Advertisement

ಜೆಇಇ, ನೀಟ್‌ ವರ್ಷಕ್ಕೆರಡು ಬಾರಿ

06:00 AM Jul 08, 2018 | Team Udayavani |

ಹೊಸದಿಲ್ಲಿ: ಜೆಇಇ ಹಾಗೂ ನೀಟ್‌ ಬರೆಯುವ ಅವಕಾಶ ತಪ್ಪಿಸಿಕೊಂಡರೆ ಅಥವಾ ಫೇಲ್‌ ಆದರೆ ಇನ್ನು ಒಂದು ವರ್ಷದ ವರೆಗೆ ಕಾಯಬೇಕಿಲ್ಲ. ಏಕೆಂದರೆ ಮುಂದಿನ ವರ್ಷದಿಂದಲೇ ವರ್ಷಕ್ಕೆ ಎರಡು ಬಾರಿ ಈ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ, ನೀಟ್‌, ಜೆಇಇ, ನೆಟ್‌, ಜಿಪಿಎಟಿ ಹಾಗೂ ಸಿಎಂಎಟಿಗಳಲ್ಲಿ ಭಾರೀ ಬದಲಾವಣೆ ಮಾಡಲಾಗಿದ್ದು, ಈ ಹಿಂದೆ ಸಿಬಿಎಸ್‌ಇ ಹಾಗೂ ಯುಜಿಸಿ ನಡೆಸುತ್ತಿದ್ದ ಈ ಪರೀಕ್ಷೆಗಳ ಉಸ್ತುವಾರಿ ಹೊಣೆಯನ್ನು ಈಗ ಹೊಸ ಸಂಸ್ಥೆ ರಾಷ್ಟ್ರೀಯ ಪರೀಕ್ಷೆ ಏಜೆನ್ಸಿ (ಎನ್‌ಟಿಎ)ಗೆ ವಹಿಸಲಾಗಿದೆ.

Advertisement

ಮಾನವ ಸಂಪದಭಿವೃದ್ಧಿ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಶನಿವಾರ ಈ ಘೋಷಣೆ ಮಾಡಿದ್ದಾರೆ. ಎನ್‌ಟಿಎ ನಡೆಸಲಿರುವ ಮೊದಲ ಪರೀಕ್ಷೆ ಡಿಸೆಂಬರ್‌ನಲ್ಲಿ ನಡೆಯುವ ಯುಜಿಸಿ ನೆಟ್‌ ಆಗಿರಲಿದೆ. ಎಲ್ಲ ಟೆಸ್ಟ್‌ಗಳನ್ನೂ ಕಂಪ್ಯೂ ಟರ್‌ ಮೂಲಕವೇ ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸೆಂಟರ್‌, ಪರೀಕ್ಷೆ ದಿನಾಂಕ ಆಯ್ಕೆ ಅವಕಾಶ ಕಲ್ಪಿಸಲಾಗುತ್ತದೆ.

4-5 ದಿನಗಳವರೆಗೆ ಪರೀಕ್ಷೆ
ಜೆಇಇ ಅನ್ನು ಪ್ರತಿ ವರ್ಷ ಜನವರಿ ಮತ್ತು ಎಪ್ರಿಲ್‌ನಲ್ಲಿ ಹಾಗೂ ನೀಟ್‌ ಅನ್ನು ಫೆಬ್ರವರಿ ಮತ್ತು ಮೇಯಲ್ಲಿ ನಡೆಸಲಾಗುತ್ತದೆ. 4-5 ದಿನಗಳ ವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಪ್ರತೀ ದಿನದ ಪ್ರಶ್ನೆಪತ್ರಿಕೆಯೂ ವಿಭಿನ್ನವಾಗಿ ರುತ್ತದೆ ಮತ್ತು ಪ್ರತೀ ಅಭ್ಯರ್ಥಿಗೆ ಯಾದೃಚ್ಛಿಕ ವಾಗಿ ನೀಡಲಾಗಿರುತ್ತದೆ. ಆದರೆ ಕಾಠಿನ್ಯದ ಮಟ್ಟ ಒಂದೇ ಇರುತ್ತದೆ. 

ಪಠ್ಯಕ್ರಮ ಬದಲಾವಣೆ ಇಲ್ಲ
ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಷ್ಟೇ ಅಲ್ಲ, ಪರೀಕ್ಷೆ ಶುಲ್ಕದಲ್ಲೂ ಬದಲಾವಣೆ ಇಲ್ಲ. ಪರೀಕ್ಷೆ ನಡೆಸುವಲ್ಲಿ ಸಂಶೋಧಕರು, ಸಂಖ್ಯಾಶಾಸ್ತ್ರಜ್ಞರು, ಮನಃಶಾಸ್ತ್ರಜ್ಞರು ಮತ್ತು ಶಿಕ್ಷಣ ತಜ್ಞರನ್ನೂ ಸೇರಿಸಿಕೊಳ್ಳಲಾಗುತ್ತದೆ. ಅತ್ಯಂತ ಉನ್ನತ ಗುಣಮಟ್ಟದ ತಂತ್ರಜ್ಞಾನ ಹಾಗೂ ಸಾಫ್ಟ್ವೇರ್‌ ಬಳಸಲಾಗುತ್ತದೆ. ಸೋರಿಕೆ ಇಲ್ಲದಂತೆ ಪರೀಕ್ಷೆ ನಡೆಸಲು ಎನ್‌ಕ್ರಿಪ್ಷನ್‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.

ಪರೀಕ್ಷೆಗೆ ತಯಾರಿ ಉಚಿತ
ಎಲ್ಲ ಪರೀಕ್ಷೆಗಳೂ ಕಂಪ್ಯೂಟರ್‌ ಆಧರಿತವಾಗಿವೆ. ಮನೆ ಅಥವಾ ಅಧಿಕೃತ ಕಂಪ್ಯೂಟರ್‌ ಸೆಂಟರ್‌ಗಳಲ್ಲಿ ಉಚಿತವಾಗಿ ವಿದ್ಯಾರ್ಥಿಗಳು ಪ್ರಾಕ್ಟೀಸ್‌ ಮಾಡಬಹುದು. ಉಚಿತವಾಗಿ ತಯಾರಿ ನಡೆಸಬಹುದಾದ ಕೇಂದ್ರಗಳ ವಿವರಗಳನ್ನು ಶೀಘ್ರದಲ್ಲೇ ಬಹಿರಂಗ ಗೊಳಿಸಲಾಗುತ್ತದೆ. ಎಲ್ಲ ವಿದ್ಯಾರ್ಥಿಗಳಿಗೂ ಪ್ರಾಕ್ಟೀಸ್‌ ನಡೆಸಲು ಅವಕಾಶ ಸಿಗುವಂತೆ ಗ್ರಾಮೀಣ ಪ್ರದೇಶಗಳಲ್ಲೂ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಆಗಸ್ಟ್‌ ಮೂರನೇ ವಾರದಿಂದ ಪ್ರಾಕ್ಟೀಸ್‌ ನಡೆಸಬಹುದಾಗಿದೆ.

Advertisement

ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಮಾಡಲಾಗುತ್ತಿದೆ. ಡಿಸೆಂಬರ್‌ನಿಂದ ಎನ್‌ಟಿಎ ದೇಶದಲ್ಲಿ ಪರೀಕ್ಷೆಗಳನ್ನು ನಡೆಸಲು ಆರಂಭಿಸಲಿದೆ. ಶೀಘ್ರದಲ್ಲೇ ಸಮಗ್ರ ವಿವರಗಳನ್ನು ಎನ್‌ಟಿಎ ಬಿಡುಗಡೆ ಮಾಡಲಿದೆ.
– ಪ್ರಕಾಶ್‌ ಜಾಬ್ಡೇಕರ್‌, ಮಾನವ ಸಂಪದಭಿವೃದ್ಧಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next