ಎನ್.ಆರ್.ಪುರ: ತಾಲೂಕಿನ ಬಾಳೆ ಗ್ರಾಪಂ ವ್ಯಾಪ್ತಿಯ ಅಳೇಹಳ್ಳಿಯಿಂದ ಹೊಸೂರು, ನೆಲ್ಲಿಮಕ್ಕಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಬಾಳೆ ಗ್ರಾಪಂ ವ್ಯಾಪ್ತಿಯ ಅಳೇಹಳ್ಳಿ, ಹೊಸೂರು, ನೆಲ್ಲಿಮಕ್ಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 2 ಕಿ.ಮೀ.ಗೂ ಹೆಚ್ಚಿನ ದೂರದ ರಸ್ತೆ ಕಳೆದ 10 ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟಿದೆ. ಇದರಿಂದಾಗಿ, ಗ್ರಾಮಸ್ಥರು, ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರದ್ದಾರೆ.
ಈ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ. ಈ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಹೋಗಲು, ಮಕ್ಕಳು ಶಾಲಾ, ಕಾಲೇಜಿಗಾಗಿ ತಾಲೂಕು ಕೇಂದ್ರಕ್ಕೆ ಬರಲು ಈ ಹದಗೆಟ್ಟ ರಸ್ತೆಯಲ್ಲಿಯೇ ನಡೆದುಕೊಂಡು ಮುಖ್ಯ ರಸ್ತೆಗೆ ಬಂದು ಬಸ್ ಹಿಡಿದು ಹೋಗಬೇಕಾಗಿದೆ. ಈ ಗ್ರಾಮಕ್ಕೆ ಯಾವುದೇ ಬಸ್ ಸೌಕರ್ಯ ಕೂಡ ಇಲ್ಲದಿರುವುದರಿಂದ ಖಾಸಗಿ ವಾಹನ ಇಲ್ಲದವರಿಗೆ ನಡಿಗೆಯೇ ಸಾರಿಯಾಗಿದೆ ಎಂದು ಸಂಕಷ್ಟವನ್ನು ತೋಡಿಕೊಂಡಿದ್ದಾರೆ.
ರಸ್ತೆ ಕಿರಿದಾಗಿರುವುದರ ಜತೆಗೆ ರಸ್ತೆಯ ತುಂಬಾ ಗುಂಡಿಗಳು ಬಿದ್ದಿವೆ. ಹಿಂದೆ ರಸ್ತೆ ನಿರ್ಮಾಣಕ್ಕೆ ಬಳಸಿದ್ದ ಜಲ್ಲಿಕಲ್ಲು ಮೇಲೆದ್ದಿರುವುದರಿಂದ ನಡೆದುಕೊಂಡು ಹೋಗುವುದೇ ದುಸ್ತರವಾಗಿದೆ. ಖಾಸಗಿ ವಾಹನವಿದ್ದರೂ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಸುರಿದ ಭಾರೀ ಮಳೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಸಂಜೆ ವೇಳೆಗೆ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಆನೆ ಹಾವಳಿಯೂ ಇರುವುದರಿಂದ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಇದೆ. ಸಂಜೆ ನಂತರ ಗ್ರಾಮದ ವ್ಯಾಪ್ತಿಯಲ್ಲಿ ಸಂಚರಿಸುವುದಕ್ಕೆ ಭಯದ ವಾತಾವರಣವಿದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ರಸ್ತೆಯನ್ನು ಅಭಿವೃದ್ಧಿಪಡಿಸಲು ಶಾಸಕ ಟಿ.ಡಿ.ರಾಜೇಗೌಡರಿಗೆ ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ಹೊಸೂರು ಸುರೇಶ್. ಈ ಹಿಂದೆ ಕ್ಷೇತ್ರವನ್ನು ಪ್ರತಿನಿ ಧಿಸಿದ್ದವರಿಗೆ ರಸ್ತೆ ದುರಸ್ತಿಪಡಿಸುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮುಖ್ಯ ರಸ್ತೆ ಅಭಿವೃದ್ಧಿಪಡಿಸಲು ಗಮನ ಹರಿಸಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯನ್ನು ಸರ್ಕಾರ ಹಾಗೂ ಜನಪ್ರತಿನಿಧಿ ಗಳು ನಿರ್ಲಕ್ಷಿಸಿದ್ದಾರೆ ಎಂಬುದು ಗ್ರಾಮಸ್ಥರು ಆರೋಪವಾಗಿದೆ.