Advertisement

NSS Annual Camp: ಬದುಕು ಕಲಿಸುವ ಎನ್‌ಎಸ್‌ಎಸ್‌

02:33 PM Mar 06, 2024 | Team Udayavani |

ರಾಷ್ಟ್ರೀಯ ಸೇವಾ ಯೋಜನೆ ಎಂದರೆ ಬರೀ ಕೆಲಸ ಮಾತ್ರ ಅಲ್ಲ. ಕೆಲಸದೊಂದಿಗೆ ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮ, ಶ್ರಮದಾನ ಎಲ್ಲವನ್ನು ಒಳಗೊಂಡ ಶಿಬಿರ. ಈ ಬಾರಿ ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಮೊಳಹಳ್ಳಿಯಲ್ಲಿ ವಿಶೇಷ ವಾರ್ಷಿಕ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಶಿಬಿರದ ಒಂದು ವಾರದ ಅವಧಿಯಲ್ಲಿ ನಾವು ನಮ್ಮ ಮನೆಯನ್ನು ಬಿಟ್ಟು ಬೇರೆ ಪರಿಸರಕ್ಕೆ ಹೊಂದಿಕೊಳ್ಳಬೇಕಾಗಿತ್ತು. ಈ ಅವಧಿಯಲ್ಲಿ ನಾವು ಒಂದಿಷ್ಟು ವ್ಯತ್ಯಾಸಗಳಿಗೆ ಹಾಗೂ ಬದಲಾವಣೆಗಳನ್ನು ಸಹಿಸಿಕೊಂಡೆವು. ಆದರೆ ಈ ಬದಲಾವಣೆಯ ಬೆಳಕು ಕೇವಲ ಶಿಬಿರದಲ್ಲಿ ಮಾತ್ರವಲ್ಲ ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡು ಅನುಸರಿಸಿದಾಗ ಮಾತ್ರ ಎನ್‌ಎಸ್‌ಎಸ್‌ನ ನಿಜವಾದ ಪ್ರಾಮುಖ್ಯತೆ ತಿಳಿಯುವುದು.

ನಮ್ಮ ಸರ್‌ ಯಾವಾಗಲೂ ಹೇಳುವಂತೆ ಎನ್‌ಎಸ್‌ಎಸ್‌ ಒಂದು ಸಾಗರದಂತೆ. ಅಲ್ಲಿ ನಾವು ನಮಗೆ ಬೇಕಾದಷ್ಟು ಮುತ್ತುಗಳನ್ನು ಬಾಚಿಕೊಳ್ಳುವ ಅವಕಾಶ ಆಕಾಶದಷ್ಟಿದೆ.

ಮುಂಜಾನೆ 5 ಗಂಟೆಗೆ ಎದ್ದು ಯೋಗಾಭ್ಯಾಸ, ಪ್ರಾರ್ಥನೆಯ ಅನಂತರ ಧ್ವಜಾರೋಹಣ, ಉಪಾಹಾರ, ಶ್ರಮದಾನ, ಭೋಜನ ವಿರಾಮ ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಹಾಗೂ ಗ್ರಾಮೀಣ ಕ್ರೀಡಾ ಸ್ಪರ್ಧೆ, ಪ್ರಕೃತಿ ವೀಕ್ಷಣೆ, ಗ್ರಾಮ ಸಮೀಕ್ಷೆ,

ಸಾಂಸ್ಕೃತಿಕ ಕಾರ್ಯಕ್ರಮ ಊಟದ ಬಳಿಕ ಅವಲೋಕನ. ಇದೆಲ್ಲದರ ಮಧ್ಯೆ ಉಚಿತ ಆಯುರ್ವೇದ ವೈದ್ಯಕೀಯ ತಪಾಸಣ ಶಿಬಿರ, “ಪರಿಸರ ನಮಗೊಂದಿಷ್ಟು ಉಳಿಸಿ’ ಬೀದಿ ನಾಟಕ ಪ್ರದರ್ಶನ ಎಲ್ಲವು ದಿನಚರಿಯಂತೆ ನಡೆಯಿತು. ಎಲ್ಲದಕ್ಕಿಂತ ವಿಶೇಷವಾಗಿ ಕಂಡಿದ್ದು ಮಾತ್ರ ಕೆಸರಲ್ಲೊಂದು ದಿನ.

Advertisement

ಗ್ರಾಮೀಣ ಭಾಗದ ಕ್ರೀಡೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಮಣ್ಣಿನ ಮಹತ್ವ ತಿಳಿಸಿದ್ದು ವಿಶೇಷ ಮತ್ತು ವಿಭಿನ್ನ. ಪ್ರತಿದಿನ ಉಪನ್ಯಾಸ ನೀಡಲು ಬರುವ ಸಂಪನ್ಮೂಲ ವ್ಯಕ್ತಿಗಳ ಬದುಕೇ ನಮಗೊಂದು ಸ್ಫೂರ್ತಿಯ ದೀಪ. ಸಾಧಕರ ಬದುಕಿನ ಸಾಧನೆ ಯುವ ಸಮುದಾಯಕ್ಕೆ ಮಾದರಿಯಾಗಬೇಕಿದೆ.

ಮೊಳಹಳ್ಳಿಯ ಸ. ಹಿ. ಪ್ರಾ. ಶಾಲೆ ಮತ್ತು ಅಲ್ಲಿನ ಸುತ್ತಮುತ್ತಲಿನ ಜನಸಾಮಾನ್ಯರ ಜನಮಾನಸದಲ್ಲಿ ಎಂದಿಗೂ ನೆನಪಿನಲ್ಲಿ ಅಚ್ಚಾಗಿರುವುದು ನಮ್ಮ ಕಾಲೇಜಿನ ಯಕ್ಷಗಾನ ತಂಡ ನೀಡಿರುವ “ಶಶಿಪ್ರಭಾ ಪರಿಣಯ’ ಯಕ್ಷಗಾನ ಪ್ರಸಂಗ. ಭಾಗವತಿಕೆ, ಮುಮ್ಮೇಳ, ಹಿಮ್ಮೇಳ, ವೇಷ ಎಲ್ಲವನ್ನೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ನಿರ್ವಹಿಸಿ ವೃತ್ತಿ ಕಲಾವಿದರಂತೆ ಪ್ರದರ್ಶನ ನೀಡಿರುವುದು ನಮ್ಮ ಹೆಮ್ಮೆ.

ಶಿಬಿರದ ಮೊದಲ ದಿನದ ನಮ್ಮ ಸಂಕುಚಿತ ಭಾವನೆ ಮತ್ತು ಕೊನೆಯ ದಿನದ ಭಾವನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಮನೆಯಲ್ಲಿ ಸ್ವಲ್ಪ ಬದಲಾವಣೆಯಾದರೆ ಸಹಿಸದ ನಾವು ಶಿಬಿರದಲ್ಲಿ ನಮ್ಮ ತಂಡದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಎಂದಿಗೂ ವೇದಿಕೆ ಹತ್ತದವರು ಅನಿವಾರ್ಯವಾಗಿ ಯಾವುದೋ ನೆಪದಲ್ಲಿ ಮೈಕ್‌ ಹಿಡಿದು ವೇದಿಕೆ ಹತ್ತಿದ್ದಾರೆ.

ಮನೆಯಲ್ಲಿ ಅಡುಗೆಮನೆ ಕಡೆ ಮುಖ ಮಾಡಿದ ವಿದ್ಯಾರ್ಥಿಗಳು ಶಿಬಿರದಲ್ಲಿ ಅಡುಗೆ ಭಟ್ಟರೊಂದಿಗೆ ಅಡುಗೆಗೆ ಸಹಾಯ ಮಾಡಿದ್ದಾರೆ. ಒಂದು ತಂಡವನ್ನು ಮುನ್ನಡೆಸುವುದು ಎಷ್ಟು ಕಷ್ಟ ಎಂದು ತಂಡದ ಜವಾಬ್ದಾರಿ ಹೊತ್ತ ನಾಯಕರಿಗೆ ಅನುಭವವಾಗಿದೆ. ಕೊನೆಯ ದಿನದಲ್ಲಿ ಅದೆಷ್ಟು ಬೇಗ ಈ ವಾರ್ಷಿಕ ಶಿಬಿರ ಮುಗಿಯಿತು ಅನಿಸಿದಂತು ಸತ್ಯ. ಆದರೆ ನಿಯಮದ ಪ್ರಕಾರ ಶಿಬಿರ ಮುಕ್ತಾಯಗೊಳಿಸಲೇಬೇಕಿತ್ತು.

ಒಟ್ಟಿನಲ್ಲಿ ಇಡೀ ವಾರ್ಷಿಕ ವಿಶೇಷ ಶಿಬಿರವು ನಮ್ಮ ಬದುಕಿನ ನೆನಪಿನ ಬುತ್ತಿಯಲ್ಲಿ ಸದಾ ಉಳಿಯುವಂತದ್ದು. ಮುಂದಿನ ವರ್ಷದ ವಿಶೇಷ ಶಿಬಿರದ ನಿರೀಕ್ಷೆಯಲ್ಲಿ…

-ಸುಜಯ ಶೆಟ್ಟಿ ಹಳ್ನಾಡು

ಡಾ| ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next