Advertisement

ವೈದ್ಯಕೀಯ ಸಾಹಿತ್ಯಕ್ಕೆ ಡಾ|ಹುಲ್ಲಮನಿ ಕೊಡುಗೆ ಅಪಾರ

08:50 PM Nov 09, 2020 | Suhan S |

ಶಿವಮೊಗ್ಗ: ವೈದ್ಯಕೀಯ ಸಾಹಿತ್ಯ ಮತ್ತು ಸಾಹಿತ್ಯ ಕಾರ್ಯ ಚಟುವಟಿಕೆಗಳಿಗೆ ಡಾ| ಮಲ್ಲೇಶ ಹುಲ್ಲಮನಿ ನಿರಂತರ ಪ್ರೋತ್ಸಾಹ ನೀಡುತ್ತಿದ್ದರು ಎಂದು ಶಸ್ತ್ರಚಿಕಿತ್ಸಕ ಡಾ| ಬಿರಾದಾರ್‌ ಅಭಿಪ್ರಾಯಪಟ್ಟರು.

Advertisement

ನಗರದ ಗೋಪಿಶೆಟ್ಟಿಕೊಪ್ಪದಲ್ಲಿರುವ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಆಯೋಜಿಸಿದ್ದ ಡಾ| ಮಲ್ಲೇಶ್‌ ಹುಲ್ಲಮನಿಯವರಿಗೆ ನುಡಿ ನಮನ, ಡಾ| ಜಿ.ಎಸ್‌. ಶಿವರುದ್ರಪ್ಪ ದತ್ತಿ ಕಾರ್ಯಕ್ರಮ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರಕ್ಕೆ ಮಲ್ಲೇಶ್‌ ಹುಲ್ಲಮನಿಯವರ ಕೊಡುಗೆ ಅಪಾರವಾಗಿದ್ದು, ಯಾವುದೇ ಸಾಹಿತ್ಯ ಕಾರ್ಯಕ್ರಮಗಳಿದ್ದರೂ ಅತ್ಯಂತ ಪ್ರೀತಿ- ವಿಶ್ವಾಸವಿಂದ ಸಹಕರಿಸಿ ಪ್ರೋತ್ಸಾಹಿಸುತ್ತಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದರು. ನಾಲ್ಕೈದು ದಶಕಗಳ ಒಡನಾಟದಲ್ಲಿ ಮಲ್ಲೇಶ್‌ ಹುಲ್ಲಮನಿಯವರ ಸೇವಾ ಚಟುವಟಿಕೆ, ಸಾಮಾಜಿಕ ಕಳಕಳಿ, ಸಂಘಟನೆ ಕೌಶಲ್ಯ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಸೇವಾ ಸಾಧನೆಗಳನ್ನು ಕಂಡಿದ್ದೇನೆ. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದರು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ವಿಜಯಾ ಶ್ರೀಧರ್‌, ಪ್ರಕೃತಿ ವರ್ಣನೆ ಹಾಗೂ ವೈಚಾರಿಕ ನೆಲೆಗಟ್ಟಿನ ಸಾಹಿತ್ಯವನ್ನು ರಾಷ್ಟ್ರಕವಿ ಕುವೆಂಪು ಹಾಗೂ ಡಾ| ಜಿ.ಎಸ್‌.ಶಿವರುದ್ರಪ್ಪ ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ಗುರು ಶಿಷ್ಯರ ಭಾಂಧವ್ಯ ಹೊಂದಿದ್ದ ಇಬ್ಬರು ರಾಷ್ಟ್ರಕವಿಗಳ ಕೃತಿಗಳಲ್ಲಿ ಪ್ರಕೃತಿಯ ಬಗ್ಗೆ ವಿವರಿಸುವ ರೀತಿ ಅದ್ಭುತವಾಗಿರುತ್ತಿತ್ತು ಎಂದು ಹೇಳಿದರು.

ಕೆಲವೊಮ್ಮೆ ಪ್ರಕೃತಿ ಕುರಿತಾದ ಸಾಹಿತ್ಯ ಓದುತ್ತಿದ್ದರೆ ಇದು ಕುವೆಂಪು ಅವರದ್ದೊ, ಜಿಎಸ್‌ ಎಸ್‌ ಅವರಧ್ದೋ ಎಂಬಂತೆ ಭಾಸವಾಗುತ್ತಿತ್ತು. ಇನ್ನು ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರ ಪ್ರಭಾವವು ಕುವೆಂಪು ಮತ್ತು ಡಾ|ಜಿ.ಎಸ್‌.ಶಿವರುದ್ರಪ್ಪ ಅವರ ಮೇಲೂ ಬೀರಿತ್ತು ಎಂದು ತಿಳಿಸಿದರು.

Advertisement

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಿ.ಬಿ. ಶಂಕರಪ್ಪ ಮಾತನಾಡಿ, ಮಲ್ಲೇಶ್‌ ಹುಲ್ಲಮನಿ ಅವರು ಜಿಲ್ಲಾದ್ಯಂತ ಖ್ಯಾತಿ ಗಳಿಸಿದ್ದರು. ಜಿಲ್ಲೆಗೆ ಆಗಮಿಸುವ ಸಾಹಿತಿಗಳಿಗೆ ಸದಾ ಆತಿಥ್ಯ ವಹಿಸುತ್ತಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದರು ಎಂದು ಹೇಳಿದರು.

ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ ಅವರು ಶಿವಮೊಗ್ಗ ಜಿಲ್ಲೆಯವರು. ಅವರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ ಎನಿಸುತ್ತದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಕಾರಿ ಸಮಿತಿ ತೀರ್ಮಾನದಂತೆ ಇಲ್ಲಿಯ ಸಾಹಿತ್ಯ ಗ್ರಾಮದ ಸಭಾಭವನಕ್ಕೆ ರಾಷ್ಟ್ರಕವಿ ಡಾ| ಜಿ.ಎಸ್‌.ಶಿವರುದ್ರಪ್ಪ ಅವರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು ಕವನ ವಾಚನದಂತಹ ನಂತಹ ಅದಕ್ಕೆ ಸಿಗುವ ಪ್ರತಿಕ್ರಿಯೆಗಳನ್ನು ಆಲಿಸಬೇಕು. ವಿಮರ್ಶೆಯಿಂದ ಸಿಗುವ ಸಲಹೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮನೋವೈದ್ಯ ಡಾ| ರಿಯಾಜ್‌ ಬಾಷಾ ಅವರು ಮಲ್ಲೇಶ್‌ ಹುಲ್ಲಮನಿ ಅವರ ಕುರಿತು ಮಾತನಾಡಿದರು. ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಕೆ.ಅಂಜನಪ್ಪ ದತ್ತಿ ಉಪನ್ಯಾಸ ನೀಡಿದರು.

ಜಿಲ್ಲಾ ಕಸಾಪ ಕಾರ್ಯದರ್ಶಿ ಎಂ.ಎನ್‌. ಸುಂದರರಾಜ್‌, ಕೋಶಾಧ್ಯಕ್ಷೆ ಚಂದ್ರಕಲಾ ಅರಸ್‌, ತಾಲೂಕು ಕಸಾಪ ಕಾರ್ಯದರ್ಶಿಚನ್ನಬಸಪ್ಪ ನ್ಯಾಮತಿ, ಹಸನ್‌ ಬೆಳ್ಳಿಗನೂಡು, ಜಿ.ಎಸ್‌.ಅನಂತ, ಸುಮಿತ್ರಮ್ಮ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next