ಗುರುಗ್ರಾಮ: ಹರ್ಯಾಣದ ನೂಹ್ ಜಿಲ್ಲೆಯ ತಾಯೂರು ಪಟ್ಟಣದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಸುಮಾರು 250 ಗುಡಿಸಲುಗಳನ್ನು ಜಿಲ್ಲಾಡಳಿತ ಬುಲ್ಡೋಜರ್ ಸಹಾಯದಿಂದ ತೆರವುಗೊಳಿಸಿದೆ.
“ಈ ಸ್ಥಳವು ಹರ್ಯಾಣ ಸಹಕಾರಿ ವಿಕಾಸ್ ಪ್ರಾಧಿಕಾರಕ್ಕೆ ಸೇರಿದ ಸ್ಥಳವಾಗಿದೆ. ಬಾಂಗ್ಲಾದೇಶಿ ವಲಸಿಗರು ಇಲ್ಲಿನ ಗುಡಿಸಲುಗಳಲ್ಲಿ ಅಕ್ರಮವಾಗಿ ನೆಲೆಸಿದ್ದರು. ಇವರು ಈ ಹಿಂದೆ ಅಸ್ಸಾಂನಲ್ಲಿ ನೆಲೆಸಿದ್ದರು. ಅಲ್ಲಿಂದ ಇಲ್ಲಿಗೆ ಬಂದಿದ್ದರು. ಗುರುವಾರ ಸಂಜೆ ಈ ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದಿನ ಕೋಮು ಗಲಭೆಯಲ್ಲಿ ಇಲ್ಲಿನ ಅಕ್ರಮ ಬಾಂಗ್ಲಾ ವಲಸಿಗರು ಭಾಗವಹಿಸಿದ್ದರು. ಹೀಗಾಗಿ ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಿದ ನೂಹ್ ಜಿಲ್ಲಾಧಿಕಾರಿ ಪ್ರಶಾಂತ್ ಪನ್ವಾರ್, “ಕೋಮು ಗಲಭೆಗೂ ಇದಕ್ಕೂ ಸಂಬಂಧವಿಲ್ಲ. ಅತಿಕ್ರಮ ತೆರವು ಕಾರ್ಯಾಚರಣೆ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಇದು ಅದರ ಭಾಗವಾಗಿದೆ,’ ಎಂದು ಸ್ಪಷ್ಟಪಡಿಸಿದ್ದರು.
ಇನ್ನೊಂದೆಡೆ, ನೂಹ್ ಗಲಭೆ ಖಂಡಿಸಿ, ಹಿಂದೂಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು, ಶುಕ್ರವಾರ ಗುರುಗ್ರಾಮದ ಪಟೌಡಿ ಪ್ರದೇಶದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು. ಪಟೌಡಿ, ಜಟೌಲಿ ಮತ್ತು ಭೋರಾ ಕಾಲನ್ ಪ್ರದೇಶದಲ್ಲಿ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು.
ಸಾಮೂಹಿಕ ಪ್ರಾರ್ಥನೆ ಇಲ್ಲ:
ಹರ್ಯಾಣದ ಗಲಭೆಪೀಡಿತ ಪ್ರದೇಶಗಳ ಮಸೀದಿಗಳಲ್ಲಿ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯನ್ನು ರದ್ದು ಮಾಡಲಾಯಿತು. ಎಲ್ಲರೂ ತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ನೂಹ್, ಗುರುಗ್ರಾಮ ಮತ್ತು ರೋಹrಕ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.