Advertisement

ನುಲಿಯ ಚಂದಯ್ಯ ದಲಿತ ವರ್ಗದ ಹೆಮ್ಮೆ

06:21 PM Aug 13, 2022 | Team Udayavani |

ಧಾರವಾಡ: ಹನ್ನೆರಡನೇ ಶತಮಾನದಲ್ಲಿ ಕಾಯಕಕ್ಕೆ ಒತ್ತು ನೀಡುವ ಮೂಲಕ ಕೊರಚ, ಕೊರವ ಸಮುದಾಯದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾಯಕದ ಮಹತ್ವವನ್ನು ಸಾರಿದ ನುಲಿಯ ಚಂದಯ್ಯನವರು ಕಾಯಕದಲ್ಲಿಯೇ ದೇವರನ್ನು ಕಂಡ ಮಹಾಶರಣರು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

Advertisement

ಆಲೂರು ವೆಂಕಟರಾವ್‌ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಯಾಣ ನಾಡಿನ ಶ್ರೇಷ್ಠ ಶರಣ, ಅನುಭಾವಿ, ವಚನಕಾರ ನುಲಿಯ ಚಂದಯ್ಯನವರು ಕಾಯಕ ನಿಷ್ಠೆ ಶಿವನಿಗೆ ಅರ್ಪಿತವಾಗುತ್ತದೆ ಎಂದು ಅಚಲವಾಗಿ ನಂಬಿ ಅದರಂತೆ ನಡೆದರು. ಪೂಜೆ, ಪುನಸ್ಕಾರಗಳಿಗಿಂತ ಕಾಯಕ ನಿಷ್ಠೆಯೇ ಮೇಲು ಎಂದು ಸಾರಿದವರು. ಅಂತಹ ಮಹಾನ್‌ ಶರಣರ ಮೌಲ್ಯಗಳನ್ನು ಜೀವನ ದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಸಾಹಿತಿ ನಾರಾಯಣ ಭಜಂತ್ರಿ ಮಾತನಾಡಿ, 12ನೇ ಶತಮಾನದಲ್ಲಿದ್ದ ಕಾಯಕನಿಷ್ಠ ಯೋಗಿ ಹಾಗೂ ನಿಜಾನುಭಾವಿ ಶರಣ ನುಲಿಯ ಚಂದಯ್ಯನವರು. ತಮ್ಮ ವಚನಗಳ ಮೂಲಕ ಕಾಯಕ ಕಡ್ಡಾಯ ಎಂಬ ಆಶಯ ಸಾರಿದ್ದಾರೆ. ಗುರು, ಲಿಂಗ, ಚಂಗಮ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ಶ್ರೇಷ್ಠ ವಚನಕಾರ ನುಲಿಯ ಚಂದಯ್ಯನವರು.

ಬಸವಣ್ಣನವರ ಸಾಮಾಜಿಕ ಸಮಾನತೆಯ ವಿಚಾರ ಧಾರೆ, ಚಿಂತನೆಗೆ ಆಕರ್ಷಿತರಾಗಿ ಕಲ್ಯಾಣಕ್ಕೆ ತೆರಳಿ ಕಾಯಕ ಜೀವಿಯಾಗಿ, ದಾಸೋಹ ಮಾಡುತ್ತ ಬದುಕಿದರು. ನುಲಿಯ ಚಂದಯ್ಯ ದಲಿತ ವರ್ಗದ ಹೆಮ್ಮೆಯ ವಚನಕಾರ ಎಂದು ಹೇಳಿದರು.

Advertisement

ಭೈರನಟ್ಟಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಜಿಲ್ಲಾ ಕೊರಮ ಸಮಾಜದ ಅಧ್ಯಕ್ಷ ನಾರಾಯಣ ಭಜಂತ್ರಿ, ಮುಖಂಡರಾದ ಬಸವರಾಜ ಕೊರವರ, ಹನಮಂತ ಕೊರವರ, ಮಾರುತಿ ಮಾಕಡವಾಲೆ, ರಾಮಣ್ಣ ಹಂಚಿನಮನಿ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಅನೀಲ ಮೇತ್ರಿ ಸಂಗಡಿಗರಿಂದ ವಚನ ಗಾಯನ ಜರುಗಿತು. ರವಿ ಕುಲಕರ್ಣಿ ನಿರೂಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next