ಎನ್.ಆರ್.ಪುರ: ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪಡಿತರದಾರರಿಗೆ ಎರಡು ತಿಂಗಳ ಪಡಿತರವನ್ನು ಒಮ್ಮೆಲೆ ವಿತರಿಸುತ್ತಿದ್ದು, ಪಡಿತರದಾರರೇನಾದರೂ ಅಕ್ಕಿ ಮಾರಾಟ ಮಾಡಿದರೆ ಅಂತಹ ಪಡಿತರದಾರರ ಕಾರ್ಡನ್ನು ರದ್ದು ಪಡಿಸಲು ಮುಂದಾಗುವಂತೆ ತಹಶೀಲ್ದಾರ್ ಎಚ್.ಎಸ್.ಪರಮೇಶ್‌ಗೆ ಎಸಿ ರೇಣುಕಾಪ್ರಸಾದ್ ಸೂಚಿಸಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಕೋವಿಡ್ ಸೋಂಕು ತಡೆಗಟ್ಟುವ ಸಭೆಯಲ್ಲಿ ಮಾತನಾಡಿದ ಅವರು, ಪಡಿತರದಾರರ ಅಕ್ಕಿಯನ್ನು ಪಡೆಯುವ ಅಂಗಡಿಗಳ ಮಾಲೀಕರಿಗೂ ಎಚ್ಚರಿಕೆ ನೀಡಬೇಕು. ಯಾವುದೇ ಕಾರಣಕ್ಕೂ ಸರ್ಕಾರದಿಂದ ವಿತರಿಸುವ ಪಡಿತರ ಮಾರಾಟವಾಗಬಾರದು ಎಂದರು. ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರದಾರರು ಜಾಸ್ತಿ ಇದ್ದಲ್ಲಿ ಆಯಾ ಗ್ರಾಮಗಳ ಪಡಿತರದಾರರ ಪಟ್ಟಿ ತಯಾರು ಮಾಡಿಕೊಂಡು ಗೂಡ್ಸ್ ವಾಹನದಲ್ಲಿ ಪಡಿತರ ಒಯ್ದು ಗ್ರಾಮದ ಒಂದು ಭಾಗದಲ್ಲಿ ನಿಂತು ವಿತರಿಸಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಕೆಲ ಅಂಗಡಿಗಳಲ್ಲಿ ಪೆಟ್ರೋಲ್, ಮದ್ಯ ಮಾರಾಟ ಮಾಡುತ್ತಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಕಳ್ಳಭಟ್ಟಿ ಅಡ್ಡೆ ಮೇಲೆ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ, ಕಳ್ಳಭಟ್ಟಿ ತಯಾರಿಕೆಗೆ ಕಡಿವಾಣ ಹಾಕಬೇಕು. ಪೊಲೀಸ್ ಹಾಗೂ ಅಬಕಾರಿ ಇಲಾಖೆಯವರು ಈ ಬಗ್ಗೆ ಗಮನಹರಿಸಬೇಕೆಂದರು. ವೈದ್ಯರು ಮುಂದಿನ ಸಾಲಿನ ಯೋಧರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ವೈದ್ಯರೊಂದಿಗೆ ಎಲ್ಲಾ ಇಲಾಖಾ ಧಿಕಾರಿಗಳೂ ಕೈಜೋಡಿಸಬೇಕು ಎಂದರು.
ಬೇಕರಿಗಳಲ್ಲಿ ಕೇವಲ ಬ್ರೆಡ್, ಸ್ವೀಟ್ಸ್, ಬಿಸ್ಕೆಟ್ಸ್, ಬನ್ ಗಳನ್ನು ಮಾತ್ರ ಮಾರಾಟ ಮಾಡಬೇಕು. ಯಾವುದೇ ರೀತಿಯ ಕರಿದ ತಿಂಡಿಗಳನ್ನು ಮಾರುವಂತಿಲ್ಲ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬೇರೆ ಜಿಲ್ಲೆಯಿಂದ ಬೇರೆ ರಾಜ್ಯದಿಂದ ಬಂದವರ ಮಾಹಿತಿ ಕಲೆ ಹಾಕಿ ಅಂತಹವರ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಿ, ಮನೆಯಿಂದ ಹೊರಗಡೆ ತಿರುಗಾಡದಂತೆ ಎಚ್ಚರಿಕೆ ನೀಡಬೇಕೆಂದು ಸೂಚಿಸಿದರು.
ಪ.ಪಂ. ವ್ಯಾಪ್ತಿಯ ಎಲ್ಲಾ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿಸಬೇಕೆಂದರು. ತಾಲೂಕು ಆಡಳಿತ ವೈದ್ಯಾ ಧಿಕಾರಿ ಡಾ|ವೀರಪ್ರಸಾದ್ ಮಾತನಾಡಿ 1215 ಜನ ಹೋಂ ಕ್ವಾರಂಟೈನ್‌ನಲ್ಲಿದ್ದು, ಅದರಲ್ಲಿ 169 ಜನ ಅವ ಧಿಯನ್ನು ಮುಗಿಸಿದ್ದಾರೆ. 1046 ಜನ
ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ತಾಲೂಕಿಗೆ ಹೊರ ಜಿಲ್ಲೆಯಿಂದ ಬರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಅಂತಹವರ ಆರೋಗ್ಯ ತಪಾಸಣೆ ಮಾಡಿ, ಹೋಂ ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ತಿಳಿಸಿದರು. ತಹಶೀಲ್ದಾರ್ ಪರಮೇಶ್, ತಾ.ಪಂ. ಇಒ ನಯನ, ಸಿಪಿಐ ಸುರೇಶ್, ಶಿರಸ್ತೇದಾರ್ ನಾಗೇಂದ್ರನಾಯ್ಕ, ಮೆಸ್ಕಾಂ ಎಇಇ ಗೌತಮ್ ಇತರರು ಹಾಜರಿದ್ದರು.