ಜಯತಿ ಎಂದರೆ “ಸರ್ವದಾ ಜಯಶೀಲವಾಗುತ್ತ ಇರುವ’ಎಂಬರ್ಥ ಬಿಂಬಿಸುವ ಇದು ಈ ಮಣ್ಣಿನ ನಾಟ್ಯಪ್ರಕಾರಗಳ “ಜಯತಿ’ಯಾಗಿ ನಾಟ್ಯ ಜಯಂತೀಯ ಸಂಭ್ರಮ ಆಚರಣೆಯಾಯಿತು .
ಭರತಮುನಿ ಪ್ರಣೀತವೆಂದು ಹೇಳಲಾಗುವ ನಾಟ್ಯಶಾಸ್ತ್ರದ ಪ್ರಕಾರ ವಿಶ್ವದ ಪ್ರಥಮ ನಾಟ್ಯಪ್ರದರ್ಶನವು ಅಮೃತಮಂಥನವೆಂಬ ಶಿರೋನಾಮೆಯೊಂದಿಗೆ ದೇವೇಂದ್ರನ ವಿಜಯ ಸೂಚಕವಾಗಿ ಭಾದ್ರಪದ ಶುದ್ಧ ದ್ವಾದಶಿಯ ಧ್ವಜಮಹದ ದಿನದಂದು ನಡೆಯಿತೆನ್ನುವುದೊಂದು ಅಭಿಮತ.ಅರ್ವಾಚೀನ ದಿನಗಳಲ್ಲಿ ಭಾರತೀಯ ನಾಟ್ಯಕಲೆಯನ್ನು ಔನತ್ಯಕ್ಕೇರಿಸುವ ಯತ್ನದಲ್ಲಿ ಕಲಾವಿದರುಗಳೆಲ್ಲಾ ಆ ತಿಥಿಯನ್ನು “ನಾಟ್ಯಜಯಂತೀ’ಯನ್ನಾಗಿ ಆಚರಿಸಿಕೊಡು ಬಂದರೆನ್ನಬಹುದು. ಜಯತಿ ಎಂದರೆ “ಸರ್ವದಾ ಜಯಶೀಲವಾಗುತ್ತ ಇರುವ’ಎಂಬರ್ಥ ಬಿಂಬಿಸುವ ಇದು ಈ ಮಣ್ಣಿನ ನಾಟ್ಯಪ್ರಕಾರಗಳ “ಜಯತಿ’ಯಾಗಿ ನಾಟ್ಯಜಯಂತೀಯ ಸಂಭ್ರಮದಾಚಾರಣೆಯಾಯಿತು.
ಇಂಥದ್ದೊಂದು ಆಚರಣೆಯ ಪರಿಪಾಠವನ್ನು ಬೆಳೆಸಿಕೊಂಡು ಬಂದವರು ನೃತ್ಯನಿಕೇತನ ಉಡುಪಿಯ ವಿ| ಲಕ್ಷ್ಮೀ ಗುರುರಾಜ…. ಇತ್ತೀಚೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಾಟ್ಯಜಯಂತೀ ಮತ್ತು ನೃತ್ಯೋತ್ಸವವನ್ನು ನಡೆಸಿದರು. ಪಲಿಮಾರು ಹಿರಿಯ ಯತಿವರ್ಯರಿಂದ ಉದ್ಘಾಟನೆಗೊಂಡ ನೃತ್ಯಸಂಜೆಯ ಪ್ರಥಮಾರ್ಧದಲ್ಲಿ ಮಂಗಳೂರಿನ ಭರತನಾಟ್ಯ ಕಲಾವಿದೆ ವಿ| ಪ್ರತಿಮಾ ಶ್ರೀಧರ್ ನೃತ್ಯ ಪ್ರಸ್ತುತಿಗೈದರು. ಮೊದಲಿಗೆ ದಂಡಾಯುಧಪಾಣಿ ಪಿಳ್ಳೆ„ಯವರ ಖರಹರಪ್ರಿಯ ರಾಗದ ಪದವರ್ಣಂ ಅನ್ನು ಆರಿಸಿಕೊಂಡು ಅದನ್ನು ಹದವಾಗಿ ನಿಭಾಯಿಸಿದರು. ಶಿವೆಯು ತನ್ನ ದೇವನಾದ ಸದಾಶಿವನು ಯೋಗಿಯಾಗಿ ಸ್ವರ್ಣಮಂಟಪದಲ್ಲಿ ನರ್ತಿಸುವುದನ್ನು ಕಂಡು ತನ್ನ ಸಖೀಯಲ್ಲಿ ಮನದ ವಿರಹ ಬೇಗೆಯನ್ನು ಪರಿಪರಿಯಾಗಿ ಬಣ್ಣಿಸುವ ಈ ವರ್ಣದ ನೃತ್ತ-ನೃತ್ಯದಲ್ಲಿ ಕಲಾವಿದೆ ಇನ್ನೊಂದಿನಿತು ಬಣ್ಣಗಳನ್ನು ಹರಡಬಹುದಿತ್ತೇನೋ.ಅನಂತರದ ಪ್ರಸ್ತುತಿಯಾಗಿ ಸಂತ ತುಳಸೀದಾಸರ ಅಭಿನಯಪ್ರಧಾನ ರಚನೆ ಶ್ರೀ ರಾಮಚಂದ್ರ ಕೃಪಾಲು ಭಜ್ಮನ್…’ನ್ನು ಪ್ರತಿಮಾ ಸಾಂಗಗೊಳಿಸಿದರು. ಬಹುಕಾಲ ನೆನಪಲ್ಲುಳಿಯುವಂಥ ಹಾಡುಗಾರಿಕೆಯ ವಿ. ಸುರಾಗ್ ಮಾಹೆ, ಪ್ರೌಢಿಮೆ ಮೆರೆದ ಮೃದಂಗದ ವಿ. ಸುರೇಶ ಬಾಬು ಕಣ್ಣೂರು ಮತ್ತು ಕೊಳಲಿನ ವಿ.ರಾಹುಲ್ ಕಣ್ಣೂರು ಹಾಗೂ ನಟ್ಟುವಾಂಗದಲ್ಲಿ ಪಕ್ವತೆ ತೋರಿದ ಗುರು ವಿ| ಮೋಹನ ಕುಮಾರ್ ಉಳ್ಳಾಲ ಉತ್ತಮ ಹಿನ್ನೆಲೆಯ ತಂಡಕ್ಕೆ ನಿದರ್ಶನವಾದರು.
ಉತ್ತರಾರ್ಧದಲ್ಲಿ ಉಡುಪಿಯವರೆ ಆದ ವಿ| ಶ್ರೀವಿದ್ಯಾ ಸಂದೇಶ್ ಆರಂಭದಲ್ಲಿ ಆಯ್ದುಕೊಂಡದ್ದು ವಿ.ಲಲಿತಾ ಶಿವಕುಮಾರ್ ಅವರ ಕೃತಿ ಕಪಾಲಿನಿ.ಕಪಾಲಿ ರಾಗದ ಈ ಪ್ರಸ್ತುತಿಯು ಶಂಕರನನ್ನು ಕಪಾಲಧರನನ್ನಾಗಿ ಬಿಂಬಿಸಿ ಆತನನ್ನು ಬಹುನಾಮ -ರೂಪಗಳಿಂದ ಕೊಂಡಾಡುತ್ತದೆ .ಇದನ್ನು ನಿರ್ವಹಿಸಿದ ಶ್ರೀವಿದ್ಯಾ ಅನಂತರ ಕೈಗೆತ್ತಿಕೊಂಡದ್ದು ವಾದಿರಾಜ ವಿರಚಿತ ಜಯತು ಭಕೊ¤àದ್ಧಾರವೆನ್ನುವ ಸಂಚಾರಿಪ್ರಧಾನ ನೃತ್ಯವನ್ನು. ರಾಮಾಯಣದ ಎರಡು ಪ್ರಸಂಗಗಳನ್ನು, ಅದರಲ್ಲೂ$ ವಿಶೇಷವಾಗಿ ಶಬರಿಯ ಪಾತ್ರದೊಳಗೆ ಸಂಚಾರಿಯ ಮೂಲಕ ಸಂಚರಿಸಿದ್ದು ಬಹುತೇಕವಾಗಿ ಯಶಸ್ವಿಯೆನಿಸಿತು. ಗುರುಗಳಾದ ವಿ| ಲಕ್ಷೀ ಗುರುರಾಜ್ ಅವರ ಸಮರ್ಥ ನಟ್ಟುವಾಂಗ ವಿ| ಚೈತನ್ಯ ಕೃಷ್ಣ ಅವರ ಮೃದಂಗ , ವಿ| ಶ್ರೀಧರ್ ಆಚಾರ್ ಅವರ ಹದವರಿತ ಕೊಳಲು ಮತ್ತು ವಿ| ಸಂಗೀತ ಬಾಲಚಂದ್ರರ ಸಲಿಲ ಶಾರೀರ ಕಲಾವಿದೆಗೆ ಉತ್ತಮ ಸಾಥ್ ಒದಗಿಸಿತು. ಶ್ರೀ ಹೃಷಿಕೇಶ ಪೀಠ ಪಲಿಮಾರು ಮಠ , ಶ್ರೀ ಕೃಷ್ಣ ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಭಾಗಿತ್ವದಲ್ಲಿ ನಾಟ್ಯಜಯಂತೀಯ ನೃತ್ಯಸಂಧ್ಯೆ ಮೂಡಿಬಂತು.
ಸುಧಾ ಭಟ್