ಬೆಂಗಳೂರು: ಸಂವಿಧಾನದಲ್ಲಿ ಎನ್‌ಆರ್‌ಐ ಕೋಟಾಗೆ ಅವಕಾಶವಿಲ್ಲ. ಸರ್ಕಾರಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಜಾರಿ ಮಾಡುವುದು ದೇಶ ವಿರೋಧಿ ಕ್ರಮ ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಆರೋಪಿಸಿದರು.
ಎಐಡಿಎಸ್‌ಒ, ಎಐಎಸ್‌ಇಸಿ, ಎಂಎಸ್‌ಸಿ, ಎಂಎಸ್‌ಎಸ್‌ಸಿ, ಡಿಎಸ್‌ಎಸ್‌ಸಿ ಸಮಿತಿಗಳು ಶನಿವಾರ ನಗರದ ಕೆಜಿಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೈದ್ಯಕೀಯ ವಿದ್ಯಾರ್ಥಿಗಳ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ವೈದ್ಯಕೀಯ ಹಾಗೂ ದಂತವೈದ್ಯಕೀಯ ಕಾಲೇಜಿನಲ್ಲಿ ಎನ್‌ಆರ್‌ಐ ಕೋಟಾ ಜಾರಿಗೆ ತರುತ್ತಿರುವ ರಾಜ್ಯ ಸರ್ಕಾರದ ಕ್ರಮ ಕಾನೂನು ಬಾಹಿರವಾಗಿದೆ. ಜನ ಸಾಮಾನ್ಯರ ಹಣದಿಂದ ಕಟ್ಟಿದ ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಕಾಲೇಜುಗಳ ಸೀಟುಗಳನ್ನು ಪರಕೀಯರಿಗೆ ಮಾರಾಟ ಮಾಡುವುದು ದೇಶವಿರೋಧಿ ನೀತಿ ಎಂದರು.
ದೇಶದಲ್ಲಿ 2000 ರೋಗಿಗೆ ಕೇವಲ ಒಬ್ಬ ವೈದ್ಯನಿದ್ದಾನೆ. ಎನ್‌ಆರ್‌ಐ ಕೋಟಾ ಜಾರಿಯಾದಲ್ಲಿ ಈ ಪ್ರಮಾಣ 5000 ರೋಗಿಗೆ ಒಬ್ಬ ವೈದ್ಯನೂ ಸಿಗದಿರುವ ಭಯಾನಕ ಪರಿಸ್ಥಿತಿ ನಿರ್ಮಾಣವಾಗಲಿದೆ. ರಾಜ್ಯ ಸರ್ಕಾರದ ಎನ್‌ಆರ್‌ಐ ಕೋಟಾ ಜಾರಿ ಮತ್ತು ಶೇ.300-800ರಷ್ಟು ಶುಲ್ಕ ಹೆಚ್ಚಳ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದರು.
ಐಎಂಎ ಚುನಾಯಿತ ರಾಜ್ಯಾಧ್ಯಕ್ಷ ಡಾ. ಮಧುಸೂಧನ್ ಕರಿಗನೂರು ಮಾತನಾಡಿ, ಭಾರತೀಯ ವೈದ್ಯಕೀಯ ಸಂಘ ರಾಜ್ಯ ಸರ್ಕಾರದ ಈ ನೀತಿಯನ್ನು ಸಂಪೂರ್ಣವಾಗಿ ಧಿಕ್ಕರಿಸುತ್ತದೆ. ವಿದ್ಯಾರ್ಥಿಗಳನ್ನು ಆದಾಯದ ಮೂಲವನ್ನಾಗಿಸಿಕೊಳ್ಳಲು ರಾಜಕಾರಣಿಗಳು ತಯಾರಾಗಿದ್ದಾರೆ ಎಂದು ದೂರಿದರು. ಅಖೀಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಕಾರ್ಯದರ್ಶಿ ಕೆ.ಉಮಾ, ವೈದ್ಯರಾದ ಡಾ. ಸುಧಾ ಕಾಮತ್, ಡಾ. ವಸುಧೇಂದ್ರ, ಡಾ. ಮೃದುಲ್ ಸರ್ಕಾರ್ ಮೊದಲಾದವರು ಇದ್ದರು.