒಟ್ಟು ಸಂಖ್ಯೆ 910ಕ್ಕೆ ಏರಿಕೆಯಾಗಿದೆ.
ಮತ್ತು ಸೋಂಕು ಹಬ್ಬುವಿಕೆ ಇದೇ ರೀತಿಯಲ್ಲಿ ಮುಂದುವರೆದರೆ ಇನ್ನು ಒಂದರೆಡು ದಿನಗಳಲ್ಲಿ ಜಿಲ್ಲೆಯಲ್ಲಿನ ಸೋಂಕು ಪೀಡಿತರ ಸಂಖ್ಯೆ ಸಾವಿರದ ಗಡಿ ದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕಳೆದ ಭಾನುವಾರ ಬರೋಬ್ಬರಿ 135 ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಅರ್ಭಟಿಸಿತ್ತು. ಇಂದು ಕೂಡ 60 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೋವಿಡ್ 19 ಆತಂಕ ಸಾಕಷ್ಟು ತಲ್ಲಣ ಮೂಡಿಸಿದ್ದು ದಿನದಿಂದ ದಿನಕ್ಕೆ ಈ ಸೋಂಕು ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿರುವುದು ಬರಡು ಜಿಲ್ಲೆಯ ಜನತೆಯ ಪಾಲಿನ ಆತಂಕವನ್ನು ಹೆಚ್ಚಿಸಿದೆ.
60 ಹೊಸ ಪ್ರಕರಣಗಳ ಪೈಕಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 22, ಬಾಗೇಪಲ್ಲಿ 3, ಚಿಂತಾಮಣಿ, ಶಿಡ್ಲಘಟ್ಟ ತಲಾ 1, ಗೌರಿಬಿದನೂರಲ್ಲಿ 31 ಹಾಗೂ ಗುಡಿಬಂಡೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ.
ಸೋಮವಾರ ಒಂದೇ ದಿನ ಜಿಲ್ಲೆಯಲ್ಲಿ 43 ಸೋಂಕಿತರು ಸಂಪೂರ್ಣ ಚೇತರಿಸಿಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಜಿಲ್ಲೆಯಲ್ಲಿ ಒಟ್ಟು ಇದುವರೆಗೂ 392 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಮತ್ತು ಜಿಲ್ಲೆಯಲ್ಲಿ ಇನ್ನೂ ಕೋವಿಡ್ 19 ಸೋಂಕಿನ 498 ಸಕ್ರಿಯ ಪ್ರಕರಣಗಳು ಇವೆ.