ಬದಿಯಡ್ಕ: ಭಾರತದ ಸಂಸ್ಕೃತಿಯ ನೆರಳಾಗಿರುವ ಭರತನಾಟ್ಯದಂತಹ ಕಠಿನ ವಿದ್ಯೆಯನ್ನು ಸಾಧನೆಯ ತಪಸ್ಸಿನ ಮೂಲಕ ಒಲಿಸಿಕೊಂಡು ಕಳೆದ ಮೂರು ದಶಕಗಳಿಂದ ಕಲಾಸೇವೆಯಲ್ಲಿ ನಿರತರಾಗಿರುವ ಗುರು ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಅವರ ಶಿಷ್ಯ ವೃಂದದಿಂದ ದೇಲಂಪಾಡಿ ಉಮಾಮಹೇಶ್ವರ ಮಹಾಗಣಪತಿ ಶಾಸ್ತಾರ ದೇವಸ್ಥಾನದಲ್ಲಿ ನೃತ್ಯದೀಪ ಭರತನಾಟ್ಯ ಜರುಗಿತು. ಜಗತ್ತು ಶಾಸ್ತ್ರೀಯ ನೃತ್ಯ ಶೈಲಿಯಿಂದ ಸಂಪನ್ನವಾಗಿದೆ. ಆದರೆ ಆಧುನಿಕ ನೃತ್ಯ ಪ್ರಕಾರಗಳೆಡೆಗೆ ಜನರು ಆಕರ್ಷಿತರಾಗುತ್ತಿರುವ ಈ ಕಾಲಘಟ್ಟದಲ್ಲೂ ಭರತನಾಟ್ಯ ತನ್ನ ಮಹತ್ವವನ್ನು ಉಳಿಸಿಕೊಂಡಿದೆ ಎನ್ನುವುದಕ್ಕೆ ಸಾಕ್ಷಿ ನೃತ್ಯದೀಪ. ಭರತನಾಟ್ಯ, ಕೂಚುಪುಡಿ, ಮೋಹಿನಿಯಾಟ್ಟಂಗಳಂತಹ ಶಾಸ್ತ್ರೀಯ ನೃತ್ಯರೂಪಗಳನ್ನು ಅಳವಡಿಸಿಕೊಂಡು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಬಲ್ಲ ವಿಶಿಷ್ಟವಾದ, ಅದ್ಭುತವಾದ ನೃತ್ಯ ಸಂಭ್ರಮವನ್ನು ಉಣಬಡಿಸಿದ ಕಾರ್ಯಕ್ರಮವು ದೀಪಾ ದಿವ್ಯ ಸಹೋದರಿಯರ ನೃತ್ಯದೊಂದಿಗೆ ಪ್ರಾರಂಭವಾಗಿ ಮುಂದೆ ನಾಟ್ಯನಿಲಯಂನ ಪ್ರಬುದ್ಧ ಕಲಾವಿದರಾದ ಭಾಗ್ಯಶ್ರೀ, ಮಹಿಮಾ ಕಾಸರಗೋಡು ಮುಂತಾದ ನುರಿತ ನರ್ತಕಿಯರ ನರ್ತನದ ಭಾವರಸಧಾರೆಯಿಂದ ಶ್ರೀಮಂತವಾಯಿತು.
ನಾಟ್ಯನಿಲಯಂನ ಪ್ರತಿಭಾನ್ವಿತೆ, ಕಲಾಸಂಪನ್ನೆ ಸಾತ್ವಿಕಾಕೃಷ್ಣ ಮಂಜೇಶ್ವರ ಅವರ ಕೂಚುಪುಡಿ ಕಲಾವಿದೆಯ ಕಲಾನೈಪುಣ್ಯತೆಯನ್ನು ತೆರೆದಿಡುವಲ್ಲಿ ಯಶಸ್ವಿಯಾಯಿತು. ಶಿರದಲ್ಲಿ ಮೂರು ಕಲಶಗಳು, ಪಾದ ಕಂಚಿನ ಹರಿವಾಣದಲ್ಲಿರಿಸಿ ನರ್ತಿಸಿದ ರೀತಿ ಕಲಾರಸಿಕರನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಸ್ವಾತಿಲಕ್ಷ್ಮೀ ಪಿಲಿಕೂಡ್ಲು ಅವರ ಕೃಷ್ಣಾ ನೀ ಬೇಗನೆ ಬಾರೋ ಭರತನೃತ್ಯವು ಭಾವನೆಗಳ ಅಭಿವ್ಯಕ್ತಿ ಹಾಗೂ ಮಮತೆಯ ಲಯದಿಂದ ಪ್ರೇಕ್ಷಕರನ್ನು ಮೈಮರೆಯುವಂತೆ ಮಾಡಿತು. ದಿವ್ಯ ಹಾಗೂ ಬಳಗದವರಿಂದ ಭರತ್ ಕೃಷ್ಣ, ಕಿರಣ್ ಕುಮಾರ್, ಮಧುರಾ ಭಟ್ ಮುಂತಾದ ಕಲಾವಿದರೊಂದಿಗೆ ಸಂಚಾರಿ ತಂಡದ ನೃತ್ಯಪ್ರದರ್ಶನವು ಸೇರಿದಾಗ ಅಲ್ಲೊಂದು ನೃತ್ಯಲೋಕ ಸೃಷ್ಟಿಯಾಯಿತೆಂದರೆ ಅತಿಶಯೋಕ್ತಿಯಲ್ಲ. ಗುರುಬಾಲಕೃಷ್ಣ ಮಂಜೇಶ್ವರ ಅವರೊಂದಿಗೆ ಹಿಮ್ಮೇಳದಲ್ಲಿ ಉಣ್ಣಿಕೃಷ್ಣನ್ ವೀಣಾಲಯಂ, ಉಣ್ಣಿಕೃಷ್ಣನ್ ನೀಲೇಶ್ವರಂ, ಗಡಿನಾಡ ಕೋಗಿಲೆ ವಿಠಲ ಶೆಟ್ಟಿ, ಸುರೇಶ್ ಕಾಂಞಂಗಾಡ್, ಕಣ್ಣನ್, ಬಾಲಕೃಷ್ಣನ್, ಕಿರಣ್ ಮಾಸ್ಟರ್, ಶರ್ಮಿಳಾ ಬಾಲಕೃಷ್ಣ ಶ್ರೀಕಲಾ ಸತ್ಯಶಂಕರ ಮೊದಲಾದವರು ಸಹಕರಿಸಿದರು
ಚಿತ್ರ:- ಫೋಕ್ಸ್ ಸ್ಟಾರ್ ಸ್ಟುಡಿಯೋ ಬದಿಯಡ್ಕ