Advertisement
ಎನ್‌ಎಸ್‌ಜಿಯ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಅಧಿಕಾರಿಗಳು ಏರ್‌ಪೋರ್ಟ್‌ನಲ್ಲಿ ಬಾಂಬ್ ಇರಿಸಲಾಗಿದ್ದ ಸ್ಥಳಕ್ಕೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕೆಂಜಾರು ಮೈದಾನಕ್ಕೆ ತೆರಳಿ ಅಲ್ಲಿ ಪರಿಶೀಲಿಸಿದರು. ಸ್ಥಳದಲ್ಲಿದ್ದ ಕೆಲವು ಸ್ಫೋಟಕ ಅವಶೇಷಗಳನ್ನು ಸಂಗ್ರಹಿಸಿ ತನಿಖೆಗಾಗಿ ಕೊಂಡೊಯ್ದಿದ್ದಾರೆ. ಶಂಕಿತ ವ್ಯಕ್ತಿ ಇನ್ನೊಂದು ಬ್ಯಾಗ್ ಇರಿ ಸಿದ್ದ ಎನ್ನಲಾದ ಸೆಲೂನು ಇರುವ ಕಟ್ಟಡಕ್ಕೆ ಆ ಬಳಿಕ ಭೇಟಿ ನೀಡಿದ ಅಧಿಕಾರಿಗಳು ಅನಂತರ ಬಜಪೆ ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದರು.
ಬಾಂಬ್ ಇರಿಸಿದ ವ್ಯಕ್ತಿ ಸಂಚರಿಸಿದ್ದ ಆಟೋರಿಕ್ಷಾ ಮತ್ತು ಖಾಸಗಿ ಬಸ್‌ಗಳ ಚಾಲಕ, ನಿರ್ವಾಹಕನನ್ನು ಪೊಲೀಸ್ ತನಿಖಾ ತಂಡ ತೀವ್ರ ವಿಚಾರಣೆಗೊಳ ಪಡಿಸಿದೆ. ಆದರೆ “ರಿಕ್ಷಾ ಚಾಲಕ ಕೆಂಜಾರು ರಿಕ್ಷಾ ಪಾರ್ಕಿಂಗ್‌ನಲ್ಲಿದ್ದ ರಿಕ್ಷಾದವನಲ್ಲ’ ಎಂದು ಸ್ಥಳೀಯರು ತಿಳಿಸಿದ್ದಾರೆ. “ಕೆಂಜಾರು ವ್ಯಾಪ್ತಿಯಲ್ಲಿ ಗ್ರಾಮಾಂತರ ರಿಕ್ಷಾದವರು ಮಾತ್ರ ಸಂಚರಿಸುತ್ತಿದ್ದು, ಶಂಕಿತ ವ್ಯಕ್ತಿ ಸಂಚರಿಸಿದ್ದು ವಲಯ ಒಂದು ವ್ಯಾಪ್ತಿಯ ರಿಕ್ಷಾ ಆಗಿದೆ. ಹೀಗಾಗಿ ಈ ಬಗ್ಗೆ ನಮಗೇನೂ ಗೊತ್ತಿಲ್ಲ’ ಅನ್ನುತ್ತಾರೆ ಅಲ್ಲಿಯ ಹಿರಿಯ ರಿಕ್ಷಾ ಚಾಲಕರೋರ್ವರು. ಶಂಕಿತ ವ್ಯಕ್ತಿ ವಿಮಾನ ನಿಲ್ದಾಣಕ್ಕೆ ಸೋಮವಾರ ಹೋಗುವ ಮುನ್ನ ಕೆಂಜಾರಿನ ಸೆಲೂನ್‌ವೊಂದಕ್ಕೆ ತೆರಳಿ ರುವ ಮಾಹಿತಿಯಿದ್ದು, ಈ ಸಂಬಂಧ ಸೆಲೂನ್ ಮಾಲಕನನ್ನು ತನಿಖಾ ತಂಡ ವಿಚಾರಣೆ ನಡೆಸಿದೆ. ಕಟ್ಟಡದ ಸಿಸಿಟಿವಿಯ ಎಲ್ಲ ದಾಖಲೆಗಳನ್ನು ಸಂಗ್ರಹಿಸಿರುವ ಪೊಲೀಸರು ಶಂಕಿತ ವ್ಯಕ್ತಿಯ ಚಲನವಲನಗಳ ದೃಶ್ಯಗಳನ್ನು ಕಲೆಹಾಕಿದ್ದಾರೆ.