ಗುರುಗ್ರಾಮ್: ಕ್ಷುಲ್ಲಕ ಕಾರಣಕ್ಕಾಗಿ ನಾಲ್ವರು ಎನ್ ಎಸ್ ಜಿ ಕಮಾಂಡೋ ಮೇಲೆ ಹಲ್ಲೆ ನಡೆಸಿರುವ ಘಟನೆ ದೆಹಲಿಯ ಗುರುಗ್ರಾಮ್ ನಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಮೇಕಪ್ ಮ್ಯಾನ್ ಕೈಚಳಕ: ನಟಿಯ ವೀಡಿಯೋ ಬ್ಲ್ಯಾಕ್‌ಮೇಲ್: ಬಂಧನ
ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ದೂರಿನ ಪ್ರಕಾರ, ಉತ್ತರಪ್ರದೇಶ ಮೂಲದ ಚುನ್ನು ಅನ್ಸಾರಿಯನ್ನು ಮನೇಸರ್ ನ ರಾಷ್ಟ್ರೀಯ ಭದ್ರತಾ ಸಿಬಂದಿ (ಎನ್ ಎಸ್ ಜಿ) ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ ಸಂಜೆ ಕೆಲವು ಆಹಾರ ಪದಾರ್ಥ ಖರೀದಿಸಲು ಸೆಕ್ಟರ್ 80ರ ಜನಪ್ರಿಯ ಫಾಸ್ಟ್ ಫುಡ್ ಔಟ್ ಲೆಟ್ ಗೆ ಹೋಗಿದ್ದರು.
ಔಟ್ ಲೆಟ್ ನಿಂದ ಹೊರಬಂದಾಗ ನಾಲ್ವರು ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದು, ಈ ವೇಳೆ ಅನ್ಸಾರಿ ಕಾರನ್ನು ತೆಗೆಯುವಂತೆ ಕೇಳಿಕೊಂಡಿದ್ದರು. ಆದರೆ ಪಾನಮತ್ತರಾಗಿದ್ದ ನಾಲ್ವರು ಅನ್ಸಾರಿ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ತೆರಳುವ ಮುನ್ನ ನಾಲ್ವರು ಎನ್ ಎಸ್ ಜಿ ಕಮಾಂಡೋ ಅನ್ಸಾರಿಯನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿರುವುದಾಗಿ ವರದಿ ತಿಳಿಸಿದೆ. ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆ 323 ಮತ್ತು ಸೆಕ್ಷನ್ 506ರ ಅನ್ವಯ ಎಫ್ ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.