Advertisement

ಎನ್‌.ಆರ್‌.ಪುರಕ್ಕಿಲ್ಲ ನೇರ ಸಂಪರ್ಕ; ಸಂಚಾರ ದುಸ್ತರ

11:44 AM Apr 26, 2019 | Naveen |

ಎನ್‌.ಆರ್‌. ಪುರ: ಸ್ವಾತಂತ್ರ್ಯ ಪೂರ್ವದಲ್ಲೇ ಇಂದಿನ ಆಧುನಿಕ ನಗರಗಳಲ್ಲಿರುವ ಅತ್ಯಾವಶ್ಯಕ ಮೂಲ ಸೌಕರ್ಯಗಳನ್ನು ಹೊಂದಿ ಪ್ರಮುಖ ಕೇಂದ್ರಗಳಿಗೆ ಹತ್ತಿರದ ಸಂಪರ್ಕ ಹೊಂದಿದ್ದ ತಾಲೂಕು ಕೇಂದ್ರ ಕಾಲಾನಂತರದಲ್ಲಿ ನಿರ್ಮಾಣವಾದ ಭದ್ರಾ ಅಣೆಕಟ್ಟೆಯಿಂದಾಗಿ ಸೌಲಭ್ಯಗಳನ್ನು ಕಳೆದು ಕೊಳ್ಳಬೇಕಾಯಿತು. ಇದರಿಂದಾಗಿ ಜಿಲ್ಲಾ ಕೇಂದ್ರವೂ ಸೇರಿದಂತೆ ಅಕ್ಕಪಕ್ಕದ ಊರುಗಳ ಸಂಪರ್ಕ ಕಳೆದು ಕೊಂಡು ಸುತ್ತು ಬಳಸಿಹೋಗುವ ಸ್ಥಿತಿ ನಿರ್ಮಾಣವಾಯಿತು.

Advertisement

ಈ ಹಿಂದೆ ನರಸಿಂಹರಾಜಪುರ ಎಡೆಹಳ್ಳಿಯಾಗಿದ್ದಾಗ ಲಕ್ಕವಳ್ಳಿ ತಾಲೂಕಿನ ಪ್ರಮುಖ ಭಾಗವಾಗಿತ್ತು. 1897ರವರೆಗೂ ಎಡೆಹಳ್ಳಿ ಉಪ ತಾಲೂಕಾಗಿತ್ತು. ಪ್ರಮುಖವಾಗಿ ಭದ್ರಾ ಅಣೆಕಟ್ಟನ್ನು ನಿರ್ಮಾಣ ಮಾಡುವ ಬದಲು ಜಿಲ್ಲಾ ಕೇಂದ್ರಕ್ಕೆ 55 ಕಿ.ಮೀ. ಇತ್ತು. ಪ್ರಸ್ತುತ 96 ಕಿ.ಮೀ. ದೂರ ಸುತ್ತುವರಿದು ಹೋಗಬೇಕಿದೆ. ಶಿವಮೊಗ್ಗಕ್ಕೆ 28 ಕಿ.ಮೀ. ಆಗುತ್ತಿತ್ತು. ಈಗ 55 ಕಿ.ಮೀ ಸುತ್ತಿ ಬಳಸಿ ಹೋಗ ಬೇಕಾಗಿದೆ. ಲಕ್ಕವಳ್ಳಿಗೆ 18 ಕಿ.ಮೀ. ಆಗುತ್ತಿತ್ತು. ಪ್ರಸ್ತುತ 48 ಕಿ.ಮೀ., ತರೀಕೆರೆಗೆ 36 ಕಿ.ಮೀ ಆಗುತ್ತಿತ್ತು. ಪ್ರಸ್ತುತ 68 ಕಿ.ಮೀ ಸುತ್ತಿ ಬಳಸಿ ಹೋಗುವ ಸ್ಥಿತಿ ಇದೆ.

ಕೆಲವು ಭಾಗಗಳಿಗೆ ಅದರಲ್ಲೂ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೆ ತಾಲೂಕಿನ ಕೂಸಗಲ್ ಗ್ರಾಮದ ಮಾರ್ಗವಾಗಿ ತೆರಳುವ ರಸ್ತೆಯನ್ನು ಭದ್ರಾನದಿಗೆ ಸೇತುವೆ ನಿರ್ಮಿಸುವ ಮೂಲಕ ಪುನರ್‌ ಅಭಿವೃದ್ಧಿಪಡಿಸುವಂತೆ ತಾಲೂಕಿನ ಜನರು ಆ ಕಾಲದಲ್ಲಿಯೇ ಜಿಲ್ಲೆಯನ್ನು ಪ್ರತಿನಿಧಿಸಿ ಲೋಕಸಭಾ ಚುನಾವಣೆ ಎದುರಿಸಿದ್ದ ಮಾಜಿ ಪ್ರಧಾನಿ ದಿ| ಇಂದಿರಾಗಾಂಧಿ ಅವರಿಗೂ ಮನವಿ ಸಲ್ಲಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಈ ಭಾಗದ ಜನರ ಮನವಿಗೆ ಸ್ಪಂದಿಸಿದ ಸರ್ಕಾರ 1978-79ರಲ್ಲಿ ಸುಮಾರು 33.70 ಲಕ್ಷ ರೂ. ಮುಳುಗಡೆ ಪ್ರದೇಶದ ಅಭಿವೃದ್ಧಿಗೆ ಬಿಡುಗಡೆ ಮಾಡಿತ್ತು, ಆದರೆ ಹತ್ತಿರದ ರಸ್ತೆ ನಿರ್ಮಾಣದ ಕನಸು ನನಸಾಗದೆ ಹೋಯಿತು. ಒಂದು ವೇಳೆಗೆ ಹತ್ತಿರದ ರಸ್ತೆ ಮಾರ್ಗ ನಿರ್ಮಾಣ ಮಾಡಿದ್ದರೆ ದೂರ, ಸಮಯ, ಇಂಧನ ಎಲ್ಲವೂ ಸಹ ಉಳಿತಾಯವಾಗುತ್ತಿತ್ತು.

ಜಲಮಾರ್ಗ ನಿರ್ಮಾಣಕ್ಕೆ ಮನವಿ: ನರಸಿಂಹರಾಜಪುರದಿಂದ ಲಕ್ಕವಳ್ಳಿಯವರೆಗೆ ಭದ್ರಾಹಿನ್ನೀರಿನಲ್ಲಿ ಜಲ ಮಾರ್ಗ (ಲಾಂಚ್) ಒದಗಿಸಲು ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನಾಭಟ್ಟಾರಕ ಸ್ವಾಮೀಜಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯವರಿಗೆ ಪತ್ರ ಬರೆದಿದ್ದರು. ಪ್ರಕೃತಿ ಸಂಪತ್ತನ್ನು ಹೊಂದಿರುವ ತಾಲೂಕು ಕೇಂದ್ರ 1959-62ರ ಅವಧಿಯಲ್ಲಿ ಜಲಾವೃತವಾಗಿರುವುದರಿಂದ ರೈಲು ಸಂಪರ್ಕ ಕಡಿತಗೊಂಡಿದೆ.

ಮೆಣಸೂರಿನ ಭದ್ರಾಹಿನ್ನೀರಿನ ಪ್ರದೇಶದಿಂದ ಲಕ್ಕವಳ್ಳಿಗೆ ಲಾಂಚ್ ವ್ಯವಸ್ಥೆ ಕಲ್ಪಿಸಿಕೊಟ್ಟರೆ ತಾಲೂಕಿನ ಗತವೈಭವ ಮರಳಿ ಬರುತ್ತದೆ. ಅಲ್ಲದೆ ಪ್ರಕೃತಿ ಸೌಂದರ್ಯ ಸವಿಯುವ ಅವಕಾಶವೂ ಸಹ ಜನರಿಗೆ ಲಭಿಸುತ್ತದೆ. ಮಲೆನಾಡಿನ ಶ್ರದ್ಧಾ ಕೇಂದ್ರಗಳಾದ ಸಿಂಹನಗದ್ದೆ ಬಸ್ತಿಮಠ, ಬಾಳೆಹೊನ್ನೂರಿನ ರಂಭಾಪುರಿ ಪೀಠ, ಶೃಂಗೇರಿಯ ಶಾರದ ಪೀಠ, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯ ಮುಂತಾದ ಸ್ಥಳಗಳಿಗೆ ಭೇಟಿ ನೀಡುವವರಿಗೂ ಹತ್ತಿರದ ಮಾರ್ಗವಾಗಲಿದೆ ಎಂದು ಮನವಿ ಸಲ್ಲಿಸಿದ್ದರು. ಆದರೆ. ಇದು ಇನ್ನೂ ಸಾಕಾರಗೊಂಡಿಲ್ಲ.

Advertisement

ಸರ್ಕಾರದ ಯೋಜನೆಗಳಿಂದಾಗಿ ಮಲೆನಾಡು ಅಭಿವೃದ್ಧಿ ಹೊಂದುವುದರ ಬದಲು ಕರಗುತ್ತಲೇ ಬರುತ್ತಿದೆ ಎಂಬ ಮಾತು ರಾಜಕೀಯವಲಯದಲ್ಲಿ ಕೇಳುಬರುತ್ತಿದೆ. ಈಗಲಾದರೂ ಜನಪ್ರತಿನಿಧಿಗಳು ತಮ್ಮ ಜವಾಬ್ಧಾರಿ ಅರಿತು ಜಲಮಾರ್ಗ(ಲಾಂಚ್ ಸೌಲಭ್ಯ) ಅಭಿವೃದ್ಧಿಗೆ ಶ್ರಮಿಸಬೇಕೆಂಬುದು ನಾಗರಿಕರ ಒತ್ತಾಸೆಯಾಗಿದೆ.

ಜಲಮಾರ್ಗಕ್ಕೆ ಆದ್ಯತೆ ನೀಡಿ
ನೇರ ರಸ್ತೆ ಸಾರಿಗೆಯೂ ಇಲ್ಲದೆ ಲಕ್ಕವಳ್ಳಿ ಹಾಗೂ ತರೀಕೆರೆ ಊರುಗಳಿಗೆ ಸುತ್ತಿಬಳಸಿ ಹೋಗಬೇಕಾಗಿದೆ. ಎನ್‌.ಆರ್‌.ಪುರ ದಿಂದ ಲಕ್ಕವಳ್ಳಿ, ತರೀಕೆರೆ, ಅರಸಿಕೆರೆ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸುವುದಾದರೆ ತಾಲೂಕು ಕೇಂದ್ರದಿಂದ ಲಕ್ಕವಳ್ಳಿಗೆ 48 ಕಿ.ಮೀ ಹಾಗೂ ತರೀಕರೆಗೆ 68 ಕಿ.ಮೀ ಆಗುತ್ತದೆ. ಜಲಮಾರ್ಗ ಅಭಿವೃದ್ಧಿಪಡಿಸಿದರೆ ಲಕ್ಕವಳ್ಳಿಗೆ ಕೇವಲ 14 ಕಿ.ಮೀ ಹಾಗೂ ತರೀಕೆರೆಗೆ 26 ಕಿ.ಮೀ.ನಲ್ಲಿ ತಲುಪಬಹುದೆಂದು ಸಮೀಕ್ಷೆ ಮೂಲಕ ತಿಳಿದು ಬಂದಿದೆ.

ಪ್ರಶಾಂತ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next