Advertisement

ಸಂಸದರು ಮೌನ; ಟ್ವೀಟ್‌ಗೆ ಪ್ರತಿಕ್ರಿಯೆ ಇಲ್ಲ

07:00 AM Apr 08, 2018 | |

ಮಂಗಳೂರು: ಕುವೈಟ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಅನಿವಾಸಿ ಭಾರತೀಯ ಎಂಜಿನಿಯರ್‌ಗಳು ಅಲ್ಲಿನ ಆಡಳಿತ ವ್ಯವಸ್ಥೆ ರೂಪಿಸಿರುವ ಹೊಸ ಶೈಕ್ಷಣಿಕ ಅರ್ಹತೆಯ ನಿಯಮದಿಂದಾಗಿ ಎದುರಿಸುತ್ತಿರುವ ಸಮಸ್ಯೆಗೆ ಇನ್ನೂ ಪರಿಹಾರ ಲಭಿಸಿಲ್ಲ; ಹಾಗಾಗಿ ಅಲ್ಲಿರುವ ಭಾರತೀಯ ಎಂಜಿನಿಯರ್‌ಗಳ ಅತಂತ್ರ ಸ್ಥಿತಿ ಮುಂದುವರಿದಿದೆ. 

Advertisement

ಸಮಸ್ಯೆ ಪರಿಹಾರಕ್ಕೆ ಭಾರತ ಸರಕಾರ ಮಧ್ಯ ಪ್ರವೇಶಿಸುವಂತೆ ಕುವೈಟ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಭಾರತೀಯ ಎಂಜಿನಿಯರ್‌ಗಳ ವಿವಿಧ ಸಂಘಟನೆಗಳು ಮನವಿಗಳ ಮೇಲೆ ಮನವಿ ಸಲ್ಲಿಸಿ, ಟ್ವೀಟ್‌ ಮಾಡಿ ಹಾಗೂ ಕೇಂದ್ರ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಕುವೈಟ್‌ ಸರಕಾರದ ಜತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿಲ್ಲ.

38 ದಿನವಾದರೂ ಟ್ವೀಟ್‌ಗೆ ಪ್ರತಿಕ್ರಿಯೆ ಇಲ್ಲ 
ಈ ವಿಷಯದಲ್ಲಿ ತತ್‌ಕ್ಷಣ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕದ ಕರಾವಳಿಯ ಅನಿವಾಸಿ ಎಂಜಿನಿಯರುಗಳ ಪರವಾಗಿ ಮಂಗಳೂರಿನ ಎಂಜಿನಿಯರ್‌ ಮೋಹನ್‌ದಾಸ್‌ ಕಾಮತ್‌ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಮಾ. 16ರಂದು ಟ್ವೀಟ್‌ ಮಾಡಿದ್ದರು. ಆದರೆ ಈಗ 38 ದಿನ ಕಳೆದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. 

ಕೇರಳ ವಿಧಾನ ಸಭೆಯಲ್ಲಿ ವಿಷಯ ಪ್ರಸ್ತಾಪಗೊಂಡ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸರಕಾರವು ನೂತನ ಶೈಕ್ಷಣಿಕ ಅರ್ಹತೆಯ ನಿಯಮಾವಳಿ ಕುರಿತು ಸ್ಪಷ್ಟೀಕರಣ ನೀಡುವಂತೆ ಕುವೈಟ್‌ನಲ್ಲಿರುವ ಭಾರತೀಯ ರಾಯಭಾರಿಗೆ ಪತ್ರ ಬರೆದಿದೆ. ಅಲ್ಲದೆ ಕೇರಳದ ಸಂಸದರ ನಿಯೋಗವು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಲಿಖೀತ ಮನವಿ ಸಲ್ಲಿಸಿದೆ.

ಪ್ರೊಗ್ರೆಸಿವ್‌ ಪ್ರೊಫೆಶನಲ್‌ ಎಂಜಿನಿಯರ್ ಫೋರಂ ಕುವೈಟ್‌ನ ಎ.ಆರ್‌. ಶಮ್ನಾಡ್‌, ಕುವೈಟ್‌ ಎಂಜಿನಿಯರ್ ಫೋರಂನ ಜಿ. ಶ್ರೀಕುಮಾರ್‌ ಮತ್ತು ತಮಿಳು ನಾಡು ಎಂಜಿನಿಯರ್ ಫೋರಂ ಕುವೈಟ್‌ನ ಪಿ. ಸೇತು ಮಾಧವನ್‌ ಅವರನ್ನೊಳಗೊಂಡ ನಿಯೋಗವು ಕೇರಳದ ಸಂಸದರಾದ ಡಾ| ಪಿ.ಕೆ. ಬಿಜು, ಎಂ.ಬಿ. ರಾಜೇಶ್‌ ಅವರ ನೇತೃತ್ವದಲ್ಲಿ ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಮತ್ತು ವಿದೇಶಾಂಗ ವ್ಯವಹಾರಗಳ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿ ತರೂರ್‌ ಅವರನ್ನು ಎ. 4ರಂದು ದಿಲ್ಲಿಯಲ್ಲಿ ಭೇಟಿ ಮಾಡಿ ಕುವೈಟ್‌ನಲ್ಲಿರುವ ಭಾರತೀಯ ಎಂಜಿನಿಯರುಗಳ ಪರಿಸ್ಥಿತಿಯನ್ನು ವಿವರಿಸಿದ್ದಾರೆ. 

Advertisement

ಕೇಂದ್ರ ಸರಕಾರ ಪ್ರಯತ್ನ
ಬಿಕ್ಕಟ್ಟು ಬಗೆಹರಿಸಲು ಕೇಂದ್ರ ಸರಕಾರವು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಿದೆ. ಎಂಜಿನಿಯರುಗಳ ಶೈಕ್ಷಣಿಕ ಅರ್ಹತೆಗೆ ಎನ್‌ಬಿಎ ಬದಲಾಗಿ ಎಐಸಿಟಿಇ ಮಾನ್ಯತೆಯನ್ನು ಅಧಿಕೃತ ಎಂಬುದಾಗಿ ಪರಿಗಣಿಸುವಂತೆ ಕುವೈಟ್‌ ಸರಕಾರವನ್ನು ಕೋರಲಾಗುವುದು ಎಂದು ಸಚಿವ ಜಾಬ್ಡೇಕರ್‌ ಭರವಸೆ ನೀಡಿದ್ದರು. ತಾನು ಕುವೈಟ್‌ ಎಂಬೆಸಿ ಜತೆ ಸಂಪರ್ಕದಲ್ಲಿರುವುದಾಗಿ ಹಾಗೂ ಕೇಂದ್ರ ಸರಕಾರದಿಂದಲೂ ನಿರಂತರ ವಿಷಯಾನುಸರಣೆ ಮಾಡಿಸುವುದಾಗಿ ಶಶಿ ತರೂರ್‌ ಆಶ್ವಾಸನೆ ನೀಡಿದ್ದರು. ಆದರೆ ಇದು ವರೆಗೆ ಸಮಸ್ಯೆ ಬಗೆಹರಿದಿಲ್ಲ. 

ಕುವೈಟ್‌ನಲ್ಲಿ ಭಾರತೀಯ ಎಂಜಿನಿಯರ್‌ಗಳು ಅನುಭವಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರಕಾರವು ಕೂಡಲೇ ಮಧ್ಯ ಪ್ರವೇಶಿಸಿ ಕುವೈಟ್‌ ಸರಕಾರದ ಉನ್ನತ ಶಿಕ್ಷಣ ಸಚಿವಾಲಯ ಜತೆ ಮಾತುಕತೆ ನಡೆಸಬೇಕೆಂದು ಕುವೈಟ್‌ನ ಭಾರತೀಯ ಪ್ರವಾಸಿ ಪರಿಷತ್ತು ಮತ್ತು ಸೇವಾ ದರ್ಶನ್‌ ಕುವೈಟ್‌ ಸಂಸ್ಥೆಗಳ ಪ್ರತಿನಿಧಿಗಳು ಎ. 5ರಂದು ಕೇಂದ್ರ ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಕೆ.ಜೆ. ಅಲೊನ್ಸ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಸಚಿವ ಕೆ.ಜೆ. ಅಲೊ#àನ್ಸ್‌ ಅವರು ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಪತ್ರ ಬರೆದು ಭಾರತೀಯ ಎಂಜಿನಿಯರ್‌ಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದಾರೆ. 

ಕರ್ನಾಟಕದ ಕಡೆಯಿಂದ ಸ್ಪಂದನೆ ಶೂನ್ಯ 
ಕೇರಳ, ತಮಿಳುನಾಡು ರಾಜ್ಯಗಳ ಸಂಸದರು ಕುವೈಟ್‌ನಲ್ಲಿರುವ ತಮ್ಮ ರಾಜ್ಯಗಳ ಎಂಜಿನಿಯರುಗಳ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಬಿಕ್ಕಟ್ಟು ಬಗೆ ಹರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕರ್ನಾಟಕದ ಸಂಸದರಾಗಲಿ ರಾಜ್ಯ ಸರಕಾರವಾಗಲಿ ತಮ್ಮ ಸಮಸ್ಯೆಗೆ ಸ್ಪಂದಿಸದಿರುವ ಬಗ್ಗೆ ಕುವೈಟ್‌ನಲ್ಲಿರುವ ಕರ್ನಾಟಕದ ಎಂಜಿನಿಯರುಗಳು ವಿಷಾದ ವ್ಯಕ್ತಪಡಿಸಿದ್ದಾರೆ.  ಕರ್ನಾಟಕದಿಂದ 3,000ಕ್ಕೂ ಅಧಿಕ ಎಂಜಿನಿಯರುಗಳು ಕುವೈಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತಮ್ಮ ಪರವಾಗಿ ಕರ್ನಾಟಕ ಸರಕಾರ ಮತ್ತು ಇಲ್ಲಿನ ಜನ ಪ್ರತಿನಿಧಿಗಳು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕೆಂದು ಅವರು ಮನವಿ ಮಾಡಿದ್ದಾರೆ. 

ಕುವೈಟ್‌ ಉದ್ಯೋಗ ಮರೀಚಿಕೆ? 
ಇತ್ತೀಚೆಗಿನ ಅಂಕಿ ಅಂಶಗಳ ಪ್ರಕಾರ ಕುವೈಟ್‌ನಲ್ಲಿ ವಿದೇಶಿಯರಿಗೆ ಉದ್ಯೋಗಾವಕಾಶ ಕಡಿಮೆಯಾಗುತ್ತಿದ್ದು, ಅಲ್ಲಿನ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಶೇ. 73.7ರಷ್ಟು ಮಂದಿ ಕುವೈಟ್‌ ದೇಶದ ಪ್ರಜೆಗಳೇ ಇದ್ದಾರೆ ಎಂದು ವರದಿಯೊಂದು ತಿಳಿಸಿದೆ. ಕುವೈಟ್‌ನ ಸಾರ್ವಜನಿಕ ರಂಗದ ಉದ್ಯಮ ಸಂಸ್ಥೆಗಳಲ್ಲಿ 3,90,000 ಉದ್ಯೋಗಿಗಳಿದ್ದು, ಅವರಲ್ಲಿ ಶೇ. 73.7ರಷ್ಟು ಕುವೈಟ್‌ ಪ್ರಜೆಗಳಾಗಿದ್ದು, ಶೇ. 26.3ರಷ್ಟು ಮಾತ್ರ ವಿದೇಶೀಯರು ಎಂಬುದಾಗಿ ಕುವೈಟ್‌ನ ಸೆಂಟ್ರಲ್‌ ಸ್ಟಾಟಿಸ್ಟಿಕಲ್‌ ಬ್ಯೂರೋ ತನ್ನ ವರದಿಯಲ್ಲಿ ತಿಳಿಸಿದೆ. 2017ಕ್ಕೆ ಹೋಲಿಸಿದರೆ ಈ ವರ್ಷ ಅಲ್ಲಿ ಸ್ವದೇಶೀ ಉದ್ಯೋಗಿಗಳ ಸಂಖ್ಯೆ ಶೇ. 17ರಷ್ಟು ಹೆಚ್ಚಳವಾಗಿದೆ. 2016ರಲ್ಲಿ ಕುವೈಟ್‌ನಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡ ವಿದೇಶೀಯರ ಸಂಖ್ಯೆ ಶೇ. 4.8ರಷ್ಟಿದ್ದರೆ, 2017ರಲ್ಲಿ ಈ ಸಂಖ್ಯೆ ಶೇ. 1.9ರಷ್ಟು ಮಾತ್ರ ಎಂದು ವರದಿ ವಿವರಿಸಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕುವೈಟ್‌ ನೌಕರಿ ಎಂಬುದು ವಿದೇಶಿಯರಿಗೆ ಮರೀಚಿಕೆ ಆಗಬಹುದೇ ಎಂಬ ಅತಂಕವೂ ಇದೆ.

ಪೂರ್ತಿ ಹತಾಶರಾಗಿದ್ದಾರೆ
ಕುವೈಟ್‌ ಉದ್ಯೋಗವನ್ನು ನಂಬಿ ಫ್ಲ್ಯಾಟ್‌, ಮನೆ ಕಟ್ಟಿಸಿದ ಸಾಕಷ್ಟು ಮಂದಿ ಎಂಜಿನಿಯರುಗಳಿದ್ದಾರೆ. 15-20 ವರ್ಷಗಳಿಂದ ಕುವೈಟ್‌ನಲ್ಲಿರುವವರು ಪತ್ನಿ ಮಕ್ಕಳೊಂದಿಗೆ ವಾಸ್ತವ್ಯವಿದ್ದು, ಈಗ ಏಕಾಏಕಿ ಸ್ವದೇಶಕ್ಕೆ ಹೋಗಿ ಎಂದರೆ ಹೇಗೆ ಎಂದು ಸಂಪೂರ್ಣ ಹತಾಶರಾಗಿದ್ದಾರೆ ಎಂದು ಕುವೈಟ್‌ನಲ್ಲಿರುವ ಮಂಗಳೂರಿನ ಎಂಜಿನಿಯರ್‌ ಮೋಹನ್‌ದಾಸ್‌ ಕಾಮತ್‌ ಹೇಳುತ್ತಾರೆ. 
ಎ. 4ರಂದು ಕುವೈಟ್‌ನಲ್ಲಿರುವ ಭಾರತೀಯ ಎಂಜಿನಿಯರುಗಳ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಕುವೈಟ್‌ನಲ್ಲಿರುವ ಭಾರತದ ರಾಯಭಾರಿಯನ್ನು ಭೇಟಿ ಮಾಡಿ ಮಾ. 11ರ ಸುತ್ತೋಲೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ. ಭಾರತದ ರಾಯಭಾರಿ ಸಮಸ್ಯೆಯನ್ನು ಬಗೆಹರಿಸಲು ಸರ್ವ ಪ್ರಯತ್ನ ಮಾಡಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ. 

ವಾಸ್ತವ್ಯ ಪರವಾನಿಗೆಯ ಅವಧಿ ಮುಕ್ತಾಯಗೊಂಡ ಹಾಗೂ ಮುಂದಿನ 6 ತಿಂಗಳಲ್ಲಿ ವಾಸ್ತವ್ಯ ಪರವಾನಿಗೆ ಮುಕ್ತಾಯಗೊಳ್ಳುವ ಭಾರತೀಯ ಎಂಜಿನಿಯರ್‌ಗಳಮಾಹಿತಿಯನ್ನು ತತ್‌ಕ್ಷಣ ಎಂಬೆಸಿಗೆ ನೀಡುವಂತೆ ಸೂಚಿಸಿದ್ದಾರೆ. ಆದರೆ ಸಮಸ್ಯೆ ಪರಿಹಾರ
ವಾಗುವ ಲಕ್ಷಣಗಳು ಕಾಣುತ್ತಿಲ್ಲ. ಭಾರತ ಸರಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸದೆ ಬಿಕ್ಕಟ್ಟು ನಿವಾರಣೆಯಾಗದು ಎನ್ನುತ್ತಾರೆ ಮೋಹನ್‌ದಾಸ್‌ ಕಾಮತ್‌. 

ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next