Advertisement
ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು, ಕನಕಮಜಲು ಯುವಕ ಮಂಡಲ ಇವುಗಳ ಸಹಯೋಗದಲ್ಲಿ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕನಕಮಜಲಿನ ಮುಗೇರು ಎಸ್ಟೇಟಿನ ಪ್ರಭಾಕರ ರಾವ್ ಮತ್ತು ದಿನೇಶ್ ರಾವ್ ಇವರ ಕೃಷಿ ಕ್ಷೇತ್ರದಲ್ಲಿ ಜಲ ಸಂರಕ್ಷಣೆ ಪ್ರಯುಕ್ತ ನೀರಿನ ಕಟ್ಟಗಳನ್ನು ನಿರ್ಮಿಸುವ ಕಾಯಕ ಮಂಗಳವಾರ ನಡೆಯಿತು.
ಪ್ರತಿ ವರ್ಷದ ನೀರಿನ ಕಟ್ಟಗಳ ನಿರ್ಮಾಣಕ್ಕೆ ಒತ್ತು ನೀಡುವ ಮುಗೇರು ಎಸ್ಟೇಟ್‌ನಲ್ಲಿ ಈ ಬಾರಿ ಆ ಕಾರ್ಯಕ್ಕೆ ಕನಕಮಜಲು ಯುವಕ ಮಂಡಲ ಜತೆ ಸೇರಿ ವಿದ್ಯಾರ್ಥಿಗಳು ಸಹಯೋಗ ನೀಡಿದರು. ಎನ್ನೆಸ್ಸೆಸ್‌ನ 39 ವಿದ್ಯಾರ್ಥಿಗಳು ಕಟ್ಟ ನಿರ್ಮಾಣದ ಕೆಲಸದಲ್ಲಿ ಭಾಗಿಯಾದರು. ನುರಿತ ಕೆಲ ಕೆಲಸಗಾರರ ಸಹಕಾರ ಪಡೆದು ಬೆಳಗ್ಗಿನಿಂದ ಸಂಜೆ ತನಕ ಈ ಕಾರ್ಯದಲ್ಲಿ ಕೈಜೋಡಿಸಿದರು. ಸಣ್ಣ ತೋಡಿಗೆ ಮರಳು ತುಂಬಿದ ಚೀಲ ಬಳಸಿ ಕಟ್ಟ ನಿರ್ಮಿಸಲಾಯಿತು. ಒಂದು ದಿನದಲ್ಲಿ ಎರಡು ಕಟ್ಟ ನಿರ್ಮಿಸಿ ನೀರು ಕೆಳಭಾಗಕ್ಕೆ ಹರಿಯದಂತೆ ತಡೆ ಒಡ್ಡು ನಿರ್ಮಿಸಲಾಯಿತು. ಈ ಮೂಲಕ ಮುಂದಿನ ಕೆಲವು ಸಮಯ ಇಲ್ಲಿ ನೀರು ನಿಂತು ಅಂತರ್ಜಲ ಸಂರಕ್ಷಣೆ ಸಾಧ್ಯವಾಗಲಿದೆ. ಕನಸು ಬಿತ್ತಿದ ಯುವಕ ಮಂಡಲ
ಕನಕಮಜಲು ಯುವಕ ಮಂಡಲ ನೀರಿನ ಸಂರಕ್ಷಣೆಯ ನಿಟ್ಟಿನಲ್ಲಿ ಕಳೆದ 15 ವರ್ಷಗಳಿಂದ ಗ್ರಾಮದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದೆ. 2004-05ರಲ್ಲಿ ಜಲ ತಜ್ಞ ಶ್ರೀಪಡ್ರೆ ಅವರು ಮಾಹಿತಿ ನೀಡುವ ಮೂಲಕ ಈ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಗ್ರಾಮದ ಬೇರೆ ಬೇರೆ ಭಾಗದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಆಸಕ್ತರ ಸಹಕಾರದೊಂದಿಗೆ ವರ್ಷಂಪ್ರತಿ ಒಂದು ಅಥವಾ ಎರಡು ಮಣ್ಣಿನ ಅಥವಾ ಮರಳು ಕಟ್ಟ ನಿರ್ಮಾಣಕ್ಕೆ ಕೈ ಜೋಡಿಸಿ ಇಡೀ ಗ್ರಾಮದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
Related Articles
Advertisement
ಯುವಕರಿಗೆ ಪ್ರೇರಣೆಯುವಕ ಮಂಡಲವು ಮುಗೇರು ಎಸ್ಟೇಟ್ ಸಹಕಾರದಲ್ಲಿ ಎನ್ನೆಸ್ಸೆಸ್ ವಿದ್ಯಾರ್ಥಿಗಳ ಜತೆಗೂಡಿ ನೀರಿನ ಕಟ್ಟ ನಿರ್ಮಿಸಿ ಜಲ ಸಂರಕ್ಷಣೆಗೆ ಪ್ರೋತ್ಸಾಹ ನೀಡಿದೆ. ಯುವ ಸಮುದಾಯವನ್ನು ಪ್ರೇರೇಪಿಸುವ ಪ್ರಯತ್ನ ಎನ್ನುತ್ತಾರೆ ಕನಕಮಜಲು ಯುವಕ ಮಂಡಲದ ಮಾಜಿ ಅಧ್ಯಕ್ಷ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ. ಒಳ್ಳೆಯ ಅನುಭವ
ವಿದ್ಯಾರ್ಥಿಗಳನ್ನು ನೀರಿನ ಸಂರಕ್ಷಣೆಯ ಪಾಠಕ್ಕೆ ಒಡ್ಡಿಕೊಳ್ಳುತ್ತಿರುವುದು ಇದು ಎರಡನೇ ವರ್ಷ. ಕಳೆದ ಬಾರಿಯೂ ಕನಕಮಜಲಿನ ಯುವಕ ಮಂಡಲದ ಸಹಕಾರ ಪಡೆದು ಇಂತಹ ನೀರಿನ ಕಟ್ಟ ನಿರ್ಮಾಣದಲ್ಲಿ ಪಾಲ್ಗೊಂಡಿದ್ದೇವೆ. ಎನ್ನೆಸ್ಸೆಸ್ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಅನುಭವ.
– ಧನರಾಜ್, ಎನ್ನೆಸ್ಸೆಸ್ ಕಾರ್ಯಕ್ರಮ ಸಂಯೋಜಕ, ಸುಳ್ಯ ಸ.ಪ್ರ.ದ. ಕಾಲೇಜು - ಕಿರಣ್ ಪ್ರಸಾದ್ ಕುಂಡಡ್ಕ