Advertisement
ಮಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 13 ವರ್ಷಗಳ ಕಾಲ ಮಠದಲ್ಲಿ ಪೀಠಾಧಿಪತಿಯಾಗಿದ್ದೇನೆ. ನಾನು ಎಂಎ ಪದವಿ ಪೂರೈಸಿ ಮಠಕ್ಕೆ ಬಂದ ಬಳಿಕ ಏನೂ ಕೆಲಸ ಮಾಡಲು ಬಿಡಲಿಲ್ಲ. ಎಲ್ಲ ಮಠಗಳಲ್ಲೂ ಆಂತರಿಕ ರಾಜಕೀಯ ಇರುತ್ತದೆ. ಆದರೆ ಈ ಮಠದಲ್ಲಿ ರಾಜಕೀಯ ಸಭೆಗಳು ನಡೆಯುತ್ತಿವೆ. ಇದನ್ನು ನಾನು ವಿರೋಧಿಸಿದ್ದಕ್ಕೆ ಇಲ್ಲಿನ ವ್ಯವಸ್ಥೆ, ನಮ್ಮ ಸಂಬಂಧಿಗಳು ನನ್ನ ಕೈ ಕಟ್ಟಿ ಹಾಕುವಂತೆ ಮಾಡಿದ್ದರು ಎಂದರು.
Related Articles
Advertisement
• ನಾನೆಲ್ಲೂ ಓಡಿ ಹೋಗಿಲ್ಲ, ಮದುವೆನೂ ಆಗಿಲ್ಲ
• ಸಂಸಾರಿಯಾಗಿ ಸ್ವಾಮೀಜಿಯಾಗಲು ಸಿದ್ಧ
• ಅಮಾವಾಸ್ಯೆ ದಿನ ಉಜ್ಜಯಿನಿ ಶ್ರೀಗಳಿಗೆ ಅಧಿಕೃತ ರಾಜೀನಾಮೆ
ಈ ಮಠದಲ್ಲಿ ನನಗೆ ಕೇವಲ ಆಶೀರ್ವಾದ ಮಾಡಿ ಜನರಿಂದ ಬರುವ ಆದಾಯವನ್ನು ಈ ಮಠದ ಸಮಿತಿಗೆ ಒಪ್ಪಿಸಬೇಕಿತ್ತು. ಖರ್ಚು ಮಾಡಲು ನನಗೆ ಸ್ವಲ್ಪವೂ ಅವಕಾಶ ಇರಲಿಲ್ಲ. ಮಠದಲ್ಲಿ ಸಮಿತಿಯಿದ್ದು ಆ ಸಮಿತಿಗೆ ನಮ್ಮದೇ ಕುಟುಂಬದ 8 ಜನರಿದ್ದರು. ಅವರೇ ಅಂತಿಮ ನಿರ್ಣಯ ಕೈಗೊಳ್ಳುತ್ತಿದ್ದರು. ಇದಕ್ಕೆ ನಾನು ವಿರೋಧ ಮಾಡಿದ್ದಕ್ಕೆ ನಿಮಗೆ ಏನೂ ಅಧಿಕಾರವಿಲ್ಲ. ನಿಮ್ಮನ್ನು ಸ್ವಾಮೀಜಿಯನ್ನಾಗಿ ಮಾಡಿದ್ದೇವೆ. ಪೂಜೆ ಮಾಡಿಕೊಂಡಿರಿ ಎನ್ನುತ್ತಿದ್ದರು. ಇದರಿಂದ ಬೇಸತ್ತು ಪೀಠ ಬಿಟ್ಟು ಹೋಗಿದ್ದೆ ಎಂದರು.
ಆಸ್ತಿಯ ಮೇಲಿನ ಕಣ್ಣಿಟ್ಟಿದ್ದಾರೆ : ಮಠದಲ್ಲಿ ಆಸ್ತಿ ವಿವಾದವೇ ಇದೆಲ್ಲದಕ್ಕೂ ಕಾರಣ. 108 ಎಕರೆ ಆಸ್ತಿ ಮಠದ ವ್ಯಾಪ್ತಿಗೆ ಬರುತ್ತದೆ. ಆದರೆ ನಮ್ಮ ಸಂಬಂಧಿಗಳಾದ ಗುರುಮೂರ್ತಿ ಸ್ವಾಮಿ ಸೇರಿ ಇತರರು ಆ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಕೊಪ್ಪಳದಲ್ಲಿನ ಕೋಟ್ಯಂತರ ರೂ. ಆಸ್ತಿ ಬಗ್ಗೆಯೂ ಅವರಿಗೆ ಒಲವಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಟೀಕೆ ಮಾಡಿದರು. ಹಿಂದಿನ ದಾಖಲೆ ಪ್ರಕಾರ ಮಠದ ಪಟ್ಟಾಧಿಕಾರಿಗೆ ಎಲ್ಲವೂ ಹಿಡಿತದಲ್ಲಿರಬೇಕು. ಆದರೆ ನನಗೆ ಅಧಿಕಾರವೇ ಇರಲ್ಲಿಲ್ಲ. ಸ್ವತಃ ನಮ್ಮ ಕಾಲೇಜಿನಲ್ಲಿಯೇ ಪಾಠ ಮಾಡಲು ನನಗೆ ಅವಕಾಶ ಕಲ್ಪಿಸಲಿಲ್ಲ. ಬೇಸತ್ತು ಮುಂಡರಗಿ ಕಾಲೇಜಿಗೆ ತೆರಳಿ ಅಲ್ಲಿ ಬೋಧನೆ ಮಾಡುತ್ತಿದ್ದೆ ಎಂದರು.
ನಾನಿನ್ನೂ ಮದುವೆ ಆಗಿಲ್ಲ : ಮುಂಡರಗಿ ಕಾಲೇಜಿನಲ್ಲಿ ಯುವತಿಯೋರ್ವಳು ನನ್ನನ್ನು ಪ್ರೀತಿಸಿದಳು. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಂಡಿರಲಿಲ್ಲ. ಕೊನೆಯ ಹಂತಕ್ಕೆ ನಾನು ಸಾಯುತ್ತೇನೆ ಎಂದಳು. 2-3 ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದಳು. ಇದರಿಂದ ನಾನು ಆತಂಕಕ್ಕೆ ಒಳಗಾಗಿದ್ದೆ. ಇನ್ನು ಮಠದಲ್ಲಿಯೂ ನನಗೆ ಪೂರ್ಣ ಅಧಿಕಾರ ನೀಡಿಲ್ಲ. ಯಾವುದೇ ಜಾತ್ರೆ, ಸಭೆ, ಸಮಾರಂಭ ನಡೆಸಲೂ ನಮ್ಮ ಕುಟುಂಬ ಸದಸ್ಯರಿಂದಲೇ ನೂರೆಂಟು ಸಮಸ್ಯೆ ಎದುರಿಸಬೇಕಾಯಿತು. ಇತ್ತ ಯುವತಿ ಆತ್ಮಹತ್ಯೆ ಮಾತನ್ನಾಡಿದ್ದಕ್ಕೂ ಬೇಸತ್ತಿದ್ದೆ. ಆಕೆಯೂ ಶಿವಮೊಗ್ಗಕ್ಕೆ ತೆರಳಿ ನನ್ನೊಂದಿಗೆ ಬರುವ ಮಾತನ್ನಾಡಿದ್ದಳು. ಕೊನೆಗೆ ಬೇರೆ ದಾರಿಯಿಲ್ಲದೇ ಮನೆಯವರಿಗೆ ತಿಳಿಸಿ ಮೈಸೂರಿಗೆ ತೆರಳಿದ್ದೆ ಎಂದರು.
ಒತ್ತಡದ ಮೂಲಕ ನನ್ನಿಂದ ಸಹಿ: ಯುವತಿಯನ್ನು ಅವರ ಮನೆಗೆ ಒಪ್ಪಿಸುವ ಕುರಿತು ನಮ್ಮ ಮಠದ ಕುಟುಂಬಸ್ಥರು ನನಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅದಕ್ಕೆ ಒಪ್ಪಿದ ನಾನು ಅಲ್ಲಿಂದ ಮೈಸೂರಿಗೆ ತೆರಳಿದೆ. ಆದರೆ ನಮ್ಮವರು ಆಕೆಯನ್ನು ಮಠದಲ್ಲಿ 2 ದಿನ ಇಟ್ಟುಕೊಂಡು ಏನೇನೋ ಹೇಳಿದ್ದಾರೆ. ನನ್ನ ಬಗ್ಗೆ ಮಾಧ್ಯಮದಲ್ಲಿ ಅಪಪ್ರಚಾರ ಮಾಡಿದ್ದಾರೆ. ಸ್ವಾಮಿ ಯುವತಿಯೊಂದಿಗೆ ಓಡಿ ಹೋದ ಎನ್ನುವಂತೆ ಬಿಂಬಿಸಿದ್ದಾರೆ. ಅಂತಹ ಕೆಲಸ ನಾನು ಮಾಡಿಲ್ಲ. ಅವರ ಕುತಂತ್ರದಿಂದ ಇಷ್ಟೆಲ್ಲ ಆಗಿದೆ. ಗದಗಕ್ಕೆ ನನ್ನನ್ನು ಕರೆದುಕೊಂಡು ಹೋಗಿ ಬಲವಂತವಾಗಿ ರಾಜೀನಾಮೆಗೆ ಸಹಿ ಮಾಡಿಸಿದ್ದಾರೆ. ಆದರೆ ಅದು ಅಧಿಕೃತ ರಾಜೀನಾಮೆಯಲ್ಲ. ಇದೇ ಅಮಾವಾಸ್ಯೆ ದಿನದಂದು ರಾಜೀನಾಮೆ ಸಲ್ಲಿಸಿ ಅವರ ಸಲಹೆ ಪಡೆಯುತ್ತೇನೆ ಎಂದರು.
ಮಠಕ್ಕೆ ನಮ್ಮ ಕುಟುಂಬಸ್ಥರು ಬೇಡ :ಸದ್ಯ ಮಠಕ್ಕೆ ನಮ್ಮ ಸಂಬಂಧಿಗಳ ವಟುವನ್ನು ನೇಮಕ ಮಾಡಲು ಸಿದ್ಧತೆ ನಡೆಸಿದ್ದಾರೆ. ನನಗೆ ಆದ ನೋವನ್ನು ಅಳವಂಡಿ ಸದ್ಭಕ್ತರಿಗೆ ತಿಳಿಸಬೇಕು. ಸತ್ಯ ಏನೆಂದು ಜನರಿಗೆ ಹೇಳಬೇಕೆಂಬ ನಿರ್ಧಾರ ಮಾಡಿ ಮಠಕ್ಕೆ ಆಗಮಿಸಿದ್ದೇನೆ. ಅಲ್ಲದೇ ಈ ಮಠಕ್ಕೆ ನಮ್ಮ ಇನಾಮದಾರ್ ವಂಶಸ್ಥರು ಯಾರೂ ವಟು ಆಗುವುದು ಬೇಡ. ಅವರಿಗೂ ಇದೇ ರೀತಿ ಆಸ್ತಿ ಸಂಬಂಧ ಒತ್ತಡ ಹಾಕಿ ಅವರನ್ನು ಕೈಗೊಂಬೆಯನ್ನಾಗಿ ಮಾಡಿಕೊಳ್ಳುತ್ತಾರೆ. ಜನರು ಹಾಗೂ ಉಜ್ಜಯಿನಿ ಶ್ರೀಗಳು ಸೂಚಿಸಿದ ವಟುವನ್ನು ನೇಮಕ ಮಾಡಲಿ. ನಮ್ಮ ಪೂರ್ವದ ಶ್ರೀಗಳು ಸಂಸಾರಸ್ಥರಾಗಿದ್ದರು. ಒಂದು ವೇಳೆ ಭಕ್ತರು, ಉಜ್ಜಯಿನಿ ಶ್ರೀಗಳು ಒಮ್ಮತ ಸೂಚಿಸಿದರೆ, ನಮ್ಮವರು ಮಠದ ಆಸ್ತಿ ತಂಟೆಗೆ ಬಾರದಿದ್ದರೆ ಸ್ವಾಮೀಜಿಯಾಗಿ ಮುಂದುವರೆಯಲು ಸಿದ್ಧನಿದ್ದೇನೆ. ಇಲ್ಲವಾದರೆ ನನ್ನನ್ನು ನನ್ನಷ್ಟಕ್ಕೆ ಬಿಟ್ಟು ಬಿಡಲಿ ಎಂದರು.