ಹೊಸನಗರ: ಮೂರು ಕೊಠಡಿಗಳಿರುವ ಹಳೇ ಕಟ್ಟಡ ಬೀಳುವ ಸ್ಥಿತಿಯಲ್ಲಿರುವ ಕಾರಣ ಮಕ್ಕಳನ್ನು ಶಿಕ್ಷಕರ ಕೊಠಡಿಯ ಮಧ್ಯದಲ್ಲಿ ಕುಳ್ಳಿರಿಸಿ ಪಾಠ ಮಾಡುತ್ತಿರುವ ಘಟನೆ ತಾಲೂಕಿನ ನೂಲಿಗ್ಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಈ ಶಾಲೆಯಲ್ಲಿ 100 ರಷ್ಟು ವಿದ್ಯಾರ್ಥಿಗಳಿದ್ದು 1 ರಿಂದ 7ನೇ ತರಗತಿವರೆಗೆ ನಡೆಯುತ್ತವೆ. ಒಟ್ಟಿಗೆ 6 ಕೊಠಡಿಗಳು ಮಾತ್ರ ಇದ್ದು ತರಗತಿಗೆ ಬಳಸಿಕೊಳ್ಳಲಾಗಿತ್ತು. ಆದರೆ 3 ಕೊಠಡಿಯ ಕಟ್ಟಡ ಶಿಥಿಲಗೊಂಡಿದ್ದು ಗೋಡೆ ಬೀಳುವ ಸ್ಥಿತಿಯಲ್ಲಿದೆ. ಕೊಠಡಿಯೊಳಗೆ ನೀರು ಬರುತ್ತಿದೆ, ಹಂಚಿನ ಮೇಲ್ಛಾವಣಿ ಕೂಡ ದುಸ್ಥಿತಿಯಲ್ಲಿದ್ದು ನೀರು ಸೋರುತ್ತಿದೆ. ಅಪಾಯಕ್ಕೆ ಆಹ್ವಾನಿಸಿದಂತಿರುವ ಈ ಕಟ್ಟಡ ಪೂರ್ತಿ ಶಿಥಿಲಗೊಂಡಿದ್ದು ದುರಸ್ಥಿ ಮಾಡಲು ಕೂಡ ಸಾಧ್ಯವಿಲ್ಲವಾಗಿದೆ.
ಇದೀಗ ಕೇವಲ ಮೂರು ಕೊಠಡಿ ಮಾತ್ರ ತರಗತಿಗೆ ಲಭ್ಯವಿದ್ದು, 6 ಮತ್ತು 7ನೇ ತರಗತಿಯನ್ನು ಶಿಕ್ಷಕರ ಕೊಠಡಿಯಲ್ಲಿ ನಡೆಸುವಂತಾಗಿದೆ. ಸುತ್ತಲೂ ಶಿಕ್ಷಕರು ಕುಳಿತುಕೊಳ್ಳುವ ಕುರ್ಚಿ, ಮೇಜುಗಳು, ಮದ್ಯದಲ್ಲಿ ಉಳಿದ ಕಿರಿದಾದ ಜಾಗದಲ್ಲಿ ಮಕ್ಕಳಿಗೆ ಪಾಠನಡೆಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ಮಕ್ಕಳ ಸುರಕ್ಷತೆ ಮತ್ತು ಸುಗಮ ವ್ಯಾಸಂಗದ ಬಗ್ಗೆ ತುರ್ತುಕ್ರಮ ಕೈಗೊಳ್ಳಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಪೋಷಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Shocking: ರಸ್ತೆಗಾಗಿ ಇಬ್ಬರು ಮಹಿಳೆಯರನ್ನೇ ಜೀವಂತ ಸಮಾಧಿ ಮಾಡಲು ಮುಂದಾದ ದುರುಳರು…